ಬಿಜೆಪಿ ನಾಯಕರಿಗೆ ಎದುರಾದ ಬಂಡಾಯದ ಬಿಸಿ

ಈ ಸುದ್ದಿಯನ್ನು ಶೇರ್ ಮಾಡಿ

bjp

ಬೆಂಗಳೂರು,ಏ.9- ವಿಧಾನಸಭೆ ಚುನಾವಣಾಗೆ ಬಿಜೆಪಿ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆ ಟಿಕೆಟ್ ವಂಚಿತರು ಪಕ್ಷದ ವಿರುದ್ಧ ಬಂಡಾಯ ಸಾರಿರುವುದು ನಾಯಕರನ್ನು ಚಿಂತೇಗೀಡು ಮಾಡಿದೆ. ಈ ಬಾರಿ ಟಿಕೆಟ್ ತಮಗೆ ಸಿಕ್ಕೇ ಸಿಗುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಆಕಾಂಕ್ಷೆಗಳು, ಪಟ್ಟಿ ಹೊರಬೀಳುತ್ತಿದ್ದಂತೆ ತಾವು ನಂಬಿಕೊಂಡಿದ್ದ ನಾಯಕರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ಈಗ ಪ್ರಕಟಗೊಂಡಿರುವ ಪಟ್ಟಿಯಲ್ಲಿ ಸುಮಾರು 20 ಕ್ಕೂ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ದವೇ ಟಿಕೇಟ್ ವಂಚಿತರು ಬಂಡಾಯ ಸಾರಿರುವುದು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಬಂಡಾಯದ ಬಿಸಿ ಜೋರಾಗಿದ್ದು,ಮುಂದಿನ ದಿನಗಳಲ್ಲಿ ಇದು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಆತಂಕ ನಾಯಕರನ್ನು ಕಾಡುತ್ತಿದೆ. ಕಳೆದ ಒಂದು ವರ್ಷದಿಂದ ಟಿಕೆಟ್ ಸಿಗುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಕಾರ್ಯಕರ್ತರ ಜೊತೆ ಸಂಪರ್ಕ ಇಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ, ಪ್ರತಿಭಟನೆ ನಡೆಸಿದ್ದವರು ಟಿಕೆಟ್ ಕೈ ತಪ್ಪಿರುವುದರಿಂದ ದಿಕ್ಕು ಕಾಣದೆ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಎಲ್ಲಿಲ್ಲಿ ಬಂಡಾಯ: ಕಳೆದ ರಾತ್ರಿ ಬಿಜೆಪಿ ಪ್ರಕಟಿಸಿದ 72 ಅಭ್ಯರ್ಥಿಗಳಲ್ಲಿ ಸುಮಾರು 20ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯದ ಹೊಗೆಯಾಡಿದೆ. ಪ್ರಮುಖವಾಗಿ ಬೆಂಗಳೂರಿನ ಚಿಕ್ಕಪೇಟೆ, ಗೋವಿಂದರಾಜನಗರ, ರಾಜರಾಜೇಶ್ವರಿ ನಗರ, ಶಿವಮೊಗ್ಗ ನಗರ, ಚಿತ್ರದುರ್ಗದ ಮೊಳಕಾಲ್ಮೂರು, ಹಿರಿಯೂರು, ಬಿಜಾಪುರ ನಗರ, ಉಡುಪಿಯ ಕುಂದಾಪುರ, ರಾಯಚೂರು, ಲಿಂಗಸಗೂರು, ಅಫ್ಜಲ್‍ಪುರ ಸೇರಿದಂತೆ ಮತ್ತಿತರ ಕಡೆ ಅಭ್ಯರ್ಥಿಗಳು ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.  ಈಗ ಇವರನ್ನು ಮನವೊಲಿಸುವುದೇ ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಎದುರಾಳಿ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡರೆ ಹೊಡೆತ ಬೀಳಬಹುದೆಂಬ ಆತಂಕ ಉಂಟಾಗಿದೆ. ಬಂಡಾಯ ಅಭ್ಯರ್ಥಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂಬ ಹಠಕ್ಕೆ ಬಿದ್ದಿರಿರುವುದರಿಂದ ಸದ್ಯಕ್ಕೆ ಭಿನ್ನಮತ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ.

ಕಾರಣವೇನು: ಈ ಬಾರಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರವು ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ರಾಜ್ಯದ ಗಮನ ಸೆಳೆದಿತ್ತು. ಕಾರಣ ಪಕ್ಷದ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಬದಲು ಜಿಲ್ಲಾಧ್ಯಕ್ಷ ರುದ್ರೇಗೌಡರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ ಈಗ ಈ ಕ್ಷೇತ್ರದಿಂದ ಈಶ್ವರಪ್ಪ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಸಹಜವಾಗಿ ರುದ್ರೇಗೌಡರ ಕಣ್ಣು ಕೆಂಪಾಗುವಂತೆ ಮಾಡಿದ್ದು, ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ.  ಕಳೆದ ಮೂರು ದಿನಗಳ ಹಿಂದಷ್ಟೇ ಪಕ್ಷಕ್ಕೆ ಸೇರ್ಪಡೆಯಾದ ವಿಧಾನಪರಿಷತ್ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್‍ಗೆ ಬಿಜಾಪುರದಿಂದ ಟಿಕೆಟ್ ನೀಡಿರುವುದು ಬಂಡಾಯಕ್ಕೆ ಕಾರಣ.

