ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್ ದೋಷಿ : ಸೈಫ್, ಸೋನಾಲಿ, ಟಬು, ನೀಲಂ ಖುಲಾಸೆ

ಈ ಸುದ್ದಿಯನ್ನು ಶೇರ್ ಮಾಡಿ

Salman-khan--01

ಜೋಧ್‍ಪುರ್, ಏ.5-ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ನ್ಯಾಯಾಲಯದ ಈ ತೀರ್ಪಿನಿಂದಾಗಿ ಸಲ್ಮಾನ್ ಖಾನ್ ಭವಿಷ್ಯಕ್ಕೆ ಭಾರೀ ಆಘಾತವುಂಟು ಮಾಡಿದೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಿವುಡ್ ತಾರೆಯರಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಅವರನ್ನು ಈ ಪ್ರಕರಣದಲ್ಲಿ ಕೋರ್ಟ್ ಖುಲಾಸೆಗೊಳಿಸಿದೆ.

ಸಲ್ಮಾನ್ ದೋಷಿ:
ವನ್ಯಜೀವಿ ಕಾಯ್ದೆ 9/52 ಪ್ರಕಾರ ಕೃಷ್ಣಮೃಗಗಳನ್ನು ಬೇಟೆಯಾಡಿ ನಿಯಮ್ಮ ಉಲ್ಲಂಘಿಸಿರುವುದು ಸಾಬೀತಾಗಿರುವುದರಿಂದ ನ್ಯಾಯಾಲಯ ಅವರನ್ನು ದೋಷಿ ಎಂದು ಪರಿಗಣಿಸಿದೆ ಎಂದು ನ್ಯಾಯಮೂರ್ತಿ ದೇವು ಕುಮಾರ್ ಖತ್ರಿ ತೀರ್ಪು ಪ್ರಕಟಿಸಿದರು. ತೀರ್ಪು ಪ್ರಕಟವಾಗತ್ತಿದ್ದಂತೆ ಕಟಕಟೆಯಲ್ಲಿದ್ದ ಸಲ್ಮಾನ್ ಖಾನ್ ಕೆಲಕಾಲ ದಿಕ್ಕು ತೋಚದೆ ಆಘಾತಕ್ಕೆ ಒಳಗಾದರು. ಇದಕ್ಕೂ ಮುನ್ನ ತೀರ್ಪು ಪ್ರಕಟಣೆ ವೇಳೆ ಸಲ್ಮಾನ್ ಖಾನ್ ಸೇರಿದಂತೆ ಎಲ್ಲ ನಟ-ನಟಿಯರು ಕೋರ್ಟ್‍ನಲ್ಲಿ ಹಾಜರಿದ್ದರು. ತೀರ್ಪು ಪ್ರಕಟಣೆ ವೇಳೆ ಕೋರ್ಟ್ ಮತ್ತು ಅದರ ಸುತ್ತಮುತ್ತ ಪ್ರದೇಶಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುಖ್ಯ ನ್ಯಾಯಾಂಗ ದಂಡಾಧಿಕಾರಿ ದೇವು ಕುಮಾರ್ ಖತ್ರಿ ಈ ತೀರ್ಪು ಪ್ರಕಟಿಸುತ್ತಿದ್ದಂತೆ ಸಲ್ಮಾನ್ ಖಾನ್ ಕೆಲ ಕ್ಷಣ ಆಘಾತಕ್ಕೆ ಒಳಗಾದರು.

ಪ್ರಕರಣದ ಹಿನ್ನೆಲೆ:
1998ರಲ್ಲಿ ಹಮ್ ಸಾಥ್ ಸಾಥ್ ಹೈ ಸಿನಿಮಾ ಚಿತ್ರೀಕರಣದ ವೇಳೆ ಇಲ್ಲಿಗೆ ಸಮೀಪದ ಕಂಕಣಿ ಗ್ರಾಮದಲ್ಲಿ 52 ವರ್ಷದ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು(ಬ್ಲಾಕ್ ಬಕ್) ಬೇಟೆಯಾಡಿ ಕೊಂದಿದ್ದರು. ಈ ಬೇಟೆಗೆ ಪರವಾನಗಿ ಇಲ್ಲದ ಬಂದೂಕು ಬಳಕೆ ಮಾಡಲಾಗಿತ್ತು ಎಂಬ ಆರೋಪವೂ ಇತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಬಳಕೆ ಕಾಯ್ದೆ ಅಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಳೆದ ಮಾರ್ಚ್ 28ರಂದು ವಾದ-ಪ್ರತಿವಾದ ಆಲಿಕೆ ಪ್ರಕ್ರಿಯೆಗಳನ್ನು ಮುಗಿಸಿದ್ದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.  ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಬಾಲಿವುಡ್ ತಾರೆಯರರಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಅವರನ್ನು ಸಹ ಆರೋಪಿಗಳೆಂದು ಪರಿಗಣಿಸಲಾಗಿತ್ತು.

