ಸಿಬಿಎಸ್‍ಇ ಪ್ರಶ್ನೆ ಪತ್ರಿಕೆ ಸೋರಿಕೆ : ಕಂಟ್ರೋಲರ್ ಸೇರಿ 50ಕ್ಕೂ ಹೆಚ್ಚು ಮಂದಿ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

Question-Papers-Whatsapp

ನವದೆಹಲಿ, ಮಾ.30-ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್‍ಸಿ)ಯ 10ನೇ ಮತ್ತು 12ನೇ ತರಗತಿ ಪರೀಕ್ಷೆ ಪ್ರಶ್ನೆಪತ್ರಿಕೆಗಳ ಸೋರಿಕೆ ಪ್ರಕರಣದ ಬಗ್ಗೆ ತನಿಖೆ ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡದ(ಎಸ್‍ಐಟಿ) ಅಧಿಕಾರಿಗಳಿಗೆ ಬಗೆದಷ್ಟೂ ಹೊಸ ಸಂಗತಿಗಳು ಪತ್ತೆಯಾಗುತ್ತಿವೆ. ಎಕ್ಸಾಮ್ ಕಂಟ್ರೋಲರ್ ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ಇಂದು ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಕೋಚಿಂಗ್ ಕೇಂದ್ರಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರೂ ಸೇರಿದಂತೆ ಹಲವರನ್ನು ಕೂಲಂಕಷ ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಮೇಲೆ ಇಂದೂ ಕೂಡ ಹಲವು ವಿದ್ಯಾರ್ಥಿಗಳನ್ನು ಛತ್ರ ಸಾದರ್ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

ಈ ಮಧ್ಯೆ, ದೆಹಲಿಯ ಸಿಬಿಎಸ್‍ಸಿ ಕಚೇರಿ ಮುಂದೆ ನೊಂದ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು. 10ನೇ ತರಗತಿಯ ಗಣಿತ ಮತ್ತು 12ನೇ ತರಗತಿ ಅರ್ಥಶಾಸ್ತ್ರ ಪರೀಕ್ಷೆ ಪ್ರಶ್ನೆಪತ್ರಿಕೆಗಳ ಸೋರಿಕೆ ಪ್ರಕರಣದ ಬೆನ್ನಲ್ಲೇ 12ನೇ ತರಗತಿಯ ಜೀವಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವ ಸಾಧ್ಯತೆ ಇತ್ತು ಎಂದು ಅಧಿಕಾರಿಗಳು ಇಂದು ಬಹಿರಂಗಗೊಳಿಸಿದ್ದಾರೆ.  ಪ್ರಶ್ನೆ ಪತ್ರಿಕೆಗಳ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

Facebook Comments

Sri Raghav

Admin