ಮಾಜಿ ಸಚಿವ ಹಾಗೂ ಪಕ್ಷದ ಹಿರಿಯ ಮುಖಂಡ ಅಪ್ಪು ಪಟ್ಟಣ್ಣ ಶೆಟ್ಟಿ ಈ ಕ್ಷೇತ್ರದಿಂದ ಕಣಕ್ಕಿಳಿಯಲು ಸಜ್ಜಾಗಿದ್ದರು. ಈಗ ಯತ್ನಾಳ್‍ಗೆ ಟಿಕೆಟ್ ನೀಡಿರುವುದರಿಂದ ಅವರ ಸ್ಥಿತಿ ಡೋಲಾಯಮಾನವಾಗಿದೆ. ವರಿಷ್ಠರು ಅವರನ್ನು ಇಂಡಿ ಕ್ಷೇತ್ರದಿಂದ ಕಣಕ್ಕಿಳಿಯಲು ಸೂಚಿಸಿದ್ದಾರೆ ಎನ್ನಲಾಗುದೆ. ಮೂಲಗಳ ಪ್ರಕಾರ ಅಪ್ಪು ಪಟ್ಟಣ ಶೆಟ್ಟಿ ಜೆಡಿಎಸ್ ಸೇರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.  ಇನ್ನು ಬಸವ ಕಲ್ಯಾಣದಿಂದ ಟಿಕೆಟ್ ಪಡೆದಿರುವ ಮಲ್ಲಿಕಾರ್ಜುನ ಕೂಬಾಗೂ ಬಂಡಾಯದ ಬಿಸಿ ತಟ್ಟಿದೆ. ಮಾಜಿ ಶಾಸಕ ಎಂ.ಜಿ.ಮೂಳೆ ಹಾಗೂ ಮುಖಂಡ ಸುನೀಲ್ ಪಾಟೀಲ್ ಬಂಡಾಯ ಸಾರಿದ್ದಾರೆ.

ಇನ್ನು 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‍ಆರ್ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆದ್ದು ಬಿಜೆಪಿಗೆ ಸೇರ್ಪಡೆಯಾಗಿದ್ದ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಕುಮಾರಸ್ವಾಮಿ ಪರಿಸ್ಥಿತಿಯು ಅತಂತ್ರವಾಗಿದೆ.  ಈ ಕ್ಷೇತ್ರದಿಂದ ಬಳ್ಳಾರಿ ಸಂಸದ ಶ್ರೀರಾಮುಲುಗೆ ಟಿಕೆಟ್ ಘೋಷಣೆ ಮಾಡಿರುವುದು ಕುಮಾರಸ್ವಾಮಿ ಬಂಡೇಳುವಂತೆ ಮಾಡಿದೆ. ಈಗಾಗಲೇ ಅವರು ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಒಂದು ವೇಳೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಕೈ ಹಿಡಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.  ಉಡುಪಿ ಜಿಲ್ಲೆ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಟಿಕೆಟ್ ಘೋಷಣೆ ಮಾಡಿರುವುದು ಸ್ಥಳೀಯ ನಾಯಕರನ್ನು ರೊಚ್ಚಿಗೆಬ್ಬಿಸಿದೆ. ಮೊದಲಿನಿಂದಲೂ ಹಾಲಾಡಿಗೆ ಟಿಕೆಟ್ ನೀಡಬಾರದೆಂದು ಒಂದು ಬಣ ಒತ್ತಾಯಿಸುತ್ತಲೇ ಇತ್ತು. ಮೊದಲ ಪಟ್ಟಿಯಲ್ಲಿ ಅವರಿಗೆ ಟಿಕೆಟ್ ಸಿಕ್ಕಿರುವುದು ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಸಿದೆ.

ಹಾವೇರಿ ಜಿಲ್ಲೆ ಶಿಗ್ಗಾಂವಿಯಿಂದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಸವರಾಜು ಬೊಮ್ಮಾಯಿಗೆ ಟಿಕೆಟ್ ನೀಡಿದ್ದಾರೆ. ವಿಧಾನಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು.  ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜೊತೆ ಗುರುತಿಸಿಕೊಂಡಿದ್ದ ಬೇವಿನ ಮರದ್‍ಗೆ ಟಿಕೆಟ್ ನೀಡುವಂತೆ ಈಶ್ವರಪ್ಪ ಒತ್ತಡ ಹಾಕಿದ್ದರು. ಆದರೆ ಬೊಮ್ಮಾಯಿ ಯಡಿಯೂರಪ್ಪ ಅವರಿಗೆ ಆತ್ಮೀಯರಾಗಿದ್ದರಿಂದ ಮೊದಲ ಪಟ್ಟಿಯಲ್ಲೆ ಟಿಕೆಟ್ ಸಿಕ್ಕಿದೆ. ಇದರಿಂದ ಬೇವಿನಮರದ ಬಂಡಾಯ ಸಾರಿದ್ದಾರೆ. ರಾಯಚೂರು ನಗರದಿಂದ ಡಾ.ಶಿವರಾಜ್ ಪಾಟೀಲ್, ಲಿಂಗಸಗೂರಿನಿಂದ ಮಾನಪ್ಪ ವಜ್ಜಲ್‍ಗೆ ಟಿಕೆಟ್ ನೀಡಿರುವುದರಿಂದ ಜಿಲ್ಲಾ ಬಿಜೆಪಿ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.  ಹೀಗೆ ಹಲವು ಕ್ಷೇತ್ರಗಳಲ್ಲಿ ಭಿನ್ಮಮತೀಯರು ಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವುದರಿಂದ ಭಿನ್ನಮತ ಇನ್ನು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

Facebook Comments

Sri Raghav

Admin