ಎಲೆಕ್ಷನ್ ಎಫೆಕ್ಟ್ ನಿಂದ 500 ರೂ. ನೋಟುಗಳ ಅಭಾವ..!

ಈ ಸುದ್ದಿಯನ್ನು ಶೇರ್ ಮಾಡಿ

Black-Money--02

ಬೆಂಗಳೂರು, ಏ.8-ಐನೂರು ರೂಪಾಯಿ ನೋಟುಗಳ ಅಭಾವ ಎದುರಾಗಿದೆ. ಚುನಾವಣಾ ಸಂದರ್ಭದಲ್ಲಿ 500 ರೂ. ಮುಖಬೆಲೆಯ ನೋಟುಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತಿತ್ತು. ಒಂದು ಸಾವಿರ ಮುಖಬೆಲೆಯ ನೋಟು ನಿಷೇಧದ ನಂತರ 2000 ಹಾಗೂ 500ರೂ. ಮುಖಬೆಲೆಯ ಹೊಸ ನೋಟುಗಳನ್ನು ಜಾರಿಗೆ ತರಲಾಗಿತ್ತು. ಚುನಾವಣೆಯ ಈ ಸಂದರ್ಭದಲ್ಲಿ 1000 ಮುಖಬೆಲೆಯ ನೋಟು ಇಲ್ಲದ ಪರಿಣಾಮ 500ರ ಮುಖಬೆಲೆಯ ನೋಟುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, 2000 ರೂ. ಮುಖಬೆಲೆಯ ನೋಟುಗಳ ಬಂಡಲ್ ಹಿಡಿದು 500 ರೂ.ನೋಟುಗಳಿಗೆ ಪರಿವರ್ತನೆ ಮಾಡಿಕೊಳ್ಳಲು ಬಹಳಷ್ಟು ಮಂದಿ ಪರದಾಡುತ್ತಿದ್ದಾರೆ. ಈಗಾಗಲೇ ಹಲವರು 500ರೂ. ನೋಟುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ.

ಬ್ಯಾಂಕ್‍ಗಳಲ್ಲಿ, ಎಟಿಎಂಗಳಲ್ಲಿ 500ರೂ. ಮುಖಬೆಲೆಯ ನೋಟುಗಳ ಕೊರತೆ ಎದ್ದು ಕಾಣುತ್ತಿದೆ. 500, 200, 100 ರೂ. ಮುಖಬೆಲೆಯ ನೋಟುಗಳ ಸಂಗ್ರಹಕ್ಕಾಗಿ ರಾಜಕಾರಣಿಗಳು, ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಕಸರತ್ತು ನಡೆಸಿದ್ದಾರೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಈ ಮುಖಬೆಲೆಯ ನೋಟುಗಳು ಬಹಳ ಅಗತ್ಯವಾಗಿದೆ.

ಪ್ರತಿದಿನ ಪ್ರಚಾರಕ್ಕೆ ಬರುವವರಿಗೆ, ಚುನಾವಣೆ ಕೆಲಸಗಳಿಗೆ ನಿಯೋಜನೆಗೊಂಡವರಿಗೆ ಹಣ ಹಂಚಿಕೆ ಮಾಡಲು ಸುಲಭವಾಗುವುದರಿಂದ ಕಡಿಮೆ ಮುಖಬೆಲೆಯ ನೋಟುಗಳ ಅಗತ್ಯವಿರುವುದರಿಂದ 500ರೂ. ನೋಟುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲು ಮುಂದಾಗಿದ್ದಾರೆ. ದೂರದೃಷ್ಟಿ ಇಟ್ಟುಕೊಂಡವರು ಈಗಾಗಲೇ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಟಿಕೆಟ್ ಘೋಷಣೆಯಾದ ಮೇಲೆ ಅಭ್ಯರ್ಥಿ ಪರ ಪ್ರಚಾರಕ್ಕೆ ನೂರಾರು ಜನ ಬರುತ್ತಾರೆ. ಅವರೆಲ್ಲರಿಗೂ ಕನಿಷ್ಠ 500ರೂ. ದಿನವೊಂದಕ್ಕೆ ನೀಡಬೇಕು. ಎಲ್ಲರಿಗೂ 2000 ರೂ. ಮುಖಬೆಲೆಯ ನೋಟು ನೀಡುವುದು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಈಗಲೇ ಎಲ್ಲವನ್ನು ರೆಡಿ ಮಾಡಿ ಇಟ್ಟುಕೊಳ್ಳುತ್ತಿದ್ದಾರೆ. ಅದೇ ರೀತಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಪಕ್ಷಗಳ ರ್ಯಾಲಿ, ಸಮಾವೇಶ, ರೋಡ್‍ಶೋ ಗೆ ಆಗಮಿಸುವ ಎಲ್ಲರಿಗೂ ಹಣ ನೀಡಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಕಡಿಮೆ ಮುಖಬೆಲೆಯ ನೋಟುಗಳ ಅಗತ್ಯವಿರುವುದರಿಂದ ಎಲ್ಲರೂ 500, 100 ರೂ. ಮುಖಬೆಲೆಯ ನೋಟುಗಳತ್ತ ಮುಖ ಮಾಡಿದ್ದಾರೆ.

ಬಹುತೇಕ ಬ್ಯಾಂಕ್‍ಗಳಲ್ಲಿ 500, 100ರ ನೋಟುಗಳನ್ನೇ ಕೇಳಿ ಪಡೆಯುತ್ತಿದ್ದಾರ. ಹೀಗಾಗಿ ಇದರ ಅಭಾವ ಉಂಟಾಗಿದೆ ಎಂದೇ ಹೇಳಲಾಗುತ್ತಿದೆ. ಎಟಿಎಂಗಳಲ್ಲೂ ಕೂಡ 500ರೂ.ಗಳ ನೋಟು ದೊರೆಯುತ್ತಿಲ್ಲ. ಹೆಚ್ಚಿನ ಮೊತ್ತದ ಹಣ ಪಡೆಯುವ ಬಟನ್ ಒತ್ತಿದರೆ 2000 ರೂ. ನೋಟುಗಳು ಬರುತ್ತವೆ. 500ರೂ. ನೋಟುಗಳು ಸಿಗುತ್ತಿಲ್ಲ.

Facebook Comments

Sri Raghav

Admin