ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾಗದಿದ್ದರೂ ವರುಣಾದಲ್ಲಿ ವಿಜಯೇಂದ್ರಗೆ ಅದ್ದೂರಿ ಸ್ವಾಗತ

ಈ ಸುದ್ದಿಯನ್ನು ಶೇರ್ ಮಾಡಿ

Vijayenra--01

ತಿ.ನರಸೀಪುರ, ಏ.3- ವರುಣಾ ವಿಧಾನ ಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಪುತ್ರ ಬಿ.ವೈ.ವಿಜಯೇಂದ್ರ ಅಭ್ಯರ್ಥಿಯಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ ವಿಜಯೇಂದ್ರ ವರುಣಾ ವಿಧಾನಸಭಾ ಕ್ಷೇತ್ರದ ಆಲಗೂಡು ಗ್ರಾಮಕ್ಕೆ ಭೇಟಿ ನೀಡಿದ್ದರು. ಮಲೈ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ನಂತರ ಕೊಳ್ಳೇಗಾಲ ಮಾರ್ಗವಾಗಿ ತಿ.ನರಸೀಪುರ ಆಲಗೂಡು ಗ್ರಾಮಕ್ಕೆ ಆಗಮಿಸಿದ್ದ ಬಿ.ವೈ.ವಿಜಯೇಂದ್ರರವರನ್ನು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿ ಸ್ವಾಗತ ಮಾಡಿ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಬಿ.ವೈ ವಿಜಯೇಂದ್ರ, ಪಕ್ಷದ ವರಿಷ್ಟರು ವರುಣಾ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡದಿದ್ದರೂ ಕ್ಷೇತ್ರದ ಜನತೆ ನನ್ನ ಮೇಲೆ ಅಭಿಮಾನ ತೋರಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬರಮಾಡಿ ಕೊಂಡಿರುವುದಕ್ಕೆ ನಾನು ಚಿರರುಣಿಯಾಗಿದ್ದೇನೆ. ಕ್ಷೇತ್ರದ ಕಾರ್ಯಕರ್ತರು ನನ್ನನ್ನೇ ಅಭ್ಯರ್ಥಿ ಮಾಡುವಂತೆ ವರಿಷ್ಟರಿಗೆ ಮನವಿ ಮಾಡಿದ್ದಾರೆ. ವರಿಷ್ಟರು ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೂ ಪಕ್ಷದ ಕಾರ್ಯಕರ್ತರು ಬಿಜೆಪಿ ಬೆಂಬಲಿಸುವ ಮೂಲಕ ಅವರ ಜಯಕ್ಕೆ ಕಾರಣರಾಗಬೇಕೆಂದು ಅವರು ಮನವಿ ಮಾಡಿದರು.

ಇದು ಸಿಎಂ ತವರು ಕ್ಷೇತ್ರ ಎಂಬ ಅರಿವು ನನಗಿದೆ. ಅವರ ಕುಟುಂಬದಲ್ಲಿ ಯಾರೇ ನಿಂತರೂ ಸಿದ್ದರಾಮ್ಯಯರವರೇ ಅಭ್ಯರ್ಥಿಯಾಗಿರುತ್ತಾರೆ. ಆದರೂ ಈ ಬಾರಿ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಲಿದ್ದು, ಇಲ್ಲಿ ಯಾರೇ ಬಿಜೆಪಿ ಅಭ್ಯರ್ಥಿಯಾದರೂ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತದ ನಂತರ ತಿ.ನರಸೀಪುರ ಪಟ್ಟಣದ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಬಳಿ ಆಗಮಿಸಿದ ವಿಜಯೇಂದ್ರರವರಿಗೆ ಜಮಾವಣೆಗೊಂಡಿದ್ದ ನೂರಾರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹೂವಿನ ಹಾರ ಹಾಕುವ ಮೂಲಕ ಸ್ವಾಗತಿಸಿದರು. ಕಾಪು ಸಿದ್ದಲಿಂಗಸ್ವಾಮಿ, ರಂಗೂನಾಯ್ಕ, ಗಣೇಶ್, ವೆಂಕಟರಮಣಶೆಟ್ಟಿ, ನಾಗರಾಜು(ತಾತಪ್ಪ). ಅಕ್ಕಿ ನಂಜುಂಡಸ್ವಾಮಿ, ಆಲಗೂಡು ಮಹದೇವಮ್ಮ, ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಇತರರು ಇದ್ದರು.

Facebook Comments

Sri Raghav

Admin