ಎಲ್ಲಾ ಕ್ಷೇತ್ರಕ್ಕೂ ಸೈ ಎನ್ನುವ ಮಹಿಳೆಯರಿಗೆ ರಾಜಕೀಯದಲ್ಲೇಕೆ ಇನ್ನೂ ಸಿಕ್ಕಿಲ್ಲ ಪ್ರಾತಿನಿಧ್ಯ

ಈ ಸುದ್ದಿಯನ್ನು ಶೇರ್ ಮಾಡಿ

Women-In-Politics

ಕೆ.ಎಸ್. ಜನಾರ್ದನ್

ಬೆಂಗಳೂರು, ಏ.5- ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬಂತೆ ನಮ್ಮ ದೇಶದ ಸಂಸ್ಕøತಿಯಲ್ಲಿ ಸ್ತ್ರೀಯರಿಗೆ ಪೂಜನೀಯ ಸ್ಥಾನವಿದೆ. ನಮ್ಮ ಸಂವಿಧಾನದಲ್ಲೂ ಕೂಡ ಅವರಿಗೆ ವಿಶೇಷ ಸಂರಕ್ಷಣೆ ಒದಗಿಸಿದೆ.   ಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಮಹಿಳಾ ಮತದಾರರು ಕೂಡ ನಿರ್ಣಾಯಕರಾಗಿದ್ದಾರೆ. ದೇಶದಲ್ಲಿ ಶೇ.50ರಷ್ಟು ಮಹಿಳಾ ಮತದಾರರು ಇದ್ದಾರೆ.  ಆದರೆ, ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್‍ನಲ್ಲಿ ಪ್ರಾತಿನಿಧಿತ್ವ ತುಂಬ ಕಡಿಮೆ. ಚುನಾವಣೆಗೆ ಸ್ಪರ್ಧಿಸುವುದು ಕೂಡ ತುಂಬ ಕಡಿಮೆ.   ರಾಜ್ಯದಲ್ಲೂ ಕೂಡ ಮಹಿಳಾ ಜನಪ್ರತಿನಿಧಿಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಇದು ಅವರ ಉದಾಸೀನವೋ… ಮಹಿಳೆಯರಿಗೆ ನಾವು ಪ್ರಾತಿನಿಧ್ಯ ನೀಡುತ್ತಿಲ್ಲವೋ… ಅಥವಾ ನಮ್ಮ ಸಮಾಜದ ಕಟ್ಟುಪಾಡುಗಳು ಕಾರಣವೋ ಗೊತ್ತಿಲ್ಲ.

1962ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 30 ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿದಿದ್ದು, 18 ಅಭ್ಯರ್ಥಿಗಳು ಆಯ್ಕೆಯಾಗಿದ್ದು ಹೆಗ್ಗಳಿಕೆಯಾಗಿತ್ತು. ಅದೇ ರೀತಿ 1967ರ ಚುನಾವಣೆಯಲ್ಲಿ ಕೇವಲ 9 ಜನ ಮಾತ್ರ ಸ್ಪರ್ಧಿಸಿ 5 ಜನ ಆಯ್ಕೆಯಾಗಿದ್ದರು. 1972ರ ಚುನಾವಣೆಯಲ್ಲಿ 28 ಜನ ಮಹಿಳೆಯರು ಸ್ಪರ್ಧಿಸಿದ್ದಾಗ ಒಬ್ಬರೂ ಆಯ್ಕೆಯಾಗದಿದ್ದುದು ವಿಪರ್ಯಾಸವಾಗಿತ್ತು. 1978ರ ಚುನಾವಣೆಯಲ್ಲಿ 34 ಜನ ಮಹಿಳೆಯರನ್ನು ಕಣಕ್ಕಿಳಿದಿದ್ದರೂ ಕೇವಲ 8 ಜನ ಮಾತ್ರ ಚುನಾಯಿತರಾಗಿದ್ದಾರೆ. ಅದೇ ರೀತಿ 1983ರ ಚುನಾವಣೆಯಲ್ಲಿ 38 ಜನ ಮಹಿಳೆಯರು ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರೂ ಕೇವಲ ಒಬ್ಬರು ಮಾತ್ರ ಶಾಸನಸಭೆಗೆ ಆಯ್ಕೆಯಾದರೆ, 27 ಮಂದಿ ಠೇವಣಿ ಕಳೆದುಕೊಂಡಿದ್ದು ವಿಪರ್ಯಾಸ.

