ಗಂಡು ಮಗುವಿಗೆ ಜನ್ಮ ನೀಡದ ಪತ್ನಿಯನ್ನು ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಕೊಂದ ಪಾಪಿ ಪತಿ..!

ಈ ಸುದ್ದಿಯನ್ನು ಶೇರ್ ಮಾಡಿ

Fire-Girl-Suicide

ಟಿ.ನರಸೀಪುರ, ಮಾ.31- ಗಂಡು ಮಗು ಹಡೆದಿಲ್ಲ ಎಂಬ ಕಾರಣಕ್ಕೆ ಪತಿಮಹಾಶಯನ್ನೊಬ್ಬ ತನ್ನ ತಾಯಿ, ತಂಗಿ, ತಮ್ಮನ ಜತೆಗೂಡಿ ಪತ್ನಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಟಿ.ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ತಾಲ್ಲೂಕು ವರುಣಾ ಹೋಬಳಿ ಹಡಜನ ಗ್ರಾಮದ ಪೂಜಾ(24) ಮೃತ ದುರ್ದೈವಿ. ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಪತಿ ಕಾಂತರಾಜು ಹಾಗೂ ಆತನ ತಾಯಿ ಚಾಮಮ್ಮ, ತಮ್ಮ ಮೂರ್ತಿ, ತಂಗಿ ರತ್ನ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳು.

ಘಟನೆ ವಿವರ:
ಮೈಸೂರು ತಾಲ್ಲೂಕು ವರುಣಾ ಹೋಬಳಿ ಹಡಜನ ಗ್ರಾಮದ ಪೂಜಾಳನ್ನು ಕಳೆದ 9 ವರ್ಷಗಳಿಂದ ಹಿಂದೆ ಹೊಸಹಳ್ಳಿ ಗ್ರಾಮದ ಕಾಂತರಾಜುವಿಗೆ ವಿವಾಹ ಮಾಡಿಕೊಡಲಾಗಿತ್ತು. ವಿವಾಹದ ನಂತರ ದಂಪತಿಗೆ 3 ಹೆಣ್ಣು ಮಕ್ಕಳು ಜನಿಸಿದ್ದವು. ಇದರಿಂದ ಕುಪಿತಗೊಂಡಿದ್ದ ಕಾಂತರಾಜು ಹಾಗೂ ಆತನ ಮನೆಯವರು ಗಂಡು ಮಗು ಹೆರಲಿಲ್ಲವೆಂದು ಪೂಜಾಳಿಗೆ ದಿನನಿತ್ಯ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಇದೇ ವಿಚಾರವಾಗಿ ನಿನ್ನೆ ಮಧ್ಯಾಹ್ನ ಮನೆಯಲ್ಲಿ ಜಗಳ ನಡೆದಿದ್ದು, ಕೋಪಗೊಂಡ ಕಾಂತರಾಜು ತಮ್ಮ ಮನೆಯವರ ಜೊತೆ ಗೂಡಿ ಪತ್ನಿ ಪೂಜಾಳನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದಿದ್ದು, ಕೊಲೆ ನಂತರದಲ್ಲಿ ಆರೋಪಿಗಳು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಟಿ.ನರಸೀಪುರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಟಿ. ನರಸೀಪುರ ವೃತ್ತ ನೀರಿಕ್ಷಕ ಚಂದ್ರಶೇಖರ್, ಪಿಎಸ್‍ಐ ಚಿಕ್ಕಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಿಗೆ ನೀಡಿದ್ದು, ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Facebook Comments

Sri Raghav

Admin