ಸಂಸತ್‍ನಲ್ಲಿ ಅದೇ ರಾಗ, ಅದೇ ಹಾಡಿಗೆ 21ನೇ ದಿನದ ಕಲಾಪವೂ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Session-Parliment

ನವದೆಹಲಿ, ಏ.3-ಕಾವೇರಿ ನಿರ್ವಹಣಾ ಮಂಡಳಿ ರಚನೆ ಸೇರಿದಂತೆ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 21ನೇ ದಿನವಾದ ಇಂದೂ ಕೂಡ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗಿ ಉಭಯ ಸದನಗಳ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.  ಮಾ.5ರಿಂದಲೂ ಎರಡೂ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯದೇ ಯಥಾಸ್ಥಿತಿ ಬಿಕ್ಕಟ್ಟು ಮುಂದುವರಿದಂತಾಗಿದೆ. ಶೂನ್ಯ ಸಂಸತ್ತಿನ ಕಲಾಪ ಶುಕ್ರವಾರ ಮುಗಿಯಲಿದ್ದು, ಯಾವುದೇ ವಿಷಯಗಳು ಚರ್ಚೆಯಾಗದೇ ವೈಟ್‍ವಾಶ್ ಆಗುವ ಸಾಧ್ಯತೆ ಇದೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಬಿಗಿಪಟ್ಟು ಮುಂದುವರಿಸಿರುವ ಎಐಎಡಿಎಂಕೆ ಸದಸ್ಯರು ಧರಣಿ ಮುಂದುವರಿಸಿದರು. ತೆಲುಗು ದೇಶಂ ಪಕ್ಷದ ಸದಸ್ಯರು ವಿಶೇಷ ಪ್ಯಾಕೇಜ್‍ಗೆ ಪಟ್ಟು ಹಿಡಿದರು.  ಪ್ರತಿಭಟನೆ ತೀವ್ರಗೊಂಡಿದ್ದರಿಂದ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ಸುಮಿತ್ರ ಮಹಾಜನ್ ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಮತ್ತೆ ಮತ್ತೆ ಮನವಿ ಮಾಡಿದರೂ ಯಥಾಸ್ಥಿತಿ ಮುಂದುವರಿಯಿತು. ಇದರಿಂದಾಗಿ ಅವರು ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಿದರು.
ಪುನ: ಕಲಾಪ ಸಮಾವೇಶಗೊಂಡಾಗ ಅದೇ ಪರಿಸ್ಥಿತಿ ಮುಂದುವರಿದು ಸದನವನ್ನು ನಾಳೆಗೆ ಮುಂದೂಡಿದರು.   ಮೇಲ್ಮನೆ ಕಲಾಪ ನಾಳೆಗೆ ಮುಂದೂಡಿಕೆ : ಮುಂದುವರೆದ ಬಜೆಟ್ ಅವೇಶನದ 21ನೇ ದಿನವೂ ಇದೇ ವಿಷಯಗಳು ಮೇಲ್ಮನೆ ಕಲಾಪವನ್ನು ಬಲಿ ತೆಗೆದುಕೊಂಡಿವೆ.

ಪ್ರತಿಭಟನಾನಿರತ ಸದಸ್ಯರನ್ನು ಸಮಾಧಾನಪಡಿಸಲು ಸಭಾಪತಿ ವೆಂಕಯ್ಯ ನಾಯ್ಡು ಪುನರಾವರ್ತಿತ ಮನವಿ ಮಾಡಿದರೂ ಪರಿಸ್ಥಿತಿ ತಿಳಿಗೊಳ್ಳಲಿಲ್ಲ. ಇದರಿಂದ ಬೇಸತ್ತ ನಾಯ್ಡು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಸದಸ್ಯರ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಚರ್ಚೆಗೆ ಅವಕಾಶ ನೀಡುವುದಾಗಿ ಸರ್ಕಾರ ಸ್ಪಷ್ಟಪಡಿಸಿದ್ದರೂ ಇಂಥ ನಡವಳಿಕೆ ಸಲ್ಲದು ಎಂದು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

Facebook Comments

Sri Raghav

Admin