BIG BREAKING : ಕರುನಾಡ ಕುರುಕ್ಷೇತ್ರಕ್ಕೆ ಮಹೂರ್ತ ಫಿಕ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Karnataka-Election

ನವದೆಹಲಿ ,ಮಾ.27- ಕರ್ನಾಟಕದ ಜನತೆ ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದ 15ನೇ ವಿಧಾನಸಭೆ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಮೇ 12ರಂದು ಮತದಾನ ನಡೆದು 15ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಿದ್ದು , ಯಾವುದೇ ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷವೊಡ್ಡುವಂತಹ ಆಶ್ವಾಸನೆಗಳನ್ನು ಘೋಷಣೆ ಮಾಡುವುದಾಗಲಿ ಇಲ್ಲವೇ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡುವುದು ನಿಷಿದ್ಧ . ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮೇ 12ರಂದು ಮತದಾನ ನಡೆಯಲಿದೆ. ಅಗತ್ಯವಿದ್ದರೆ ಮರು ಮತದಾನ ನಡೆದು ಮೇ 15ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ನವದೆಹಲಿಯಲ್ಲಿಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓಂಪ್ರಕಾಶ್ ರಾವತ್ ಪತ್ರಿಕಾ ಗೋಷ್ಠಿಯಲ್ಲಿ, ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಆಯೋಗ ಮುಹೂರ್ತವನ್ನು ನಿಗದಿಪಡಿಸಿರುವುದರಿಂದ ಕರ್ನಾಟಕ ಮಹಾಸಮರಕ್ಕೆ ವಿದ್ಯುಕ್ತವಾಗಿ ವೇದಿಕೆ ಸಜ್ಜಾಗಿದೆ. ಏ.17ರಂದು ಅಧಿಸೂಚನೆ ಹೊರಡಲಿದ್ದು , ಅಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ.

ಏ.24ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಏ.25 ನಾಮಪತ್ರಗಳ ಪರಿಶೀಲನೆ ಹಾಗೂ ಏ.27 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ ಎಂದು ರಾವತ್ ವಿವರಿಸಿದರು.  ಮೇ 12ರಂದು ಮತದಾನ ನಡೆಯಲಿದ್ದು, 15ರಂದು 224 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಏಕಕಾಲದಲ್ಲಿ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.

ಇಂದಿನಿಂದಲೇ ನೀತಿ ಸಂಹಿತೆ:
ರಾಜ್ಯದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಮತದಾರರಿಗೆ ಯಾವುದೇ ಪಕ್ಷಗಳು ಆಮಿಷವೊಡ್ಡುವಂತಹ ಭರವಸೆಗಳನ್ನು ಇಲ್ಲವೆ ಆಶ್ವಾಸನೆಗಳನ್ನು ನೀಡುವಂತಿಲ್ಲ.  ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನ ನಡೆಯಲು ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಅಭ್ಯರ್ಥಿಗಳ ಪರ ಜಾಹಿರಾತು ಪ್ರಕಟಿಸುವುದಾದರೆ ಆಯೋಗದ ಅನುಮತಿ ಪಡೆಯಬೇಕು. ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವವರೆಗೂ ಯಾವುದೇ ರೀತಿಯ ಸಮೀಕ್ಷೆಗಳನ್ನು ನಡೆಸುವುದಾಗಲಿ ಇಲ್ಲವೇ ಅದನ್ನು ಪ್ರಕಟಿಸುವಂತೆಯೂ ಇಲ್ಲ.

ವೆಚ್ಚಕ್ಕೆ ಕಡಿವಾಣ:
ಚುನಾವಣೆಯಲ್ಲಿ ಹೆಚ್ಚುತ್ತಿರುವ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಆಯೋಗ, ಓರ್ವ ಅಭ್ಯರ್ಥಿ 28 ಲಕ್ಷದವರೆಗೆ ಮಾತ್ರ ಖರ್ಚು ಮಾಡಲು ಅವಕಾಶವಿರುತ್ತದೆ. ಬ್ಯಾನರ್, ಬಂಟಿಂಗ್ಸ್ , ಕಟೌಟ್‍ಗಳನ್ನು ಬಳಸಬೇಕಾದರೆ ಪ್ರತಿ ಅಭ್ಯರ್ಥಿಯೂ ಕಡ್ಡಾಯವಾಗಿ ಆಯೋಗದ ಅನುಮತಿಯನ್ನು ಪಡೆಯಬೇಕು. ರಾಜ್ಯದಲ್ಲಿ ಈ ಬಾರಿ 4,96,82,356 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಜ್ಯಾದ್ಯಂತ ಒಟ್ಟು 56,696 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2013ರ ಚುನಾವಣೆಗೆ ಹೋಲಿಸಿದರೆ ಮತಗಟ್ಟೆಗಳ ಸಂಖ್ಯೆಯ ಪ್ರಮಾಣ ಶೇ.10ರಷ್ಟು ಏರಿಕೆಯಾಗಿದೆ. ಈ ಬಾರಿ ವಿಶೇಷವೆಂದರೆ ದುರ್ಬಲ ವರ್ಗದ ಮಹಿಳೆಯರು ತಮ್ಮ ಹಕ್ಕು ಚಲಾಯಿಸಲು ಒಟ್ಟು 450 ವಿಶೇಷ ಮತಗಟ್ಟೆಗಳನ್ನು ರಚಿಸಲಾಗಿದೆ.

ಕಾನೂನು ಸುವ್ಯವಸ್ಥೆ :
ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ಎಲ್ಲ ರೀತಿಯ ಸಿದ್ದತೆಗಳನ್ನು ಪೂರ್ಣಗೊಳಿಸಿದೆ. ಭದ್ರತೆಗಾಗಿ ಸಿಆರ್‍ಪಿಎಫ್, ಸಿಐಎಸ್‍ಎಫ್ ಹಾಗೂ ಸ್ಥಳೀಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುವುದು. ಚುನಾವಣಾ ದಿನಾಂಕ ಘೋಷಣೆಯಾಗಿರುವುದರಿಂದ ವಿದ್ಯಾರ್ಥಿಗಳ ಪರೀಕ್ಷೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಲಾಗಿದೆ. ಪರೀಕ್ಷೆ ಹಾಗೂ ಮೌಲ್ಯಮಾಪನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನಾವು ತೊಂದರೆಯನ್ನು ತೆಗೆದುಕೊಂಡಿದ್ದೇವೆ. ಪೋಷಕರು, ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಪಪಡಿಸಿದರು.

ಕರ್ನಾಟಕ ಚುನಾವಣೆ ಮಹೂರ್ತ :
ಅಧಿಸೂಚನೆ- ಏ.17
ನಾಮಪತ್ರ ಸಲ್ಲಿಕೆ- ಏ.18
ನಾಮಪತ್ರ ಪರಿಶೀಲನೆ- ಏ.25
ನಾಮಪತ್ರ ವಾಪಸ್ – ಏ.27
ಮತದಾನ – ಮೇ 12
ಮತ ಎಣಿಕೆ- ಮೇ 15

> ಒಟ್ಟು ಮತದಾರರು – 4,96,82,356
> ಮಹಿಳಾ ಮತದಾರರು -2,41,35,342
> ಪುರುಷ ಮತದಾರರು -2,48,65,448
> ಅತಿ ದೊಡ್ಡ ವಿಧಾನಸಭಾ ಕ್ಷೇತ್ರ
> ಬೆಂಗಳೂರು ದಕ್ಷಿಣ – ಐದು ಲಕ್ಷಕ್ಕೂ ಅಧಿಕ

Facebook Comments

Sri Raghav

Admin