ನನ್ನ ಒಂದು ವೋಟ್‍ನಿಂದ ಏನಾಗುತ್ತೇ ಅನ್ನೋ ಮನೋಭಾವನೆ ಬಿಟ್ಟುಬಿಡಿ ಬೆಂಗಳೂರಿಗರೇ…

ಈ ಸುದ್ದಿಯನ್ನು ಶೇರ್ ಮಾಡಿ

Voting-Bangalore

– ರಮೇಶ್ ಪಾಳ್ಯ
1957ರಿಂದ ಇಲ್ಲಿಯವರೆಗೆ ನಡೆದ ಚುನಾವಣೆಯ ಅಂಕಿ-ಅಂಶ ಗಮನಿಸಿದರೆ ಬೆಂಗಳೂರು ನಗರದ ಮತದಾರರು ಮತದಾನ ಮಾಡಲು ಹಿಂದೇಟು ಹಾಕುತ್ತಿರುವುದು ಮುಂದುವರಿದುಕೊಂಡು ಬರುತ್ತಿದೆ. ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ವಿದ್ಯಾವಂತರೇ ಹೆಚ್ಚಾಗಿದ್ದಾರೆ. ಇಲ್ಲಿನ ಯುವ ಸಮುದಾಯಕ್ಕೆ ದೇಶ-ವಿದೇಶಗಳಲ್ಲೂ ಭಾರೀ ಬೇಡಿಕೆ ಇದೆ. ಮುಂದುವರೆದ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್, ಯೂರೋಪ್, ಆಸ್ಟ್ರೇಲಿಯಾ ಮತ್ತಿತರ ದೇಶಗಳ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.   ಇಷ್ಟೆಲ್ಲಾ ಬೇಡಿಕೆ ಇರುವ ಈ ವಿದ್ಯಾವಂತ ಮಂದಿ ಮತದಾನ ಮಾಡಲು ಮಾತ್ರ ಮುಂದೆ ಬರುತ್ತಿಲ್ಲ ಎನ್ನುವುದು ವಿಪರ್ಯಾಸವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿವರ್ಷ ಸರಾಸರಿ ಮತದಾನವಾಗುತ್ತಿದೆ. ಆದರೆ, ಬೆಂಗಳೂರಿನ ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಿಸಲು ಏನೇ ಕಸರತ್ತು ನಡೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ.

ಶೇಕಡಾವಾರು ಪ್ರಮಾಣ:

1957ರಿಂದ 2013ರವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ ಬೆಂಗಳೂರಿಗರ ಮತದಾನ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಏರಿಕೆ ಕಂಡಿಲ್ಲ. 2003ರ ವರೆಗೂ ಇಲ್ಲಿನ ಮತದಾನ ಅಂದಾಜು ಶೇ.49.87ರಷ್ಟನ್ನು ಮೀರಿಲ್ಲ. ಆದರೆ, ಬದಲಾವಣೆ ಗಾಳಿ ಬೀಸಿದಂತೆ 2008ರ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಶೇ.57.38ರಷ್ಟು ಮತದಾನವಾಗಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. 2008ರ ನಂತರ ಬೆಂಗಳೂರಿನ ಪ್ರಜ್ಞಾವಂತ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿದೆ ಎಂದೇ ಭಾವಿಸಲಾಗಿತ್ತು. ಆದರೆ, 2013ರ ಚುನಾವಣೆಯಲ್ಲಿ ಮತ್ತೆ ನಿರಾಶಾದಾಯಕ ಮತದಾನ ಪುನರಾವರ್ತನೆಯಾಗುತ್ತಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸರಾಸರಿ ಶೇ.70ರಷ್ಟು ಮತದಾನವಾಗಿದ್ದರೆ, ಬೆಂಗಳೂರಿನ ಪ್ರಜ್ಞಾವಂತ ನಾಗರಿಕರು ಮನೆ ಬಿಟ್ಟು ಮತದಾನ ಮಾಡಲು ಬಾರದ ಹಿನ್ನೆಲೆಯಲ್ಲಿ ಶೇ.52.83ರಷ್ಟು ಮಾತ್ರ ಮತದಾನವಾಗಿದೆ.

