ಏ.12ರಂದು ಕರ್ನಾಟಕ ಬಂದ್‍

ಈ ಸುದ್ದಿಯನ್ನು ಶೇರ್ ಮಾಡಿ

karnataka-bandh

ಬೆಂಗಳೂರು, ಏ.5- ಕಾವೇರಿ ನಿರ್ವಹಣಾ ಮಂಡಳಿ ರಚನೆಗಾಗಿ ಆಗ್ರಹಿಸಿ ತಮಿಳುನಾಡು ಬಂದ್ ನಡೆಸುತ್ತಿರುವುದನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದ ವತಿಯಿಂದ ಏ.12ರಂದು ಕರ್ನಾಟಕ ಬಂದ್ ನಡೆಸಲು ತೀರ್ಮಾನಿಸಲಾಗಿದೆ. ಯಾವುದೇ ಕಾರಣಕ್ಕೂ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬಾರದು, ಮಂಡಳಿಗಾಗಿ ಆಗ್ರಹಿಸಿ ತಮಿಳುನಾಡು ನಡೆಸುತ್ತಿರುವ ತಮಿಳುನಾಡು ಬಂದ್‍ಗೆ ಪರ್ಯಾಯವಾಗಿ 12ರಂದು ಕರ್ನಾಟಕ ಬಂದ್ ಮಾಡುತ್ತೇವೆ ಎಂದು ವಾಟಾಳ್ ಇಂದಿಲ್ಲಿ ಹೇಳಿದರು.

ಹೊಸೂರು ರಸ್ತೆಯ ಅತ್ತಿಬೆಲೆ ಸಮೀಪ ಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಒಕ್ಕೂಟದ ಮುಖಂಡರಾದ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆಯ ಕೆ.ಆರ್.ಕುಮಾರ್, ಕರವೇ ಅಧ್ಯಕ್ಷ ಶಿವರಾಮೇಗೌಡ, ಪ್ರವೀಣ್‍ಕುಮಾರ್ ಶೆಟ್ಟಿ, ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ಮಂಜುನಾಥ್ ದೇವು, ಎಚ್.ಪಿ.ಗಿರೀಶ್‍ಗೌಡ ಮುಂತಾದವರ ನೇತೃತ್ವದಲ್ಲಿ ಹೊಸೂರು ಸಮೀಪ ಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ಕಾವೇರಿ ನಿರ್ವಹಣಾ ಮಂಡಳಿ ರಚಿಸದಂತೆ ಆಗ್ರಹಿಸಿದರು.

ತಮಿಳುನಾಡಿನ ಒತ್ತಾಯಕ್ಕೆ ಮಣಿದು ಕೇಂದ್ರ ಸರ್ಕಾರ ನೀರು ನಿರ್ವಹಣಾ ಮಂಡಳಿ ರಚನೆಗೆ ಯಾವುದೇ ಕಾರಣಕ್ಕೂ ಮುಂದಾಗಬಾರದು. ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನಿಂದ ಕೊಂಚ ನ್ಯಾಯ ಸಿಕ್ಕಿದೆ. ಈಗ ನೀರು ನಿರ್ವಹಣಾ ಮಂಡಳಿ ರಚನೆ ಮಾಡಿದರೆ ನಮ್ಮ ಎಲ್ಲ ಅಣೆಕಟ್ಟುಗಳ ಉಸ್ತುವಾರಿ ಕೇಂದ್ರದ ಪಾಲಾಗುತ್ತದೆ ಎಂದು ವಾಟಾಳ್ ಆತಂಕ ವ್ಯಕ್ತಪಡಿಸಿದರು.

ತಮಿಳುನಾಡು ಸರ್ಕಾರ ರಾಜಕೀಯ ಹೋರಾಟ ಮಾಡುತ್ತಿದೆ. ಸುಪ್ರೀಂಕೋರ್ಟ್ ತೀರ್ಪು ಮಾನ್ಯ ಮಾಡಬೇಕು. ನಟರಾದ ಕಮಲಹಾಸನ್, ರಜನಿಕಾಂತ್ ಅವರು ಕಾವೇರಿ ವಿಷಯದಲ್ಲಿ ಈವರೆಗೆ ದನಿ ಎತ್ತಿರಲಿಲ್ಲ. ಈಗ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಮಾತನಾಡುತ್ತಿದ್ದಾರೆ. ಅವರ ಚಿತ್ರಗಳನ್ನು ಇಲ್ಲಿ ಬಹಿಷ್ಕಾರ ಹಾಕಬೇಕೆಂದು ವಾಟಾಳ್ ಆಗ್ರಹಿಸಿದರು. ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರ ಸರ್ಕಾರ ಮುಂದಾದರೆ ನಾವೂ ಕೂಡ ಉಗ್ರ ಹೋರಾಟ ಮಾಡುತ್ತೇವೆ. ತಮಿಳುನಾಡು ಹೋರಾಟಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಅವರು ಹೇಳಿದರು.

ನಿನ್ನೆ ತಮಿಳುನಾಡಿನಲ್ಲಿ ಕಾವೇರಿಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವುದು ಹಾಸ್ಯಾಸ್ಪದವಾಗಿದೆ. ಕಾವೇರಿಯಿಂದ ಅವರಿಗೆ ಯಾವುದೇ ಅನ್ಯಾಯವಾಗಿಲ್ಲ. ನಮಗೆ ನಿರಂತರ ಅನ್ಯಾಯವಾಗಿದೆ. ಕೇಂದ್ರ ಹಾಗೂ ನ್ಯಾಯಾಲಯವು ರಾಜ್ಯಕ್ಕೆ ಇನ್ನೂ ಹೆಚ್ಚಿನ ನ್ಯಾಯ ಒದಗಿಸಬೇಕೆಂದು ವಾಟಾಳ್ ಮನವಿ ಮಾಡಿದರು.

Facebook Comments

Sri Raghav

Admin