ಮಗನ ಬದಲು ಯಡಿಯೂರಪ್ಪನವರೇ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲಿ : ಸಿದ್ದರಾಮಯ್ಯ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--Siddaramaiah--

ಮೈಸೂರು, ಏ.2- ವಿಜಯೇಂದ್ರ ಏಕೆ ಅವರಪ್ಪ ಯಡಿಯೂರಪ್ಪನವರೇ ಬಂದು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ರಾಮಕೃಷ್ಣನಗರದ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಕುರಿತು ಕೇಳಿದಾಗ ಸಿಡಿಮಿಡಿಗೊಂಡು ಉತ್ತರಿಸಿದರು.

ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ಏಕೆ? ಸ್ವತಃ ಅವರೇ ಸ್ಪರ್ಧಿಸಲಿ. ಯಡಿಯೂರಪ್ಪನಿಗೂ ವರುಣಾ ಕ್ಷೇತ್ರಕ್ಕೆ ಸಂಬಂಧವೇನು ? ಅವರು ಬಂದು ನಿಂತ ತಕ್ಷಣ ಜನ ಓ ಎಂದು ಓಡಿಬರುವರೇ, ನನ್ನ ಮಗ ಚುನಾವಣೆಗೆ ನಿಂತರು ಸಿಎಂ ಮಗ ಎಂದು ಮತ ಹಾಕವುದಿಲ್ಲ. ಸಿಎಂ ಆಗಿ ನಾನು ಏನು ಕೆಲಸ ಮಾಡಿದ್ದೇನೆ ಎಂಬುದರ ಮೇಲೆ ಮತ ಹಾಕುತ್ತಾರೆ ಎಂದರು.  ವರುಣಾ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿದವನು ನಾನು. ಆ ಕ್ಷೇತ್ರದಲ್ಲಿ ಕೆಲಸ ಮಾಡಿರುವುದು ನಾನು. ಯಾರೋ ಬಂದು ನಿಂತ ತಕ್ಷಣ ಅಲ್ಲಿನ ಜನ ಬದಲಾಗೊಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜನರಿಗೆ ಯಾರಿಗೆ ವೋಟು ಹಾಕಬೇಕೆಂಬುದು ಗೊತ್ತಿದೆ. ಈ ರೀತಿ ಮಾಜಿ ಸಿಎಂಗಳ ಮಕ್ಕಳು ನಿಂತು ಗೆಲ್ಲುವುದಾದರೆ ಯಾರ್ಯಾರೋ ಎಲ್ಲೆಲ್ಲೋ ನಿಲ್ಲುತ್ತಿದ್ದರು ಎಂದರು. ವಿಜಯೇಂದ್ರನ ಬಗ್ಗೆ ನನ್ನ ಬಳಿ ಪ್ರಶ್ನೆಯನ್ನೇ ಕೇಳಬೇಡಿ ಎಂದು ಕೋಪಗೊಂಡು ಉತ್ತರಿಸಿದರು. ನಂತರ ಮುಖ್ಯಮಂತ್ರಿಗಳು ಇಂದು ಸಹ ಚಾಮುಂಡೇಶ್ವರಿ ಕ್ಷೇತ್ರದ 18 ಗ್ರಾಮಗಳಲ್ಲಿ ತಮ್ಮ ಪರ ಪ್ರಚಾರ ಕಾರ್ಯಕ್ಕೆ ತೆರಳಿದರು.

ಕಳೆದ ಎರಡು ದಿನಗಳಿಂದಲೂ ಮುಖ್ಯಮಂತ್ರಿಗಳು ಎಡಬಿಡದೆ ಬೆಳಗ್ಗಿನಿಂದ ಸಂಜೆವರೆಗೂ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇಂದು ದಾರಿಪುರ, ಬರದನಪುರ, ಮಾವಿನಹಳ್ಳಿ ಸೇರಿದಂತೆ 18 ಗ್ರಾಮಗಳಲ್ಲಿ ಬೆಳಗ್ಗೆಯಿಂದ ಸಂಜೆ 7.30ರವರೆಗೂ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಚಾರ ನಡೆಸಲಿದ್ದಾರೆ.

Facebook Comments

Sri Raghav

Admin