ಕಾರಣವೇನು?:

ಬುದ್ಧಿವಂತರೆನಿಸಿಕೊಂಡ ಬೆಂಗಳೂರಿಗರ ಮನಸ್ಸಿನಲ್ಲಿ ನನ್ನ ಒಂದು ವೋಟ್‍ನಿಂದ ಏನಾಗುತ್ತೆ ಎಂಬ ಮನೋಭಾವನೆಯೇ ಶೇಕಡಾವಾರು ಮತದಾನ ಕುಂಠಿತಗೊಳ್ಳಲು ಕಾರಣ ಎನ್ನಲಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಉತ್ತಮ ನಾಯಕರನ್ನು ಆರಿಸಬೇಕಾದರೆ ಪ್ರತಿಯೊಬ್ಬರ ಮತ ಕೂಡ ಗಣನೆಗೆ ಬರುತ್ತದೆ ಎಂಬ ಸಣ್ಣ ಪರಿಜ್ಞಾನ ಇಲ್ಲಿನ ನಾಗರಿಕರಿಗೆ ಬಂದಿಲ್ಲ. ನಗರದ ಹವಾ ನಿಯಂತ್ರಣ ಕಚೇರಿಗಳಲ್ಲಿ ಕುಳಿತು ಕಚೇರಿಗಳಲ್ಲಿ ಕೆಲಸ ಮಾಡುವ ಐಟಿ-ಬಿಟಿ ಮಂದಿ ಮಾಡೋ ಕೆಲ್ಸ ಬಿಟ್ಟು ರಣ ಬಿಸಿಲಿನಲ್ಲಿ ಮಾರುದ್ದ ಸಾಲಿನಲ್ಲಿ ನಿಂತು ಮತ ಚಲಾಯಿಸುವ ದರ್ದು ನನಗೇನಿದೆ ಎಂಬ ಧೋರಣೆ ಬೆಳೆಸಿಕೊಂಡಿರುವುದು ಮತ್ತೊಂದು ದುರಂತವಾಗಿದೆ.

ಇನ್ನು ವೀಕೆಂಡ್‍ನಲ್ಲಿ ನಡೆಯುವ ಮತದಾನ ಸಂದರ್ಭದಲ್ಲಿ ತಮ್ಮ ಹಕ್ಕು ಚಲಾಯಿಸುವ ಬಾಧ್ಯತೆ ಮರೆಯುವ ಶೇ.90ರಷ್ಟು ಯುವ ಜನತೆ ಮೋಜು-ಮಸ್ತಿಗೆ ತೆರಳುವುದು ಇನ್ನೊಂದು ಕಾರಣವಾಗಿದೆ.  18ರಿಂದ 25ವರ್ಷ ವಯೋಮಾನದ ವಿದ್ಯಾರ್ಥಿಗಳಂತೂ ವೋಟ್ ಹಾಕಿ ನಾವು ಯಾವ ದೇಶ ಉದ್ಧಾರ ಮಾಡಬೇಕು ಎಂಬ ಮನೋಭಾವನೆ ಬೆಳೆಸಿಕೊಂಡು ಚುನಾವಣೆ ಸಂದರ್ಭದಲ್ಲಿ ಗುಂಪು ಗುಂಪಾಗಿ ಎರಡು-ಮೂರು ದಿನಗಳ ಪ್ರವಾಸಕ್ಕೆ ತೆರಳುತ್ತಿರುವುದು ಸರ್ವೇ ಸಾಮಾನ್ಯ.