1985ರ ಚುನಾವಣೆಯಲ್ಲಿ ಕೇವಲ 8 ಮಂದಿ ಮಹಿಳೆಯರು ಮಾತ್ರ ಆಯ್ಕೆಯಾಗಿದ್ದರು. 1989ರಲ್ಲಿ 79 ಮಹಿಳೆಯರು ವಿವಿಧ ರಾಜಕೀಯ ಪಕ್ಷಗಳಿಂದ ಸ್ಪರ್ಧೆ ಮಾಡಿದಾಗ 10 ಜನ ಆಯ್ಕೆಯಾಗಿದ್ದರು. 62 ಮಂದಿ ಠೇವಣಿ ಕಳೆದುಕೊಂಡಿದ್ದರು. 1994ರಲ್ಲಿ 7 ಮಂದಿ ಮಹಿಳೆಯರು ಶಾಸನಸಭೆಗೆ ಆಯ್ಕೆಯಾಗಿದ್ದರು. 1999ರಲ್ಲಿ 62 ಮಂದಿ ಸ್ಪರ್ಧಿಸಿ 6 ಮಂದಿ ಆಯ್ಕೆಯಾಗಿ 44 ಜನ ಮಹಿಳೆಯರಿಗೆ ಠೇವಣಿ ಇಲ್ಲದಂತಾಗಿತ್ತು. ಅದೇ ರೀತಿ 2004ರ ಚುನಾವಣೆಯಲ್ಲಿ 101 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿದಿದ್ದರೂ ಆಯ್ಕೆಯಾಗಿದ್ದು ಮಾತ್ರ ಕೇವಲ 6 ಕ್ಷೇತ್ರಗಳಲ್ಲಿ. 84 ಕ್ಷೇತ್ರಗಳಲ್ಲಿ ಠೇವಣಿ ಇರಲಿಲ್ಲ. 2008ರ ಚುನಾವಣೆಯಲ್ಲಿ 107 ಮಹಿಳಾ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕೆ ಧುಮುಕಿ ಮೂವರು ಮಾತ್ರ ಜಯಗಳಿಸಲು ಸಾಧ್ಯವಾಯಿತು. 2013ರಲ್ಲಿ ರಾಜ್ಯಾದ್ಯಂತ 175 ಮಹಿಳೆಯರು ಚುನಾವಣಾ ಕಣದಲ್ಲಿದ್ದರು. ಅದರಲ್ಲಿ ಆಯ್ಕೆಯಾಗಿದ್ದು ಕೇವಲ 6 ಮಂದಿ ಮಾತ್ರ.  1952ರಿಂದ ಚುನಾವಣೆಯನ್ನು ಅವಲೋಕಿಸಿದಾಗ ಮಹಿಳಾ ಪ್ರಾಬಲ್ಯ ತುಂಬ ಕಡಿಮೆ. ಶೇ.ಅರ್ಧದಷ್ಟು ಮಹಿಳಾ ಮತದಾರರಿದ್ದರೂ ಪ್ರಾತಿನಿಧಿತ್ವ ಕಡಿಮೆ ಇದೆ.

ಪ್ರತಿಬಾರಿಯ ಚುನಾವಣೆಯಲ್ಲಿ ಮಹಿಳಾ ಆಕಾಂಕ್ಷಿಗಳು ಹೆಚ್ಚಾಗಿರುತ್ತಾರೆ. ಆದರೂ ಗೆದ್ದು ಗದ್ದುಗೆಗೇರುವವರು ಕಡಿಮೆ. ರಾಜಕೀಯ ಪಕ್ಷಗಳು ಮಹಿಳೆಯರಿಗೆ ಅಷ್ಟಾಗಿ ಪ್ರಾತಿನಿಧ್ಯ ನೀಡುವುದಿಲ್ಲ. ಮಹಿಳೆಯರು ತಮ್ಮ ಸ್ವ ಸಾಮಥ್ರ್ಯದಿಂದಲೇ ಮೇಲೆ ಬರಬೇಕು. ಆ ರೀತಿ ಬಂದವರೇ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಭುವಿಯಿಂದ ಬಾನಿನವರೆಗೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ವೈಜ್ಞಾನಿಕ ಕ್ಷೇತ್ರದಲ್ಲಿ ಮಹಿಳೆ ತನ್ನ ಸಾಧನೆಯನ್ನು ಮೆರೆದು ದೇಶದ ಕೀರ್ತಿ ಪತಾಕೆ ಹಾರಿಸಿದ್ದಾಳೆ. ಆದರೆ, ರಾಜಕೀಯ ಕ್ಷೇತ್ರದಲ್ಲಿ ಇದು ಕ್ಷೀಣ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಆಡಳಿತ ನಡೆಸಿದ ಉದಾಹರಣೆಗಳಿವೆ.

ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದರೆ, ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿದ್ದು, ಲೋಕಸಭೆ ಸ್ಪೀಕರ್ ಆಗಿ ಮೀರಾಕುಮಾರಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಸುಮಿತ್ರ ಮಹಾಜನ್ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ ಸೇರಿದಂತೆ ಸೋನಿಯಾಗಾಂಧಿ, ಅಂಬಿಕಾ ಸೋನಿ, ಮಾರ್ಗರೇಟ್ ಆಳ್ವ ಮುಂತಾದವರು ಉನ್ನತ ಸ್ಥಾನದಲ್ಲಿದ್ದಾರೆ. ಶೀಲಾ ದೀಕ್ಷಿತ್ ಅವರು ದೆಹಲಿ ಮುಖ್ಯಮಂತ್ರಿಯಾಗಿ ಮೂರು ಬಾರಿ ಆಡಳಿತ ನಡೆಸಿದರೆ, ದಿ. ಜಯಲಲಿತಾ ಅವರು ತಮಿಳುನಾಡಿನಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಸಮರ್ಥವಾಗಿ ಆಡಳಿತ ನಡೆಸಿದ್ದರು.

