‘ಕೈ’ಕೊಡುತ್ತಿರುವ ನಾಯಕರು । ವೇಣುಗೋಪಾಲ್ ಕಳವಳ । ಸಚಿವರಿಗೆ, ಮುಖಂಡರಿಗೆ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Venugopal--01

ಬೆಂಗಳೂರು,ಏ.2-ಕಾಂಗ್ರೆಸ್ ತೊರೆದು ಹೊರ ಹೋಗುವ ಶಾಸಕರನ್ನು ಹಿಡಿದುಕೊಳ್ಳಲು ಮತ್ತು ಜಿಲ್ಲಾ ಮಟ್ಟದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಖಡಕ್ ಸೂಚನೆ ನೀಡಿದ್ದಾರೆ.  ಕೆಪಿಸಿಸಿ ಕಚೇರಿಯಲ್ಲಿಂದು ವಿವಿಧ ಜಿಲ್ಲೆಗಳ ನಾಯಕರು, ಉಸ್ತುವಾರಿ ಸಚಿವರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ ಅವರು ಚುಣಾವಣೆ ವೇಳೆ ನಡೆಯುತ್ತಿರುವ ಅಹಿತಕರ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲವು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಚಿವರಾದ ಸಂತೋಷ್ ಲಾಡ್, ಆರ್.ವಿ.ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಎ.ಮಂಜು, ಸಂಸದರಾದ ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವು ನಾಯಕರ ಜೊತೆ ಇಡೀ ದಿನ ವೇಣುಗೋಪಾಲ್ ಚರ್ಚೆ ನಡೆಸಿದರು. ಬಳ್ಳಾರಿ ಜಿಲ್ಲಾ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಹಲವು ದೂರುಗಳು ಬಂದಿದ್ದು, ಈ ನಿಟ್ಟಿನಲ್ಲಿ ವೇಣುಗೋಪಾಲ್, ಸಂತೋಷ್ ಲಾಡ್ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ಹೇಳಲಾಗಿದೆ. ಸುಮಾರು 20ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸಂತೋಷ್ ಲಾಡ್‍ಗೆ ಕೇಳಿ ವಿವರಣೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಹಾಸನ ಜಿಲ್ಲೆ ಟಿಕೆಟ್ ಹಂಚಿಕೆ ಸಂಬಂಧ ಎ.ಮಂಜು ಅವರ ಜೊತೆ ಚರ್ಚೆ ನಡೆಸಲಾಗಿದ್ದು, ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ ಮತ್ತು ಯಾವುದೇ ಶಾಸಕರು, ನಾಯಕರು ಪಕ್ಷ ತೊರೆದು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು.

ಅಫ್ಜಲ್‍ಪುರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ತೊರೆದಿರುವುದು ಮತ್ತು ಯಾದಗಿರಿಯ ಮಾಲಕ ರೆಡ್ಡಿ ಅಸಮಾಧಾನದ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರ ಜೊತೆ ಮಾತುಕತೆ ನಡೆಸಿದ್ದಾರೆ.  ಕೋಲಾರ ಜಿಲ್ಲೆಯಲ್ಲಿ ಚಿಂತಾಮಣಿ ಕ್ಷೇತ್ರದ ಟಿಕೆಟ್ ಹಂಚಿಕೆಗೆ ಸಂಬಂಧಪಟ್ಟಂತೆಗೊಂದಲವಿದ್ದು, ಆ ಕುರಿತು ಸಂಸದ ಕೆ.ಎಚ್.ಮುನಿಯಪ್ಪ ಅವರೊಂದಿಗೆ ವೇಣುಗೋಪಾಲ್ ಚರ್ಚೆ ನಡೆಸಿದ್ದಾರೆ. ಎರಡು ಮುರೂ ದಿನಗಳಲ್ಲಿ ಮಧುಸೂದನ್‍ಮಿಸ್ತ್ರಿ ನೇತೃತ್ವದ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದ್ದು, ಅದಕ್ಕೂ ಮುನ್ನ ರಾಜ್ಯಮಟ್ಟದಲ್ಲಿರುವ ಗೊಂದಲಗಳನ್ನು ಬಗೆಹರಿಸಲು ವೇಣುಗೋಪಾಲ್ ಪ್ರಮುಖ ನಾಯಕರ ಜೊತೆ ಗಂಭೀರ ಚರ್ಚೆ ನಡೆಸಿದ್ದಾರೆ.

Facebook Comments

Sri Raghav

Admin