23ರಿಂದ 35 ವರ್ಷದ ವಯಸ್ಕರು ವಿದೇಶ ಮತ್ತು ಹೊರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದು , ಇವರು ಹಬ್ಬ-ಹರಿದಿನಗಳಲ್ಲಿ ಮಾತ್ರ ಮನೆಗೆ ಬಂದು ಹೋಗುತ್ತಾರೆ. ಇದೇ ಮಂದಿ ಚುನಾವಣೆ ಸಂದರ್ಭದಲ್ಲಿ ತಾಯ್ನಾಡಿಗೆ ಹಿಂದಿರುಗಿ ಮತ ಹಾಕಿ ಎಂದರೆ ನಮ್ಮ ಒಂದು ವೋಟ್‍ಗೋಸ್ಕರ ಸಾವಿರಾರು ರೂ. ಖರ್ಚು ಮಾಡಿಕೊಂಡು ಬರೋಕ್ಕಾಗುತ್ತಾ ಎಂದು ಉದಾಸೀನವೂ ಮತದಾನ ಕುಂಠಿತಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಖಾಸಗಿ ಸಂಸ್ಥೆಗಳಲ್ಲಿ ಲಕ್ಷ ಲಕ್ಷ ಸಂಬಳ ಪಡೆಯುವ ಹೈಟೆಕ್ ಜನರ ಮನಸ್ಸಿನಲ್ಲಿ ರಾಜಕಾರಣಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಕೆಲಸಕ್ಕೆ ಬಾರದ ರಾಜಕಾರಣಿಗಳನ್ನು ಗೆಲ್ಲಿಸುವ ಉದ್ದೇಶದಿಂದ ನಾವ್ಯಾಕೆ ಸಮಯ ವ್ಯರ್ಥ ಮಾಡಿಕೊಂಡು ಮತದಾನ ಮಾಡಬೇಕು ಎಂಬ ಭಾವನೆ ಮನೆ ಮಾಡಿದೆ.

ಒಂದು ವೋಟಿನ ಮಹತ್ವ:

ಒಂದು ವೋಟಿನ ಮಹತ್ವ ಏನು ಎಂಬುದಕ್ಕೆ ವಾಜಪೇಯಿ ಸರ್ಕಾರ ಕೇವಲ ಒಂದು ವೋಟಿನಿಂದ ಪತನಗೊಂಡ ಇತಿಹಾಸ ನಮ್ಮ ಕಣ್ಮುಂದೆ ಇದೆ. ಅದೇ ರೀತಿ ಸಂತೆಮಾರನಹಳ್ಳಿ ಚುನಾವಣೆ ನಂತರ ಧೃವನಾರಾಯಣ್ ಅವರು ಕೇವಲ ಒಂದು ಮತದ ಅಂತರದಿಂದ ಸೋಲನ್ನಪ್ಪಿದ್ದರು ಇದೇ ರೀತಿ ಇನ್ನಿತರ ಹಲವಾರು ಉದಾಹರಣೆಗಳು ನಮ್ಮ ಕಣ್ಮುಂದಿವೆ. ಹೀಗಾಗಿ ಚಲಾವಣೆಯಾಗುವ ಒಂದೊಂದು ಮತ ಕೂಡ ಅಮೂಲ್ಯ. ಈ ಅಂಶವನ್ನು ಬೆಂಗಳೂರಿನ ಮತದಾರರು ಮರೆಯಬಾರದು.   ರಾಜ್ಯದ ಒಟ್ಟಾರೆ ಮತದಾರರ ಸಂಖ್ಯೆ 4.96 ಕೋಟಿ. ಬೆಂಗಳೂರಿನಲ್ಲೇ ಸುಮಾರು 80 ಲಕ್ಷ ಮತದಾರರಿದ್ದಾರೆ. ಹಾಗಾಗಿ ಇಲ್ಲಿನ ಮತದಾರರು ಚಲಾಯಿಸುವ ಒಂದೊಂದು ಮತವೂ ನಿರ್ಣಾಯಕ ಎನ್ನುವುದನ್ನು ಯಾರೂ ಮರೆಯಬಾರದು.

