ಬಗರ್ ಹುಕುಂ ಭೂ ಚಕ್ರ ಸುಳಿಗೆ ಸಿಲುಕಿದ ಶಾಸಕ ಎಂ.ಟಿ.ಬಿ.ನಾಗರಾಜ್

ಈ ಸುದ್ದಿಯನ್ನು ಶೇರ್ ಮಾಡಿ

MTB-Nagaraj--01
ಬೆಂಗಳೂರು, ಏ.6-ಬಗರ್ ಹುಕುಂ ಸಾಗುವಳಿ ಯೋಜನೆಯಡಿ ಸರಿಸುಮಾರು 280 ಕೋಟಿ ಮೌಲ್ಯದ 140 ಎಕರೆ ಜಮೀನನ್ನು ತಮ್ಮ ಸಂಬಂಧಿಕರಿಗೆ ಮತ್ತು ಹಿಂಬಾಲಕರಿಗೆ ಹಂಚಿಕೆ ಮಾಡಿರುವ ಆರೋಪಕ್ಕೆ ಶಾಸಕ ಎಂ.ಟಿ.ಬಿ.ನಾಗರಾಜ್ ಗುರಿಯಾಗಿದ್ದಾರೆ. ಬಗರ್ ಹುಕುಂ ಸಾಗುವಳಿ ಸಕ್ರಮ ಸಮಿತಿ ಅಧ್ಯಕ್ಷರಾಗಿದ್ದ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿ.ಬಿ.ನಾಗರಾಜ್ ಅವರು ನಿಯಮ ಮೀರಿ 140.15 ಎಕರೆ ಜಮೀನನ್ನು ತಮ್ಮ ಸಂಬಂಧಿಕರಿಗೆ ಹಂಚಿಕೆ ಮಾಡಿರುವ ಆರೋಪದ ವಿರುದ್ಧ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಇಂದು ಎಸಿಬಿಗೆ ದಾಖಲೆ ಸಮೇತ ದೂರು ಸಲ್ಲಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಹೊಸಕೋಟೆ ತಾಲೂಕಿನಲ್ಲಿ ಪ್ರತಿ ಎಕರೆಗೆ 2 ರಿಂದ 8 ಕೋಟಿ ರೂ. ಮಾರುಕಟ್ಟೆ ಮೌಲ್ಯವಿದೆ.

ಇಂತಹ ಪ್ರದೇಶದಲ್ಲಿ ಕಾನೂನು ದುರುಪಯೋಗಪಡಿಸಿಕೊಂಡಿರುವ ಎಂ.ಟಿ.ಬಿ.ನಾಗರಾಜ್ ಅವರು ಸೂಲಿಬೆಲೆ, ನಂದಗುಡಿ ಮತ್ತಿತರ ಗ್ರಾಮಗಳಲ್ಲಿ 2016-17ನೆ ಸಾಲಿನ ಒಂದೇ ವರ್ಷದಲ್ಲಿ ಸುಮಾರು 280 ಕೋಟಿ ರೂ. ಮೌಲ್ಯದ 140.15 ಎಕರೆ ಜಮೀನಿನ ಪೈಕಿ 102.11 ಎಕರೆ ಭೂಮಿಯನ್ನು ತಮಗೆ ಬೇಕಾದವರಿಗೆ ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ. ನಿಯಮಗಳ ಪ್ರಕಾರ, ಗೋಮಾಳ, ಗುಂಡುತೋಪು, ಎ ಮತ್ತು ಬಿ ಖರಾಬಿನ ಜಮೀನಿನಲ್ಲಿ 20 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರುತ್ತಿರುವ ರೈತರಿಗೆ ಗರಿಷ್ಠ 3 ಎಕರೆ ಜಮೀನನ್ನು ಬಗರ್ ಹುಕುಂ ಯೋಜನೆಯಡಿ ಮಂಜೂರು ಮಾಡಬಹುದಾಗಿದೆ.

ಆದರೆ, ಶಾಸಕರು ತಮ್ಮ ಸಂಬಂಧಿಕರಿಗೆ ಮತ್ತು ಒಂದೇ ಕುಟುಂಬದ ನಾಲ್ಕೈದು ಮಂದಿಗೆ ಭೂಮಿ ಮಂಜೂರು ಮಾಡಿ ಅಕ್ರಮವೆಸಗಿದ್ದಾರೆ. ಇವರ ಈ ಅಕ್ರಮಕ್ಕೆ ಹೊಸಕೋಟೆ ತಹಸೀಲ್ದಾರ್, ಕಂದಾಯ ಅಧಿಕಾರಿಗಳು ಬೆಂಬಲ ನೀಡಿದ್ದು, ಇವರೆಲ್ಲರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

Facebook Comments

Sri Raghav

Admin