ಕರ್ನಾಟಕದಲ್ಲಿ ರಾಜಕೀಯ ಕ್ಷೇತ್ರವನ್ನು ಅವಲೋಕಿಸಿದರೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಕೆ.ಎಸ್.ನಾಗರತ್ನಮ್ಮ ಹೊರತುಪಡಿಸಿದರೆ ಉನ್ನತ ಸ್ಥಾನಕ್ಕೆ ಏರಿದ ಮಹಿಳೆಯರು ಯಾರೂ ಇದ್ದಂತಿಲ್ಲ. ಮೇಲ್ಮನೆ ಉಪಸಭಾಪತಿಯಾಗಿ ವಿಮಲಾಗೌಡ ಅವರು ಒಂದಷ್ಟು ಕಾಲ ಅಧಿಕಾರ ನಡೆಸಿದರು. ಅದನ್ನು ಹೊರತುಪಡಿಸಿದರೆ ಲೀಲಾದೇವಿ ಆರ್.ಪ್ರಸಾದ್, ಬಿ.ಟಿ.ಲಲಿತಾನಾಯಕ್, ನಫೀಜಾ ಫಜಲ್, ಮೋಟಮ್ಮ, ರಾಣಿ ಸತೀಶ್, ಶೋಭಾ ಕರಂದ್ಲಾಜೆ ಮುಂತಾದವರು ಸಚಿವರಾಗಿ ಅಧಿಕಾರ ನಡೆಸಿದ್ದರು. ಪ್ರಸ್ತುತ ವಿಧಾನಸಭೆಯಲ್ಲಿ ಆರು ಮಂದಿ ಮಾತ್ರ ಮಹಿಳಾ ಶಾಸಕರಿದ್ದು, ಉಮಾಶ್ರೀ, ಮಾಜಿ ಸಚಿವ ಎಚ್.ಸಿ.ಮಹದೇವ ಪ್ರಸಾದ್ ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಅವರು ಮಾತ್ರ ಸಚಿವರಾಗಿದ್ದಾರೆ.

ಬೇಟಿ ಬಚಾವೋ-ಬೇಟಿ ಪಡಾವೋ ಎಂಬ ಯೋಜನೆಯಿಂದ ಹಿಡಿದು ಮಹಿಳೆಯರನ್ನು ರಕ್ಷಿಸುವ ನೂರಾರು ಕಾಯ್ದೆಗಳು ನಮ್ಮಲ್ಲಿವೆ. ಅವರ ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕೆ, ಆರ್ಥಿಕ ಸ್ವಾವಲಂಬನೆಗೆ ಸಾಕಷ್ಟು ಕಾನೂನುಗಳಿವೆ. ಆದರೆ, ರಾಜಕೀಯ ಸ್ವಾವಲಂಬನೆಗೆ ಇನ್ನೂ ಕಾಯ್ದೆ ಜಾರಿಯಾಗಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಹೋರಾಟ ನಡೆಸಿ ತನ್ನ ಸ್ವ ಸಾಮಥ್ರ್ಯದಿಂದಲೇ ರಾಜಕೀಯದಲ್ಲಿ ನೆಲೆ ಕಾಣಬೇಕಿದೆ. ಶಾಸನ ಸಭೆಗಳಲ್ಲಿ ಶೇ.33ರಷ್ಟು ಮಹಿಳೆಯರಿಗೆ ರಾಜಕೀಯ ಮೀಸಲಾತಿ ಮಸೂದೆ ಪ್ರಸ್ತಾಪ ಇದೆ. ಆ ಮಸೂದೆ ಅಂಗೀಕಾರವಾಗಿ ಕಾಯ್ದೆಯಾದರೆ ರಾಜ್ಯದಲ್ಲಿ ಸುಮಾರು 72 ಮಹಿಳಾ ಪ್ರತಿನಿಧಿಗಳು ಶಾಸನ ಸಭೆಗೆ ಆಯ್ಕೆಯಾಗುತ್ತಾರೆ. ಸಂಸತ್‍ನಲ್ಲಿರುವ ಈ ಕಾಯ್ದೆ ಯಾವಾಗ ಜಾರಿಯಾಗುವುದು ಎಂಬುದು ಯಕ್ಷಪ್ರಶ್ನೆಯಾಗಿದೆ.

Facebook Comments

Sri Raghav

Admin