ನೋಟಾ ಬಳಸಿ:
ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂಬ ಭಾವನೆಯನ್ನು ಬೆಂಗಳೂರು ವಾಸಿಗಳಲ್ಲಿ ಮೂಡಿಸಲು ಏನೆಲ್ಲ ಕಸರತ್ತು ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಇನ್ನು ಮುಂದಾದರೂ ಪ್ರಜ್ಞಾವಂತ ನಾಗರಿಕರು ತಮ್ಮ ಈ ಧೋರಣೆಗಳನ್ನು ಬದಿಗೊತ್ತಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತದಾನ ಮಾಡಲು ಮುಂದೆ ಬಂದು ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹೊಣೆ ಹೊರಬೇಕಾಗಿದೆ. ಯಾವುದೇ ಪಕ್ಷದ ಅಭ್ಯರ್ಥಿ ಉತ್ತಮರಲ್ಲ, ಅಂತ ವ್ಯಕ್ತಿಗೆ ಏಕೆ ಮತ ಹಾಕಬೇಕು ಎಂಬ ಭಾವನೆ ಇದ್ದವರು ತಮ್ಮ ಎಲ್ಲಾ ಕೆಲಸ, ಕಾರ್ಯಗಳನ್ನು ಬದಿಗೊತ್ತಿ ಮತದಾನದ ದಿನ ಮತಗಟ್ಟೆಗೆ ಆಗಮಿಸಿ ನೋಟಾ ಚಲಾಯಿಸುವ ಮೂಲಕ ತಮ್ಮ ಹಕ್ಕು ಚಲಾವಣೆ ಮಾಡುವುದು ಪ್ರತಿಯೊಬ್ಬ ಮತದಾರರ ಕರ್ತವ್ಯ ಎಂಬುದನ್ನು ಯಾರೂ ಮರೆಯಬಾರದು.

ಮತದಾನ ಹೆಚ್ಚಿಸಲು ಏನು ಮಾಡಬಹುದು:
ತುರ್ತು ಪರಿಸ್ಥಿತಿ ಹೊರತುಪಡಿಸಿ 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕನೂ ಮತದಾನ ಮಾಡುವುದನ್ನು ಕಡ್ಡಾಯಗೊಳಿಸುವಂತೆ ಕಾನೂನಿಗೆ ತಿದ್ದುಪಡಿ ತರುವ ಅಗತ್ಯವಿದೆ.  ಬಹುತೇಕ ಭಾನುವಾರಗಳಂದೇ ಚುನಾವಣೆ ನಡೆಯುವುದು. ಕೆಲವೊಮ್ಮೆ ಬೇರೆ ದಿನಗಳಲ್ಲಿ ಮತದಾನವಾದರೆ ಮತದಾನದ ದಿನ ಎಲ್ಲಾ ಖಾಸಗಿ ಸಂಸ್ಥೆಗಳವರು ರಜೆ ನೀಡುತ್ತಾರೆ. ಇನ್ನು ಮುಂದೆ ಚುನಾವಣೆ ಭಾನುವಾರವೇ ಆಗಲಿ ಅಥವಾ ಕೆಲಸದ ದಿನಗಳಲ್ಲೇ ಆಗಲಿ ಮತದಾನ ಮಾಡದ ತಮ್ಮ ನೌಕರರ ವಿರುದ್ಧ ಮಾಲೀಕರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಯಾವ ಸಿಬ್ಬಂದಿ ಮತದಾನ ಮಾಡಿಲ್ಲವೋ ಅಂತಹವರ ರಜೆ ರದ್ದುಪಡಿಸಿ ವೇತನ ಕಟ್ ಮಾಡಲು ಮುಂದಾಗಬೇಕಿದೆ. ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮತದಾನದ ಅರಿವು ಮೂಡಿಸಿ ಅವರ ಮೂಲಕ ಪೋಷಕರು ಮತದಾನ ಮಾಡುವಂತೆ ಪ್ರೋತ್ಸಾಹಿಸಲು ಮುಂದಾಗಬೇಕು ಹಾಗೂ ಸರ್ಕಾರೇತರ ಸಂಸ್ಥೆಗಳು ಮತದಾನದ ಅರಿವು ಮೂಡಿಸಲು ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ.

ಕಸರತ್ತು:

ಮೇ 12ರಂದು ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಲು ಚುನಾವಣಾಧಿಕಾರಿಗಳು ಕಸರತ್ತು ನಡೆಸುತ್ತಿದ್ದಾರೆ.   ಅವರ ಶ್ರಮ ಈ ಬಾರಿಯಾದರೂ ಸಾರ್ಥಕವಾಗುವುದೇ. ಬೆಂಗಳೂರಿಗರು ನನ್ನ ಒಂದು ವೋಟ್‍ನಿಂದ ಏನಾಗುತ್ತೆ ಅನ್ನೋ ಮನೋಭಾವನೆ ಬಿಟ್ಟು ಮತದಾನ ಮಾಡಲು ಮುಂದೆ ಬರುವರೇ ಕಾದು ನೋಡಬೇಕು.

Facebook Comments

Sri Raghav

Admin