ಸದ್ದಿಲ್ಲದೇ ನಡೆಯುತ್ತಿದೆ ‘ಆಪರೇಷನ್ ಕಮಲ’ಕ್ಕೆ ಪ್ಲಾನ್

ಈ ಸುದ್ದಿಯನ್ನು ಶೇರ್ ಮಾಡಿ

Operation-Kamala-BJP
ಬೆಂಗಳೂರು, ಮಾ.28- ಶತಾಯಗತಾಯ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಅನ್ಯ ಪಕ್ಷಗಳ ಮುಖಂಡರನ್ನು ಸೆಳೆಯುವ ಆಪರೇಷನ್ ಕಮಲಕ್ಕೆ ಸದ್ದಿಲ್ಲದೆ ಕೈ ಹಾಕಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಅಸಮಾಧಾನಗೊಂಡಿರುವ ಕೆಲವು ಶಾಸಕರು ಬಿಜೆಪಿಯತ್ತ ಮುಖ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಕರಾವಳಿ ಜಿಲ್ಲೆಯ ಪ್ರಭಾವಿ ಉದ್ಯಮಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಯುವ ಸಚಿವರೊಬ್ಬರು ನಿನ್ನೆ ನವದೆಹಲಿಯಲ್ಲಿ ರಾಷ್ಟ್ರೀಯ ಬಿಜೆಪಿ ನಾಯಕರೊಬ್ಬರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ನಾನು ಬಿಜೆಪಿಗೆ ಹೋಗಬೇಕೆಂದರೆ ಅಲ್ಲಿ ಕೆಲವರು ನನಗೆ ಅಡ್ಡಿಯಾಗಿದ್ದರು ಎಂದು ಹೇಳಿದ್ದರು. ಈಗ ಬಿಜೆಪಿ ನಾಯಕರನ್ನು ಭೇಟಿ ಮಾಡಿರುವುದು ಬಿಜೆಪಿ ಸೇರ್ಪಡೆಯ ವದಂತಿಗೆ ಮತ್ತೆ ರೆಕ್ಕೆಪುಕ್ಕಗಳು ಬಂದಿವೆ. ಆದರೆ, ಇವರಿಗೆ ಸ್ಥಳೀಯ ಮಟ್ಟದಲ್ಲಿ ಟಿಕೆಟ್ ನೀಡಲು ಪಕ್ಷದ ಕೆಲ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಪಕ್ಷ ಸೇರ್ಪಡೆ ವಿಳಂಬವಾಗಿದೆ ಎನ್ನಲಾಗುತ್ತಿದೆ.

ಇದೇ ರೀತಿ ಬೆಂಗಳೂರಿನ ಪ್ರಭಾವಿ ಸಚಿವರೊಬ್ಬರು ಕೂಡ ಬಿಜೆಪಿ ಸೇರ್ಪಡೆ ಮತ್ತೆ ವೇಗ ಪಡೆದುಕೊಂಡಿದೆ. ಪಕ್ಷದಲ್ಲಿ ತಮ್ಮನ್ನು ತಮ್ಮ ಸಮುದಾಯದವರೇ ಕಡೆಗಣಿಸುತ್ತಿದ್ದಾರೆ ಎಂದು ಬೇಸರಗೊಂಡಿರುವ ಈ ಸಚಿವರು ಬಿಜೆಪಿ ಸೇರ್ಪಡೆಗೆ ಒಲವು ತೋರಿದ್ದಾರೆ. ಈಗಾಗಲೇ ರಾಷ್ಟ್ರೀಯ ನಾಯಕರ ಜತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಎರಡು ಕ್ಷೇತ್ರಗಳಿಗೆ ಟಿಕೆಟ್ ನೀಡುವುದಾದರೆ ಪಕ್ಷಕ್ಕೆ ಬರುವುದಾಗಿ ಆಶ್ವಾಸನೆ ನೀಡಿದ್ದಾರೆ.

ಇನ್ನು ಕಲಬುರ್ಗಿ ಮೂಲದ ಹಿಂದುಳಿದ ಸಮುದಾಯದ ಪ್ರಭಾವಿ ಶಾಸಕರೊಬ್ಬರು ಕೂಡ ಬಿಜೆಪಿಗೆ ಸೇರ್ಪಡೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆರು ಬಾರಿ ಶಾಸಕರಾಗಿರುವ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳದೆ ತಮ್ಮನ್ನು ಅವಮಾನಿಸಿದ್ದಾರೆ ಎಂದು ಮನನೊಂದಿರುವ ಈ ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇದೇ ರೀತಿ ಇನ್ನೂ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಕೆಲ ಮುಖಂಡರು ಬಿಜೆಪಿ ಕಡೆ ವಾಲಲಿದ್ದಾರೆ.

Facebook Comments

Sri Raghav

Admin