ಜೋಧ್‍ಪುರ್‍ನ ಕಂಕಣಿ ಗ್ರಾಮದ ಬಳಿ ಭಾಗೋಡಾಕಿ ಧನಿ ಪ್ರದೇಶದಲ್ಲಿ 1998ರ ಅಕೋಬರ್ 1 ಮತ್ತು 2ರ ಮಧ್ಯರಾತ್ರಿ ಈ ತಾರೆಯರು ಎರಡು ಕೃಷ್ಣಮೃಗಗಳನ್ನು ಕೊಂದಿದ್ದರು ಎಂಬ ಆರೋಪ ಇತ್ತು. ಈ ತಾರೆಯರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಸಾರ್ವಜನಿಕ ಅಭಿಯೋಜಕ (ಪಿಪಿ) ಭವಾನಿ ಸಿಂಗ್ ಭಾತಿ ನ್ಯಾಯಾಲಯಕ್ಕೆ ತಿಳಿಸಿದ್ದರು.  ಈ ಆರೋಪಗಳನ್ನು ತಳ್ಳಿ ಹಾಕಿದ್ದ ಸಲ್ಮಾನ್ ಖಾನ್ ಪರ ವಕೀಲ ಎಚ್.ಎಂ. ಸರಸ್ವತ್, ಪ್ರಾಸಿಕ್ಯೂಷನ್ ಹೇಳಿಕೆಯಲ್ಲಿ ಅನೇಕ ಲೋಪದೋಷಗಳಿವೆ ಹಾಗೂ ಯಾವುದೇ ಅನುಮಾನದ ಆಚೆಗೆ ಅದನ್ನು ರುಜುವಾತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ವಾದಿಸಿದ್ದರು.

ಆರೋಪಿ ವಿರುದ್ಧ ಅರೋಪಗಳನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಹಾಗೂ ಸಾಕ್ಷ್ಯಾಧಾರಗಳನ್ನು ತಿರುಚಿ, ಸುಳ್ಳು ಸೃಷ್ಟಿಗಳನ್ನು ಮಾಡಲಾಗಿದೆ. ಅಲ್ಲದೇ ನಕಲೀ ಸಾಕ್ಷಿದಾರರನ್ನೂ ಈ ಪ್ರಕರಣದಲ್ಲಿ ಬಳಸಿಕೊಳ್ಳಲಾಗಿದೆ. ಮಾತ್ರವಲ್ಲದೇ. ಬಂದೂಕಿನಿಂದ ಎರಡು ಕೃಷ್ಣಮೃಗಗಳು ಕೊಲ್ಲಲ್ಪಟ್ಟಿವೆ ಎಂಬುದನ್ನು ರುಜುವಾತು ಮಾಡಲು ವಿಫಲವಾಗಿದೆ. ಆದಕಾರ, ಇಂಥ ತನಿಖೆಯ ಮೇಲೆ ವಿಶ್ವಾಸ ಹೊಂದಲು ಸಾಧ್ಯವಿಲ್ಲ ಎಂದು ಸಲ್ಮಾನ್ ಪರ ವಕೀಲರ ಸರಸ್ವತ್ ವಾದ ಮಂಡಿಸಿದ್ದರು.  ಈ ಪ್ರಕರಣದಲ್ಲಿ ಬೇಟೆಯಾಡಲು ಸಹಕರಿಸಿದ್ದಾರೆಂಬ ದುಷ್ಯಂತ್ ಸಿಂಗ್ ಮತ್ತು ದಿನೇಶ್ ಗಾರ್ವೆ (ಸಲ್ಮಾನ್ ಸಹಾಯಕ) ಅವರನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿತ್ತು.

ಕೃಷ್ಣ ಮೃಗ ಬೇಟೆ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು. ಅವನತಿಯ ಅಂಚಿನಲ್ಲಿರುವ ಈ ಮೃಗಗಳನ್ನು ಬೇಟೆಯಾಡಿದ ಸಲ್ಮಾನ್ ಖಾನ್ ಮತ್ತು ಇತರ ನಟ-ನಟಿಯರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪ್ರಾಣಿ ಪ್ರಿಯರು ಮತ್ತು ಪರಿಸರವಾದಿಗಳು ಆಗ್ರಹಿಸಿದ್ದರು.  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಈ ಪ್ರಕರಣದಲ್ಲಿ ದೋಷಿಯಾಗಿರುವುದರಿಂದ ಇವರ ನಟಿಸುತ್ತಿರುವ ಚಿತ್ರಗಳ ಚಿತ್ರೀಕರಣದ ಮೇಲೆ ಕರಾಳ ಛಾಯೆ ಆವರಿಸಿದಂತಾಗಿದೆ.

Facebook Comments

Sri Raghav

Admin