ಭಾರತಕ್ಕೆ 3ನೇ ಚಿನ್ನ ಗೆದ್ದುಕೊಟ್ಟ ಸತೀಶ್ ಕುಮಾರ್
ಗೋಲ್ಡ್ ಕೋಸ್ಟ್, ಏ.7- ಆಸ್ಟ್ರೇಲಿಯಾ ಗೋಲ್ಡ್ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಗಳಿಕೆ ಪಾರಮ್ಯ ಮುಂದುವರಿದಿದೆ. ಪುರುಷರ ವಿಭಾಗದ 77 ಕೆಜಿ ವೇಟ್ಲಿಫ್ಟಿಂಗ್ನಲ್ಲಿ ಸತೀಶ್ ಕುಮಾರ್ ಶಿವಲಿಂಗಂ ಚಿನ್ನ ಪದಕ ಗೆದ್ದಿದ್ದಾರೆ.
ಇದರೊಂದಿಗೆ ಭಾರತ ಈವರೆಗೆ ಮೂರು ಬಂಗಾರದ ಪದಕಗಳನ್ನು ಜಯಿಸಿದಂತಾಗಿದೆ. 25 ವರ್ಷದ ಸತೀಶ್ ಒಟ್ಟು 317 ಕೆಜಿ (144 ಕೆಜಿ+173 ಕೆಜಿ) ಭಾರ ಎತ್ತುವ ಮೂಲಕ ಚಿನ್ನ ಗೆಲುವಿನ ನಗೆ ಬೀರಿದರು.
ತೊಡೆಗಳಿಗೆ ಪೆಟ್ಟಾಗಿದ್ದರಿಂದ ಕುಳಿತುಕೊಳ್ಳುವಾಗಲೂ ನೋವು ಅನುಭವಿಸುತ್ತಿದ್ದ ಸತೀಸ್ ಗೆಲುವಿನ ಭರವಸೆ ಹೊಂದಿರಲಿಲ್ಲ. ಆದರೆ ಆತ್ಮವಿಶ್ವಾಸ ಮತ್ತು ಛಲದಿಂದ ಅವರು ಗೆಲುವು ಸಾಧಿಸಿ ಪೋಡಿಯಂನಲ್ಲಿ ಮೊದಲ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು. ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಭಾರತ ಮೂರು ಬಂಗಾರ ಪದಕಗಳನ್ನು ಗೆಲ್ಲುವ ಸಾಧನೆ ಮಾಡಿದೆ. 48 ಕೆ.ಜಿ ಮಹಿಳಾ ವಿಭಾಗದಲ್ಲಿ ಸಾಯಿಕೋಮ್ ಮೀರಾಭಾಯಿ ಚಾನು ಚಿನ್ನದ ಪದಕ ಗಳಿಸಿದ್ದಾರೆ. ಸಂಜಿತಾ ಚಾನು ಅವರು 53 ಕೆ.ಜಿ ಮಹಿಳಾ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಸುವರ್ಣ ಸಾಧನೆ ಮಾಡಿದ್ದಾರೆ. ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಪದಕ ಜಯಿಸಿದ ಹೆಗ್ಗಳಿಕೆ ಕನ್ನಡಿಗ ಕುಂದಾಪುರದ ಗುರುರಾಜ್ ಪೂಜಾರಿ ಅವರದ್ದಾಗಿದೆ. 56 ಕೆಜಿ ಪುರುಷರ ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಭಾರತಕ್ಕೆ ವೇಟ್ಲಿಫ್ಟಿಂಗ್ನಲ್ಲಿ ಒಟ್ಟು ಐದು ಪದಕಗಳು ಲಭಿಸಿವೆ. ಹರ್ಯಾಣದ 18 ವರ್ಷದ ದೀಪಕ್ ಲ್ಯಾಥೆರ್ ಕಂಚು ಗೆದ್ದಿದ್ದಾರೆ.