ವರುಣಾದಲ್ಲಿ ಸ್ಪರ್ಧಿಸಲು ನನಗಿನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ : ವಿಜಯೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

Vijayendra--01

ಮೈಸೂರು, ಏ.8- ಬಿಜೆಪಿಯಿಂದ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಇನ್ನೂ ಗ್ರೀನ್‍ಸಿಗ್ನಲ್ ಸಿಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ತಿಳಿಸಿದ್ದಾರೆ. ನಗರದಲ್ಲಿಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ರೇವಣ್ಣಸಿದ್ದಯ ಅವರನ್ನು ಭೇಟಿ ಮಾಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ಮೈಸೂರು ಭಾಗದಲ್ಲಿ ಬಿಜೆಪಿ ಪ್ರಬಲವಾಗಿದೆ. ಹಾಗಾಗಿ ಇಲ್ಲಿ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಲು ಬಂದಿದ್ದೇನೆ. ಚುನಾವಣೆ ಮುಗಿಯುವವರೆಗೆ ಮೈಸೂರು, ಚಾಮರಾಜನಗರದಲ್ಲೇ ಇರುತ್ತೇನೆ ಎಂದು ಹೇಳಿದರು.

ರೇವಣಸಿದ್ದಯ್ಯ ಅವರು ಈ ಹಿಂದೆ ವರುಣಾ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಹಾಗಾಗಿ ಅವರ ಆಶೀರ್ವಾದ ಪಡೆದು ಅವರಿಂದ ಕೆಲವು ಸಲಹೆಗಳನ್ನು ಪಡೆಯಲು ಬಂದಿದ್ದೆ ಎಂದು ತಿಳಿಸಿದರು.  ನಾನು ವರುಣ ಕ್ಷೇತ್ರದ ಅಭ್ಯರ್ಥಿ ಎಂಬುದಕ್ಕಿಂತ ಮಿಗಿಲಾಗಿ ಇಲ್ಲಿನ ಜನ ನನ್ನನ್ನು ಹೆಚ್ಚು ಬೆಂಬಲಿಸುತ್ತಿದ್ದಾರೆ. ಹಾಗಾಗಿ ಪಕ್ಷದ ಕೆಲಸ ಮಾಡಲು ಬಂದಿದ್ದೇನೆ ಎಂದು ವಿಜಯೇಂದ್ರ ಪ್ರಶ್ನೆಗೆ ಉತ್ತರಿಸಿದರು.

ಕಾಂಗ್ರೆಸ್ ಬಿಡುವ ಸುಳಿವು ನೀಡಿದ ರೇವಣಸಿದ್ಧಯ್ಯ:

ಇದೇ ವೇಳೆ ರೇವಣ್ಣಸಿದ್ಧಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷ ನನ್ನನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ನಾನು ಸಕ್ರಿಯ ರಾಜಕಾರಣದಲ್ಲಿದ್ದೇನೆ. ಬೀದಿ ರಾಜಕೀಯ ಮಾಡುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಬಿಡುವ ಸೂಚನೆ ನೀಡಿದರು. ರಾಜಕೀಯ ಕ್ಷೇತ್ರದಲ್ಲಿ ನನ್ನ ಶಕ್ತಿ ಏನು ಎಂಬುದು ಎಲ್ಲ ಪಕ್ಷಗಳಿಗೂ ತಿಳಿದಿದೆ. ಮುಂದಿನ ದಿನಗಳಲ್ಲಿ ನನ್ನ ನಡೆ ಏನು ಎಂಬುದನ್ನು ತಿಳಿಸುತ್ತೇನೆ ಎಂದು ತಿಳಿಸಿದರು. ನನ್ನ ವಿಜಯೇಂದ್ರ ಭೇಟಿ ಔಪಚಾರಿಕ ಅಷ್ಟೆ. ಚುನಾವಣೆಗೆ ಆಶೀರ್ವಾದ ಕೇಳಿದ್ದಾರೆ. ಮುಂದಿನ ದಿನದಲ್ಲಿ ಅವರಿಗೆ ಸಹಾಯ ಮಾಡುವ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದರು.

Facebook Comments

Sri Raghav

Admin