ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ಕಟ್ಟಿಹಾಕಲು ಬಿಜೆಪಿ ರಹಸ್ಯ ರಣತಂತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

BJP--Siddaramaiah--02

ಬೆಂಗಳೂರು ,ಮಾ.31-ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಬಿಜೆಪಿ ರಹಸ್ಯ ರಣತಂತ್ರವನ್ನು ಹೆಣೆದಿದೆ. ಸಿದ್ದರಾಮಯ್ಯನವರು ಸ್ಪರ್ಧಿಸಲಿದ್ದಾರೆ ಎನ್ನಲಾದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಇಲ್ಲವೇ ರೇವಣ್ಣ ಸಿದ್ದಯ್ಯ ಹಾಗೂ ಸಿಎಂ ಪುತ್ರ ಡಾ.ಯತೀಂದ್ರ ಸ್ಪರ್ಧಿ ಸಲಿರುವ ವರುಣಾ ಕ್ಷೇತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಸಜ್ಜಾಗಿದೆ.  ಒಂದು ವೇಳೆ ಸಿದ್ದರಾಮಯ್ಯ ವರುಣಾ ಹಾಗೂ ಚಾಮುಂಡೇಶ್ವರಿಯಿಂದ ಸ್ಪರ್ಧಿಸದೇ ಕೊನೆ ಕ್ಷಣದಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ಇಲ್ಲವೇ ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಅಲ್ಲಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.

ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಅವರನ್ನು ಕಟ್ಟಿಹಾಕಲು ಬಿಜೆಪಿ ತನ್ನದೇ ಆದ ಕಾರ್ಯತಂತ್ರ ರೂಪಿಸಿದೆ. ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿ ಪ್ರಮುಖ ತಾರಾ ಪ್ರಚಾರಕರಾಗಿದ್ದಾರೆ. ಸಹಜವಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಅವರ ಮುಂದಿರುವ ಸವಾಲು.  2013ರ ವಿಧಾನಸಭೆ ಚುನಾವಣೆಯಲ್ಲಿ ಅವರು ರಾಜ್ಯಾದ್ಯಂತ ಪ್ರಚಾರ ನಡೆಸಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಯಿತು. ಈಗ ಇದಕ್ಕೆ ಪ್ರತಿತಂತ್ರ ರೂಪಿಸಿರುವ ಬಿಜೆಪಿ ಸಾಧ್ಯವಾದಷ್ಟು ಅವರನ್ನು ಕ್ಷೇತ್ರ ಬಿಟ್ಟು ಕದಲದಂತೆ ಕಾರ್ಯತಂತ್ರ ರಚಿಸಿದೆ.

ಚಾಮುಂಡೇಶ್ವರಿ ಹಾಗೂ ವರುಣಾದಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಸಿದ್ದರಾಮಯ್ಯ ಇದಕ್ಕಾಗಿ ಹೆಚ್ಚಿನ ಸಮಯವನ್ನು ಇಲ್ಲಿಗೆ ಮೀಸಲಿಡಲಿದ್ದಾರೆ. ಇದಕ್ಕಾಗಿ ಬಿಜೆಪಿ ಎರಡು ಕ್ಷೇತ್ರಗಳಿಗೆ ಪ್ರಬಲ ಪೈಪೋಟಿ ನೀಡಬಲ್ಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ಸಜ್ಜಾಗಿದೆ. ಈಗಾಗಲೇ ಶಂಕರ್ ಬಿದರಿ ಇಲ್ಲವೇ ರೇವಣ್ಣ ಸಿದ್ದಯ್ಯ ಅವರಿಗೆ ಚಾಮುಂಡೇಶ್ವರಿಯಿಂದ ಸ್ಪರ್ಧಿಸಲು ಸಜ್ಜಾಗಬೇಕೆಂಬ ಸಂದೇಶವನ್ನು ರವಾನಿಸಲಾಗಿದೆ.

ಅಲ್ಲದೆ ಚಾಮುಂಡೇಶ್ವರಿಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಜಿ.ಟಿ.ದೇವೇಗೌಡ ಕಣಕ್ಕಿಳಿಯುತ್ತಿರುವುದು ಸಿದ್ದರಾಮಯ್ಯನವರನ್ನು ನಿದ್ದೆಗೆಡುವಂತೆ ಮಾಡಿದೆ. ಸಿದ್ದರಾಮಯ್ಯನವರ ಪುತ್ರ ಯತೀಂದ್ರ ವರುಣಾದಿಂದ ಅಖಾಡಕ್ಕಿಳಿದರೆ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೂಡ ಸ್ಪರ್ಧಿಸಲು ಒಲವು ತೋರಿದ್ದು, ನಾಲ್ಕು ದಿಕ್ಕಿನಿಂದಲೂ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕಿದರೆ ಸಹಜವಾಗಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ. ವರುಣಾ ಹಾಗೂ ಚಾಮುಂಡೇಶ್ವರಿ ಬಿಟ್ಟು ಬಾದಾಮಿ ಕಡೆ ವಲಸೆ ಹೋದರೂ ಅಲ್ಲಿ ಈ ಹಿಂದೆ ಜೆಡಿಎಸ್‍ನಿಂದ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದ ಅಭ್ಯರ್ಥಿಯೊಬ್ಬರಿಗೆ ಗಾಳ ಹಾಕಲಾಗಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಎಲ್ಲೆ ಸ್ಪರ್ಧಿಸಿದರೂ ಅವರನ್ನು ನಿದ್ದೆಗೆಡುವಂತೆ ಮಾಡುವುದೇ ಬಿಜೆಪಿ ಒಂದಂಶದ ಕಾರ್ಯಕ್ರಮವಾಗಿದೆ.

Facebook Comments

Sri Raghav

Admin