ಚಿಕ್ಕಬಳ್ಳಾಪುರದಲ್ಲಿ ನಡುರಸ್ತೆಯಲ್ಲೇ ಕುತ್ತಿಗೆ ಕೊಯ್ದು ವ್ಯಕ್ತಿಯ ಭೀಕರ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ,ಏ.7-ವ್ಯಕ್ತಿಯೊಬ್ಬನ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ತಡರಾತ್ರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಸೂಲಕುಂಟೆ ಗ್ರಾಮದ ಚಾಯಕುಮಾರ್(30) ಕೊಲೆಯಾದ ದುರ್ದೈವಿ. ಎಂ.ಜಿ ರಸ್ತೆಯ ಶಿವಪ್ಪ ಎಂಬುವರ ಮಗಳು ಜಾನಕಿ ಲಕ್ಷ್ಮಿಅವರೊಂದಿಗೆ ನಾಲ್ಕೂವರೆ ವರ್ಷದ ಹಿಂದೆ ಚಾಯಕುಮಾರ್ ವಿವಾಹವಾಗಿದ್ದು , ಇವರಿಗೆ ಮೂರು ವರ್ಷದ ಮಗಳಿದ್ದಾಳೆ.

Chikkaballapur

ಕಳೆದ ಎರಡು ವರ್ಷಗಳಿಂದ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.  ಟ್ರ್ಯಾಕ್ಟರ್ ಕೂಲಿ ಕಾರ್ಮಿಕನಾದ ಚಾಯಕುಮಾರ್ ಮದ್ಯವ್ಯಸನಿಯಾಗಿದ್ದು , ಸರಿಯಾಗಿ ಮನೆಗೂ ಬರುತ್ತಿರಲಿಲ್ಲ. ದಂಪತಿ ನಡುವೆ ಒಂದಲ್ಲ ಒಂದು ಕಾರಣಕ್ಕಾಗಿ ಪ್ರತಿನಿತ್ಯ ಜಗಳ ನಡೆಯುತ್ತಿದ್ದರಿಂದ ಪೋಷಕರು ಚಾಯಕುಮಾರ್‍ಗೆ ಬುದ್ದಿವಾದ ಹೇಳಿ ರಾಜಿ ಪಂಚಾಯ್ತಿ ನಡೆಸಿ ಹೊಂದಿಕೊಂಡು ಹೋಗುವಂತೆ ಮನವೊಲಿಸಿದ್ದರು.

ಕೆಲ ದಿನಗಳು ತಣ್ಣಗಾಗಿದ್ದ ಚಾಯಕುಮಾರ್ ಮತ್ತೆ ತನ್ನ ಕ್ಯಾತೆ ತೆಗೆದು ಪತ್ನಿ ಜೊತೆ ವಿನಾಕಾರಣ ಜಗಳವಾಡುತ್ತಿದ್ದನು ಎಂದು ನೆರೆಹೊರೆಯವರು ಹೇಳಿದ್ದಾರೆ. ಈ ನಡುವೆ ತಡರಾತ್ರಿ ದುಷ್ಕರ್ಮಿಗಳು ಚಾಯಕುಮಾರ್‍ನ ಕುತ್ತಿಗೆಗೆ ಚಾಕು ಇರಿದಿದ್ದಾರೆ. ಇರಿತಕ್ಕೊಳಗಾದ ಈತ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ನಗರದ ಹೊಸ ಜಿಲ್ಲಾಸ್ಪತ್ರೆವರೆಗೂ ಬಂದು ಕುಸಿದು ಬಿದ್ದು ಮೃತಪಟ್ಟಿದ್ದಾನೆ.  ಇಂದು ಮುಂಜಾನೆ ಈ ಮಾರ್ಗದಲ್ಲಿ ಹೋಗುತ್ತಿದ್ದವರು ಶವವನ್ನು ಕಂಡು ತಕ್ಷಣ ನಗರ ಪೊಲೀಸರಿಗೆ ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಡಿವೈಎಸ್ಪಿ ಪ್ರಭುಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿತ್ತು. ಘಟನೆ ಸಂಬಂಧ ಛಾಯಕುಮಾರನ ಪತ್ನಿ ಜಾನಕಿ ಲಕ್ಷ್ಮಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಯಾರು ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin