ನೀವು ಅತಿಯಾಗಿ ಯೋಚನೆ ಮಾಡುವವರೇ..? ತಪ್ಪದೆ ಇದನ್ನು ಓದಿ..!

ಈ ಸುದ್ದಿಯನ್ನು ಶೇರ್ ಮಾಡಿ

life-styl-

ಜೀವನದ ಜಂಜಾಟದಲ್ಲಿ ಬಿದ್ದು ತಲೆ ಚಿಟ್ ಹಿಡಿದು ಹೋಗಿದೆ. ಬದುಕಿನ ತಾಪತ್ರಯಗಳಿಂದ ಮನಸ್ಸು ರೋಸಿ ಹೋಗಿದೆ, ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ನಮ್ಮಲ್ಲಿ ಅನೇಕರು ಹೇಳಿಕೊಳ್ಳುತ್ತಾರೆ. ಈ ಸಮಸ್ಯೆಗಳಿಂದ ಅದ್ಯಾವಾಗ ಮುಕ್ತಿ ಸಿಗುತ್ತೋ ಎಂಬ ವಿಚಾರದೊಳಗೆ ಮುಳುಗಿರುವುದೇ ಜೀವನ ಆಗಿಬಿಟ್ಟಿದೆ. ಹೀಗೆ ನಮ್ಮ ತಲೆ ಪ್ರತಿಕ್ಷಣ ಏನಾದರೂ ಒಂದನ್ನು ಯೋಚಿಸುತ್ತಲೇ ಇರುತ್ತದೆ. ಮಲಗಿಕೊಂಡಾಗಲೂ ಅದಕ್ಕೆ ವಿಶ್ರಾಂತಿ ಇರಲ್ಲ. ಬಹಳಷ್ಟು ಬಾರಿ ಸಣ್ಣ-ಸಣ್ಣ ವಿಚಾರಕ್ಕೂ ಅತಿಯಾಗಿ ಯೋಚಿಸಿ ಇತರರು ಅಪಹಾಸ್ಯ ಮಾಡುವಂತಹ ಪ್ರಸಂಗಗಳೂ ನಡೆಯುತ್ತವೆ.

ಹೀಗೆ ಅಪಹಾಸ್ಯಕ್ಕೊಳಗಾಗಬಾರ ದೆಂದು ಮತ್ತೆ ಮತ್ತೆ ವಿಚಾರ ಮಾಡುವುದು ಸರಿಯೆನಿಸಿದರೂ ಇದು ಅನೇಕ ಬಾರಿ ಆತಂಕಕ್ಕೆ ತಳ್ಳುತ್ತದೆ. ಕೆಲವು ಬಾರಿ ಎಲ್ಲವೂ ಸರಿಯಾಗಿ ನಡೆಯುತ್ತಿದ್ದರೂ ಕೆಲಸ ಅರ್ಧಕ್ಕೇ ಎಲ್ಲಿ ನಿಂತು ಬಿಡುತ್ತೋ, ಕೆಟ್ಟು ಬಿಡುತ್ತದೋ, ಎಲ್ಲಿ ಮುಖಭಂಗಕ್ಕೆ ಒಳಗಾಗಬೇಕಾಗುತ್ತದೋ ಎಂದು ಅತಿಯಾದ ಯೋಚನೆಗಳು ಗೊಂದಲದ ಹೊಂಡದಲ್ಲಿ ಮುಳುಗಿ ನೋವು ಅನುಭವಿಸುತ್ತೇವೆ. ಕೆಲಸ ಸುಲಲಿತವಾಗಿ ನಡೆಯುತ್ತಿರು ವಾಗಲೂ ಅದರ ಬಗ್ಗೆ ಅನುಮಾನ ಪಡುವುದು. ಅಯ್ಯೋ! ಈ ಕೆಲಸ ಇಷ್ಟು ಸುಗಮವಾಗಿ ನಡೆಯುತ್ತೆ ಅಂತ ಅನಿಸಿರಲೇ ಇಲ್ಲ. ಸರಳವಾಗಿ ನಡೆಯುತ್ತಿರುವುದನ್ನು ನನ್ನ ಕೈಲಿ ನಂಬೋಕೆ ಆಗ್ತಿಲ್ಲ ಎಂದು ಹಲವರು ಹಲಬುತ್ತಾರೆ.

