ರಾಹುಲ್ ಗಾಂಧಿ ವಿರುದ್ಧ ಶೋಭಾಕರಂದ್ಲಾಜೆ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Rahul-And-SHobha
ಬೆಂಗಳೂರು,ಏ.8- ಅಭಿವೃದ್ಧಿ ಆಧಾರದಲ್ಲಿ ಮತಯಾಚನೆ ಮಾಡದೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಹೋದ ಕಡೆಯಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಟೀಕೆ ಮಾಡುವ ಮೂಲಕ ಮತಯಾಚನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಂಸದೆ ಶೋಭಾಕರಂದ್ಲಾಜೆ ವಾಗ್ದಾಳಿ ನಡೆಸಿದರು. ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂಬುದನ್ನು ರಾಹುಲ್‍ಗಾಂಧಿ ಮತದಾರರಿಗೆ ಮನವರಿಕೆಮಾಡಿಕೊಡಬೇಕಿತ್ತು. ಎಲ್ಲಾ ರಂಗಗಳಲ್ಲೂ ವಿಫಲವಾಗಿರುವುದರಿಂದ ಅಭಿವೃದ್ಧಿ ಆಧಾರದಲ್ಲಿ ಮತ ಕೇಳಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‍ಗಾಂಧಿ ಪ್ರವಾಸದ ವೇಳೆ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿರುವ ಹಗರಣಗಳ ಬಗ್ಗೆ ಅವರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ 12 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಇದನ್ನು ಅನುಷ್ಠಾನ ಮಾಡುವುದಕ್ಕಾಗಿ ಪೈಪ್‍ಗಳನ್ನು ಖರೀದಿಸಲಾಗಿದೆ. ಆದರೆ, ಇವುಗಳನ್ನು ಏಕೆ ಅಳವಡಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಅಣೆಕಟ್ಟು ಕಟ್ಟದೆ ಪೈಪ್ ಖರೀದಿ ಮಾಡಲು ಮುಂದಾಗಿದ್ದು ಏಕೆ ಎಂಬುದನ್ನು ರಾಹುಲ್‍ಗಾಂಧಿ ಸ್ಪಷ್ಟಪಡಿಸಲು ಸಿದ್ದರಿದ್ದಾರೆಯೇ ? ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಇದಕ್ಕೆ ಸಿದ್ದರಾಮಯ್ಯನವರೇ ನೇರ ಹೊಣೆ ಎಂದು ಆರೋಪಿಸಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ ವೇಳೆ ಈ ಬಗ್ಗೆ ರಾಹುಲ್‍ಗಾಂಧಿ ಒಂದೇ ಒಂದು ಚಕಾರ ಎತ್ತಲಿಲ್ಲ. ಕೇವಲ ಬಿಜೆಪಿ, ಆರ್‍ಎಸ್‍ಎಸ್ ಹಾಗೂ ಮೋದಿ ಅವರನ್ನು ಟೀಕೆ ಮಾಡಲು ತಮ್ಮ ಸಮಯವನ್ನು ಮೀಸಲಿಟ್ಟರು. ನಾವು ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದರೆ ಯೋಜನೆ ಅನುಷ್ಠಾನ ಮಾಡದೆ ಇರುವ ಬಗ್ಗೆ ಎರಡು ಜಿಲ್ಲೆಗಳ ಜನತೆಯ ಕ್ಷಮೆ ಕೇಳಬೇಕೆಂದು ಶೋಭಾ ಒತ್ತಾಯಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ನಾಳೆ ಬೆಳಗ್ಗೆ 7ಗಂಟೆಯಿಂದ 8ರವರೆಗೆ ಸ್ಯಾಂಕಿಟ್ಯಾಂಕಿ ಬಳಿ ಹಿರಿಯ ನಾಗರಿಕರ ಜತೆ ಮುಕ್ತ ಚರ್ಚೆ ನಡೆಸಲಿದ್ದಾರೆ. ಬೆಳಗ್ಗೆ ವಾಯುವಿಹಾರಕ್ಕೆ ಬರುವವರ ಜತೆ ಮಾತುಕತೆ ನಡೆಸಲಿದ್ದು, ನಂತರ 12 ಗಂಟೆಗೆ ಶಿವಾಜಿನಗರದಲ್ಲಿ ರಿಕ್ಷಾ ಚಾಲಕರ ಜತೆ ಸಂವಾದ, ಅವರ ನಿವಾಸದಿಂದ ರಿಕ್ಷಾದಲ್ಲಿ ಹೋಗಿ ಆಟೋ ಚಾಲಕರ ಸಮಸ್ಯೆಗಳನ್ನು ತಿಳಿದುಕೊಳ್ಳಲಿದ್ದಾರೆ ಎಂದು ಹೇಳಿದರು.
ಮಧ್ಯಾಹ್ನ ಹೊಸಕೋಟೆ ಸುತ್ತಮುತ್ತಲಿನ ರೈತ ಮಹಿಳೆಯರ ಜತೆ ಚರ್ಚೆ ನಡೆಸುವ ಮೂಲಕ ಗೃಹಿಣಿಯರ ಸಮಸ್ಯೆಗಳನ್ನು ಆಲಿಸುವರು. ಈ ವೇಳೆ ಅವರ ಜತೆ ಸಂವಾದ ನಡೆಸಲಿದ್ದಾರೆ. ಮಂಗಳವಾರ ಗಂಗಾವತಿಯಲ್ಲಿ ರೈತರ ಜತೆ ಚರ್ಚೆ, ಮಧ್ಯಾಹ್ನ ಶಿರಹಟ್ಟಿಯಲ್ಲಿ ಲಂಬಾಣಿ ಸಮುದಾಯದವರ ಜತೆ ಸಂವಾದ. ಇದೇ ರೀತಿ ರಾಜ್ಯದಲ್ಲಿ ಬೇರೆ ಬೇರೆ ಸಮುದಾಯಗಳ ಜನರ ಜತೆ ಸಂವಾದ ನಡೆಸಿ ಸಮಸ್ಯೆಗಳನ್ನು ಅರಿಯಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವಕ್ತಾರ ಡಾ.ವಾಮನಾಚಾರ, ಸಹ ವಕ್ತಾರ ಎ.ಎಚ್.ಆನಂದ್ ಮತ್ತಿತರರು ಉಪಸ್ಥಿತರಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin