ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದ ಸಿದ್ದರಾಮಯ್ಯಗೆ ಪ್ರತಾಪ್‍ ಸಿಂಹ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-Pratap-Simha-0

ಬೆಂಗಳೂರು, ಮಾ 28-ಜೆಡಿಎಸ್, ಬಿಜೆಪಿ ಬಿ ಟೀಂ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಸಂಸದ ಪ್ರತಾಪ್‍ಸಿಂಹ, ಬಿಬಿಎಂಪಿಯಲ್ಲಿ ಜೆಡಿಎಸ್ ಜತೆ ಕೈಜೋಡಿಸಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದ ಜನ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಉಪಚುನಾವಣೆಗಳಲ್ಲೂ ಜೆಡಿಎಸ್ ಜೊತೆ ಕೈಜೋಡಿಸಿರುವುದು ಯಾರು ಎನ್ನುವುದು ಕೂಡ ಜನರಿಗೆ ಗೊತ್ತಿದೆ. ಸಿದ್ದರಾಮಯ್ಯ ಅವರ ಮಾತಿಗೆ ಅಷ್ಟೊಂದು ಮನ್ನಣೆ ನೀಡುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಯುವಜಾಗೃತಿ ಅಭಿಯಾನ: ನಾಳೆಯಿಂದ ಏ.5 ರವರೆಗೆ ಕರುನಾಡ ಯುವಜಾಗೃತಿ ಅಭಿಯಾನ ನಡೆಸುವ ಮೂಲಕ ಸರ್ಕಾರದ ವೈಫಲ್ಯಗಳನ್ನು ಪ್ರತಿ ಗ್ರಾಮಕ್ಕೂ ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದರು. ಎಂಟು ದಿನಗಳ ಕಾಲ ಪ್ರತಿ ಬೂತ್ ಮಟ್ಟದಲ್ಲೂ ಬೈಕ್ ರ್ಯಾಲಿ ಅಭಿಯಾನ ನಡೆಸಿ ಸರ್ಕಾರದ ಅಕ್ರಮಗಳ ಕುರಿತ ಕರಪತ್ರಗಳನ್ನು ಹಂಚಲಾಗುವುದು ಎಂದರು. ಪಿಎಫ್‍ಐ ಮತ್ತು ಕೆಎಫ್‍ಡಿ ವಿರುದ್ಧ ಪ್ರಕರಣ ಹಿಂಪಡೆದ ಸರ್ಕಾರದ ಧೋರಣೆ ಕುರಿತು ಅಭಿಯಾನ ಕೈಗೊಳ್ಳಲಾಗಿದ್ದು, ಪ್ರತಿ ಗ್ರಾಮದಲ್ಲೂ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು.

ಯುವ ಮೋರ್ಚಾದಿಂದ ಯಾರಿಗೂ ಟಿಕೆಟ್ ಬೇಡಿಕೆಯನ್ನು ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಯಾರೋ ಒಬ್ಬ ನಾಯಕನ ಮಗ ಎನ್ನುವ ಕಾರಣಕ್ಕಾಗಿ ನಮ್ಮಲ್ಲಿ ಟಿಕೆಟ್ ನೀಡುವ ಸಂಪ್ರದಾಯ ಇಲ್ಲ. ನಮ್ಮ ನಾಯಕರು ಸೂಕ್ತ ಅಭ್ಯರ್ಥಿಗಳನ್ನಷ್ಟೇ ಆಯ್ಕೆ ಮಾಡುತ್ತಾರೆ ಎಂದು ಹೇಳಿದರು. ವದಂತಿ ವಿರುದ್ದ ಅಸಮಾಧಾನ: 2019ರ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಪ್ರಮೋದಾ ದೇವಿ ಒಡೆಯರ್‍ಗೆ ಟಿಕೆಟ್ ನೀಡಲಾಗುತ್ತದೆ ಎಂಬ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪ್ರತಾಪ್‍ಸಿಂಹ, ಸಂಸದನಾಗಿ ನನ್ನ ಕೆಲಸವನ್ನು ಪ್ರಧಾನಿಯವರೇ ಮೆಚ್ಚಿಕೊಂಡಿದ್ದಾರೆ ಎಂದರು.

ನಾನು ಹಾಲಿ ಸಂಸದ ಇನ್ನೂ ಇದ್ದೇನೆ. ಪ್ರಸಕ್ತ ಎದುರಾಗಿರುವ ವಿಧಾನಸಭೆ ಚುನಾವಣೆ ಬಗ್ಗೆ ಮಾತನಾಡದೆ ಲೋಕಸಭೆ ಚುನಾವಣೆ ಬಗ್ಗೆ ಮಾತನಾಡುವುದನ್ನು ನೋಡಿದರೆ ಆಶ್ಚರ್ಯವಾಗುತ್ತಿದೆ. ನಮ್ಮಲ್ಲಿ ಯಾರು ಯಾರ ಮಗನಿಗೂ ಟಿಕೆಟ್ ನೀಡುವ ಸಂಸ್ಕøತಿ ಇಲ್ಲ. ಯಡಿಯೂರಪ್ಪ, ಈಶ್ವರಪ್ಪ, ರಾಮಚಂದ್ರಗೌಡರ ಮಕ್ಕಳಿಗೆ ಟಿಕೆಟ್ ಕೊಡಬೇಕೇ, ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದು ಪಕ್ಷದ ಹೈಕಮಾಂಡ್ ಎಂದು ಹೇಳಿದರು.
ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯದಲ್ಲಿ ನಡೆಸಿರುವ ಸರ್ವೇ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ. ಇದನ್ನೇ ಯಡಿಯೂರಪ್ಪ ಕೂಡ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಇಂತಹ ಊಹಾಪೋಹಗಳಿಗೆ ಮನ್ನಣೆ ಬೇಡ. ಯುವಮೋರ್ಚಾ ಸಹ ಇಷ್ಟೇ ಟಿಕೆಟ್ ಕೊಡಿ ಎಂದು ಒತ್ತಾಯ ಮಾಡಿಲ್ಲ. ಪಕ್ಷದ ನಾಯಕರೇ ಗುರುತಿಸಿ ಅರ್ಹರಿಗೆ ಟಿಕೆಟ್ ನೀಡುತ್ತಾರೆ ಎಂದರು.

Facebook Comments

Sri Raghav

Admin