ಹೀಗೆ ಅತಿಯಾದ ಯೋಚನೆ ಶುಭ್ರವಾದ ಸರೋವರದಂತಿರುವ ಮನಸ್ಸನ್ನು ಕೆಸರಿನ ಹೊಂಡವನ್ನಾಗಿಸಿ ಬಿಡುತ್ತದೆ. ಇದರಿಂದ ಸಣ್ಣ-ಸಣ್ಣ ಕೆಲಸಗಳು ದೊಡ್ಡ ಗುಡ್ಡ ಕಡಿದಂತೆ ಶ್ರಮದಾಯಕವೆನಿಸುತ್ತವೆ. ಆತಂಕ ಹೆಚ್ಚಾಗಿ ಖಿನ್ನತೆಗೆ ದಾರಿ ಮಾಡಿಕೊಡುತ್ತವೆ. ಖಿನ್ನತೆಯಿಂದ ಉತ್ಸಾಹ-ಉಲ್ಲಾಸ ಎಲ್ಲವೂ ಮಾಯವಾಗುತ್ತದೆ. ನಿಜವಾಗಲೂ ನಾವು ಇಷ್ಟೆಲ್ಲ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇದೆಯಾ..? ದೈಹಿಕ ಮತ್ತು ಮಾನಸಿಕವಾಗಿ ನಮಗೆ ನಾವೇ ತೊಂದರೆ ಕೊಟ್ಟುಕೊಳ್ಳೋದು ಎಷ್ಟೊಂದು ಸರಿ..? ಸತ್ಯವೇನೆಂದರೆ ಅತಿಯಾಗಿ ಯೋಚಿಸುವುದು ಒಂದು ಕೆಟ್ಟ ಚಟ ಅಂತ ನಾವು ಅಂದುಕೊಳ್ಳೋದೇ ಇಲ್ಲ. ಭಯದ ರೂಪದಲ್ಲಿರುವ ಈ ಅತಿಯಾದ ಯೋಚಿಸುವಿಕೆ ನಮ್ಮ ಸಂತೋಷವನ್ನು ಕೊಲ್ಲುತ್ತದೆ ಎಂದು ಬಲ್ಲವರು ಹೇಳಿದ್ದನ್ನು ಕೇಳಿದಾಗ ಗೋಣು ಅಲ್ಲಾಡಿಸಿ ನಂತರ ಉದಾಸೀನತೆ ತೋರುವ ಚಟ ರೂಢಿಯಾಗಿಸಿಕೊಂಡು, ನಾವು ತೋಡಿದ ತಗ್ಗಿನಲ್ಲಿ ನಾವೇ ಬಿದ್ದು ನರಳುತ್ತಿದ್ದೇವೆ.

ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತ ಅನುಭವ. ಜಾಣರು ಅಕಸ್ಮಾತ್ತಾಗಿ ತಗ್ಗಿನಲ್ಲಿ ಬಿದ್ದರೆ ಬಲೆಯಲ್ಲಿ ಸಿಕ್ಕಿಬಿದ್ದ ಇಲಿಯಂತೆ ಒದ್ದಾಡಿ ಸಾಯದೆ, ತಾವು ಓದಿದ, ಅನುಭವಿಸಿ ಕಲಿತ ತಂತ್ರಗಳನ್ನು ಉಪಯೋಗಿಸಿ ಹೊರ ಬರುತ್ತಾರೆ. ಗಿಳಿಮರಿಯೊಂದು ಬೇಟೆಗಾರನ ಕೈಯಲ್ಲಿ ಸಿಕ್ಕಿ ನೋವನ್ನು ಅನುಭವಿಸುತ್ತಿತ್ತು. ಒಂದು ದಿನ ಬೇಟೆಗಾರ ಗಿಳಿಯ ಬಳಗ ಕಂಡು ಬಂದು, ನಿನ್ನನ್ನು ಕಳೆದುಕೊಂಡ ನಿನ್ನ ಬಳಗ ತೀರಾ ದುಃಖದಲ್ಲಿದೆ. ನೀನು ನನ್ನ ಪಂಜರದಲ್ಲಿರುವ ಸುದ್ದಿ ಕೇಳುತ್ತಲೇ ನಿನ್ನ ತಂದೆ-ತಾಯಿ ಸತ್ತು ಬಿದ್ದರು ಎಂದನು. ಇದನ್ನು ಕೇಳಿದ ಗಿಳಿ ಮರಿ ವಿಲವಿಲ ಒದ್ದಾಡಿ ಸತ್ತಿತು. ಅಯ್ಯೋ! ಈ ಗಿಳಿ ಮರಿಯೂ ಸತ್ತು ಹೋಯಿತೆಂದು ಬೇಟೆಗಾರ ಗಿಳಿಮರಿಯನ್ನು ಪಂಜರದಿಂದ ಹೊರತೆಗೆದ. ತಕ್ಷಣವೇ ಗಿಳಿಮರಿಯು ಪುರ್ರನೆ ಹಾರತೊಡಗಿತು. ಅಯ್ಯೋ! ನೀನು ಸತ್ತಿದ್ದೀಯಾ ಎಂದು ಹೊರತೆಗೆದೆ ಅಂದ. ಅದಕ್ಕೆ ಗಿಳಿಮರಿ ನನ್ನ ತಂದೆ-ತಾಯಿಯೂ ಸತ್ತಿಲ್ಲ. ಅವರು ಕೊಟ್ಟ ಐಡಿಯಾದಿಂದಲೇ ನಾನು ಬಚಾವಾದೆ ಎನ್ನುತ್ತ ಹಾರಿಹೋಯಿತು. ಸರಿಯಾದ ದಿಕ್ಕಿನಲ್ಲಿ ಯೋಚಿಸಿ ಪರಿಹಾರೋಪಾಯ ಕಂಡುಕೊಳ್ಳುವುದು ಮುಖ್ಯ. ಅತಿಯಾಗಿ ಯೋಚಿಸಿ ಲಾಭವಿಲ್ಲ ಎನ್ನುವ ಸಂಗತಿ ಈ ದೃಷ್ಟಾಂತದಿಂದ ತಿಳಿದು ಬರುತ್ತದೆ. ಈಜಲು ಬಾರದವನು ನೀರಲ್ಲಿ ಬಿದ್ದರೆ ಕೈ-ಕಾಲು ಬಡಿಯುತ್ತಾನೆ. ನನ್ನನ್ನು ಕಾಪಾಡಿ ಎಂದು ಜೋರಾಗಿ ಚೀರುತ್ತಾನೆ. ಸನಿಹದಲ್ಲಿದ್ದವರು ಬಿದ್ದವನನ್ನು ರಕ್ಷಿಸಲು ಧಾವಿಸುತ್ತಾರೆ ಹೊರತು ಯೋಚಿಸುತ್ತ ಕುಳಿತುಕೊಳ್ಳುವುದಿಲ್ಲ. ಮನೆಗೆ ಬೆಂಕಿ ಬಿದ್ದಾಗಲೂ ಅದು ಇದು ಎಂದು ಯೋಚಿಸದೆ, ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಅವರು ಬರುವವರಿಗೂ ಕಾಯದೆ, ಬಕೆಟ್ಟಿನಿಂದ ಬೆಂಕಿಗೆ ನೀರು ಹಾಕುತ್ತಲೇ ಇರುತ್ತೇವೆ. ನಾರ್ಮನ್ ವಿನ್ಸಂಟ್ ಪೀಲೆ ಹೇಳಿದಂತೆ ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಂಡರೆ ಇಡೀ ಜಗತ್ತೇ ಬದಲಾಗುವುದು ಖರೆ ಎಂಬ ಮಾತು ಸತ್ಯವೆನಿಸತೊಡುಗುತ್ತದೆ.

