ಚುನಾವಣಾ ಅಭ್ಯರ್ಥಿಯೆಂದು ಕೋಟ್ಯಾಂತರ ರೂ. ಪಂಗನಾಮ ಹಾಕಿದ್ದ ವಂಚಕ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arest--MNan

ಬೆಂಗಳೂರು, ಏ.3- ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಪ್ರಚಾರಕ್ಕಾಗಿ ಸಾಮೂಹಿಕ ವಿವಾಹ ಮಾಡಿಸಲು ನೂರು ತಾಳಿಗಳು ಹಾಗೂ ಸೀರೆಗಳು ಬೇಕೆಂದು ಹಗೂ ಲೋನ್ ಕೊಡಿಸುವುದಾಗಿ ನಂಬಿಸಿ ಚಿನ್ನಾಭರಣ ವ್ಯಾಪಾರಿ ಹಾಗೂ ಬಟ್ಟೆ ವ್ಯಾಪಾರಿಗೆ ವಂಚಿಸಿದ್ದ ವಂಚಕನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಮೈಸೂರಿನ ಎಸ್‍ವಿಪಿ ನಗರ 1ನೆ ಕ್ರಾಸ್ ನಿವಾಸಿ ಎಲ್.ಸೋಮಣ್ಣ (39) ಬಂಧಿತ ವಂಚಕನಾಗಿದ್ದು, ಬೆಂಗಳೂರಿನ ಸಹಕಾರ ನಗರದ ಗೋದ್ರೇಜ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದನು.

ಈತ ಬಸವೇಶ್ವರನಗರದ ಧೀರಜ್ ಮತ್ತು ಸೂರಜ್ ಎಂಬ ಚಿನ್ನಾಭರಣ ಮತ್ತು ಬಟ್ಟೆ ವ್ಯಾಪಾರಿಗೆ ಒಬ್ಬೊಬ್ಬರಿಂದ ತಲಾ 94 ಲಕ್ಷ ರೂ. ವಂಚಿಸಿ ತಲೆ ಮರೆಸಿಕೊಂಡಿದ್ದನು. ತಾನು ಎಂಎಲ್‍ಸಿ ಸೋಮಣ್ಣ ಎಂದು ಪರಿಚಯಿಸಿಕೊಂಡಿದ್ದ ಈತ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು, ಚಳ್ಳಕೆರೆ, ನಾಯಕನಹಟ್ಟಿ ಹಾಗೂ ಮೈಸೂರು ಭಾಗದ ವಿವಿಧ ಕ್ಷೇತ್ರದ ಎಂಎಲ್‍ಎ ಅಭ್ಯರ್ಥಿ ಎಂದು ಹೇಳಿಕೊಂಡು, ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿದ್ದು, ಅದಕ್ಕಾಗಿ ಚಿನ್ನದ ತಾಳಿ ಹಾಗೂ ಚಿನ್ನದ ಬಿಸ್ಕೆಟ್‍ಗಳ ಅವಶ್ಯಕತೆಯಿದೆ ಎಂದು ಚಿನ್ನದ ವ್ಯಾಪಾರಿ ಹಾಗೂ ಬಟ್ಟೆ ವ್ಯಾಪಾರಿಗೆ ಸ್ವಲ್ಪ ಹಣ ಮುಂಗಡವಾಗಿ ಕೊಟ್ಟು ಅವರಿಬ್ಬರನ್ನು ನಂಬಿಸಿದ್ದನು.

ಈ ವಂಚಕನ ಮಾತನ್ನು ನಂಬಿದ್ದ ಚಿನ್ನದ ವ್ಯಾಪಾರಿ ತನ್ನ ಮನೆ ಪತ್ರಗಳನ್ನೆಲ್ಲ ಅಡವಿಟ್ಟಿದ್ದಲ್ಲದೆ ಸಂಬಂಧಿಕರಿಂದಲೂ ಸಾಲವಾಗಿ ಹಣ ಪಡೆದು ನೂರು ಚಿನ್ನದ ತಾಳಿಗಳನ್ನು ಮಾಡಿಕೊಟ್ಟಿದ್ದನು. ಸುಮಾರು 94 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ಬಟ್ಟೆ ವ್ಯಾಪಾರಿಯಿಂದ 94 ಲಕ್ಷ ರೂ. ಮೌಲ್ಯದ ಬಟ್ಟೆಗಳನ್ನು ಪಡೆದು ನೆಟ್ ಬ್ಯಾಂಕಿಂಗ್ ಮೂಲಕ ಹಣ ಕಳುಹಿಸುವುದಾಗಿ ಹೇಳಿ ತದನಂತರ ಮೊಬೈಲ್ ಸ್ಥಗಿತಗೊಳಿಸಿ ತಲೆಮರೆಸಿಕೊಂಡಿದ್ದನು. ಈತನ ವಂಚನೆ ಬಗ್ಗೆ ಬಸವೇಶ್ವರನಗರ ಟಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿವಿಧ ಮೂಲಗಳಿಂದ ವಂಚಕನ ಬಗ್ಗೆ ಮಾಹಿತಿ ಕಲೆ ಹಾಕಿ ಕೊನೆಗೂ ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದಷ್ಟೇ ಅಲ್ಲದೆ, ಹಲವಾರು ಸಾರ್ವಜನಿಕರಿಗೆ ಸರ್ಕಾರಿ ಕೆಲಸ, ನಿವೇಶನ (ಸೈಟ್) ಮತ್ತು ಬ್ಯಾಂಕ್‍ಗಳಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಿವಿಧ ರೀತಿಯಲ್ಲಿ ಕೋಟಿಗಟ್ಟಲೆ ಮೋಸ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಈತನ ಮೇಲೆ ಈಗಾಗಲೇ ಬೆಂಗಳೂರು ನಗರ ವೈಯಾಲಿಕಾವಲ್, ಕೊಡಿಗೆಹಳ್ಳಿ, ಮೈಸೂರು ನಗರದ ನಜರಾಬಾದ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುತ್ತವೆ.

ಜಾಗರೂಕರಾಗಿರಿ:

ಸಾರ್ವಜನಿಕರು ಇಂತಹ ವ್ಯಕ್ತಿಗಳಿಂದ ಮೋಸ ಹೋಗದೆ ಜಾಗರೂಕರಾಗಿರುವಂತೆ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ರವಿ ಡಿ.ಚನ್ನಣ್ಣನವರ್ ಕಿವಿಮಾತು ಹೇಳಿದ್ದಾರೆ.

ವಂಚನೆಯಾಗಿದ್ದಲ್ಲಿ ದೂರು ನೀಡಿ:

ಈ ವಂಚಕನಿಂದ ಸಾರ್ವಜನಿಕರ್ಯಾರಾದರೂ ಮೋಸ ಹೋಗಿದ್ದಲ್ಲಿ ಕೂಡಲೇ ಬಸವೇಶ್ವರನಗರ ಪೊಲೀಸ್ ಠಾಣೆಯ ದೂರವಾಣಿ 080-22942516 ಅಥವಾ ಮೊಬೈಲ್ 9480801729 ಸಂಪರ್ಕಿಸುವಂತೆ ಕೋರಲಾಗಿದೆ.

Facebook Comments

Sri Raghav

Admin