ಬಸ್ಸು ಅಥವಾ ರೈಲಿನಲ್ಲಿ ಪ್ರಯಾಣಿಸುತ್ತಿ ರುವಾಗ ನಮ್ಮ ಕಣ್ಣ ಮುಂದೆ ದಾಟಿ ಹೋಗುವಂತೆ ಕಾಣುವ ಗಿಡ, ಮರ, ಹಳ್ಳ, ಹೊಳೆ, ತೊರೆ ನದಿ, ಗುಡ್ಡಗಳನ್ನು ಯಾವುದೇ ಭಾವನೆಗಳಿಲ್ಲದೆ ನೋಡಿ ಆಸ್ವಾದಿಸುವ ಹಾಗೆ. ಸಮುದ್ರಗಳ ಅಲೆಗಳಂತೆ ನಿರಂತರವಾಗಿ ಹುಟ್ಟುವ ಆಲೋಚನೆಗಳಿಗೆ ಇಂಬು ಕೊಟ್ಟು ಅದರ ಕುರಿತೇ ಅತಿಯಾಗಿ ಯೋಚಿಸುವುದಕ್ಕಿಂತ ಆಲೋಚನೆಗೆ ತಕ್ಕಂತೆ ಪ್ರತಿಕ್ರಿಯಿಸುವುದು ಒಳಿತು. ಅತಿಯಾದ ಯೋಚನೆಗೆ ಪೂರ್ಣ ವಿರಾಮ ಹಾಕಿ ಸಂಪೂರ್ಣವಾಗಿ ಆರಾಮವಾಗಿರ ಬೇಕೆಂದರೆ ಆತ್ಮವಿಶ್ವಾಸ, ಜೀವನ ಪ್ರೀತಿ ಹೆಚ್ಚಿಸುವ ಧ್ಯಾನ ಮತ್ತು ದೈವಿಕ ಭಕ್ತಿಯೂ ಅತ್ಯಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಓಗ್ ಮಂಡಿನೊ ಹೇಳಿದಂತೆ ಸದಾ ಒಳಿತನ್ನು ಯೋಚಿಸಿ ಒಳಿತನ್ನು ಮಾಡಿ ಒಳಿತಿನ ಫಲ ತಡವಾಗಿ ದಕ್ಕಬಹುದು. ಆದರೆ ದಕ್ಕುವುದು ನಿಶ್ಚಿತ.

Facebook Comments

Sri Raghav

Admin