ಆರ್.ಆರ್ ನಗರದ ಜೆಡಿಎಸ್ ಅಭ್ಯರ್ಥಿ ಫೈನಲ್, ಆರ್.ಅಶೋಕ್ ಕಟ್ಟಾ ಬೆಂಬಲಿಗನಿಗೆ ಟಿಕೆಟ್

ಈ ಸುದ್ದಿಯನ್ನು ಶೇರ್ ಮಾಡಿ

RR-Nagar-Ramachandra

ಬೆಂಗಳೂರು, ಏ.13- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‍ನಿಂದ ಪ್ರಜ್ವಲ್ ರೇವಣ್ಣ, ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಹಲವರ ಹೆಸರು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಮಾಜಿ ಡಿಸಿಎಂ ಆರ್.ಅಶೋಕ್ ಅವರ ಕಟ್ಟಾ ಬೆಂಬಲಿಗ, ಬಿಬಿಎಂಪಿ ಸದಸ್ಯ ರಾಮಚಂದ್ರ ಈ ಕ್ಷೇತ್ರಕ್ಕೆ ದಳಪತಿಯಾಗುತ್ತಿದ್ದಾರೆ. ರಾಮಚಂದ್ರ ಅವರನ್ನು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಸಿರು ನಿಶಾನೆ ತೋರಿದ್ದಾರೆ.

ಕಳೆದ ಚುನಾವಣೆಯಲ್ಲಿಯೇ ರಾಮಚಂದ್ರ ಅವರು ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆಗ ಆರ್.ಅಶೋಕ್ ಅವರು ಮುಂದಿನ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಕೊಡಲಾಗುತ್ತದೆ ಎಂದು ಭರವಸೆ ನೀಡಿ ಎಂ.ಶ್ರೀನಿವಾಸ್‍ಗೆ ಟಿಕೆಟ್ ಕೊಟ್ಟಿದ್ದರು. ಅಶೋಕ್ ಅವರ ಮಾತನ್ನು ನಂಬಿದ್ದ ರಾಮಚಂದ್ರ ಅವರು ತಾನೇ ಬಿಜೆಪಿ ಅಭ್ಯರ್ಥಿ ಎಂದುಕೊಂಡು ಕಾರ್ಯತತ್ಪರರಾದರು. ಆದರೆ, ಈ ಬಾರಿಯೂ ಕೂಡ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಅಶೋಕ್ ವಿರುದ್ಧ ರಾಮಚಂದ್ರ ಮುನಿಸಿಕೊಂಡಿದ್ದಾರೆ. ಹಾಗಾಗಿ ಪಕ್ಷೇತರರಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದರು. ಇದನ್ನೆಲ್ಲಾ ಅರಿತ ದೇವೇಗೌಡರು, ರಾಮಚಂದ್ರ ಅವರನ್ನು ಜೆಡಿಎಸ್‍ಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿ ತೊರೆಯಲು ನಿರ್ಧರಿಸಿದ ರಾಮಚಂದ್ರ ತಮ್ಮ ಬೆಂಬಲಿಗರ ಜತೆ ಸಭೆ ನಡೆಸಿದರು. ಸಭೆಯಲ್ಲಿ ಬಹುತೇಕರು ಜೆಡಿಎಸ್‍ಗೆ ಹೋಗುವಂತೆ ಸಲಹೆ ನೀಡಿದರು. ಅವರ ಸಲಹೆ ಮೇರೆಗೆ ಮೊನ್ನೆ ದೇವೇಗೌಡರನ್ನು ರಾಮಚಂದ್ರ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಲು ದೇವೇಗೌಡರು ಸಮ್ಮತ್ತಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಸಂಜೆ ನಡೆಯುವ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ರಾಮಚಂದ್ರ ಅವರು ಅಧಿಕೃತವಾಗಿ ಜೆಡಿಎಸ್‍ಗೆ ಸೇರ್ಪಡೆಯಾಗಲಿದ್ದಾರೆ.
ಆನೆ ಬಲ:
ಐಎಎಸ್ ಅಧಿಕಾರಿ ದಿ.ಡಿ.ಕೆ.ರವಿ ಅವರ ಮಾವ ಹನುಮಂತರಾಯಪ್ಪ, ಜೆಡಿಎಸ್ ನಗರ ಘಟಕದ ಆರ್.ಪ್ರಕಾಶ್, ಲಗ್ಗೆರೆ ನಾರಾಯಣಸ್ವಾಮಿ, ಶಾಸಕ ಮುನಿರತ್ನ ವಿರುದ್ಧ ಮುನಿಸಿಕೊಂಡಿದ್ದ ಜ್ಞಾನಭಾರತಿ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯ ಗೋವಿಂದರಾಜು, ಎಚ್‍ಎಂಟಿ ವಾರ್ಡ್‍ನ ಕಾಂಗ್ರೆಸ್ ಸದಸ್ಯೆ ಆಶಾ ಅವರ ಪತಿ ಸುರೇಶ್ ಮತ್ತಿತರರು ಜೆಡಿಎಸ್‍ಗೆ ಬೆಂಬಲಿಸಲು ಮನಸ್ಸು ಮಾಡಿರುವುದರಿಂದ ರಾಮಚಂದ್ರ ಅವರಿಗೆ ಆನೆ ಬಲ ಬಂದಂತಾಗಿದೆ.

ತ್ರಿಕೋನ ಸ್ಪರ್ಧೆ:
ಶಾಸಕ ಮುನಿರತ್ನ ಪ್ರತಿನಿಧಿಸುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ ತುಳಸಿಮುನಿರಾಜುಗೌಡ, ಜೆಡಿಎಸ್‍ನಿಂದ ರಾಮಚಂದ್ರ, ಕಾಂಗ್ರೆಸ್‍ನಿಂದ ಮುನಿರತ್ನ ಅವರೇ ಸ್ಪರ್ಧಿಸುತ್ತಿದ್ದು, ತ್ರಿಕೋನ ಸ್ಪರ್ಧೆ ಇದೆ.
ಇಲ್ಲಿ ಯಾರೇ ಗೆಲುವು ಸಾಧಿಸಿದರೂ ಕೂದಲೆಳೆ ಅಂತರದಲ್ಲಿ ಗೆಲ್ಲುವರು. ಒಟ್ಟಾರೆ ಬಿಗ್‍ಪೈಟ್ ಇದೆ. ಕ್ಷೇತ್ರ ಉಳಿಸಿಕೊಳ್ಳಲೇಬೇಕೆಂಬ ಇರಾಧೆಯೊಂದಿಗೆ ಮುನಿರತ್ನ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಬಿಜೆಪಿಯ ತುಳಸಿಮುನಿರಾಜುಗೌಡ ಪ್ರಚಾರ ಮುಗಿಸಿ ಗೆಲುವಿಗೆ ರಣತಂತ್ರ ರೂಪಿಸಿದ್ದಾರೆ. ಇದೀಗ ಜೆಡಿಎಸ್‍ನಿಂದ ರಾಮಚಂದ್ರ ಕಣಕ್ಕಿಳಿದಿದ್ದು, ಅವರ ಪರ ಪ್ರಜ್ವಲ್ ರೇವಣ್ಣ ಮತ್ತು ದೇವೇಗೌಡರೇ ಮತಯಾಚಿಸುವುದರಿಂದ ಅವರು ಕೂಡ ಪ್ರಬಲ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದಾರೆ.

Facebook Comments

Sri Raghav

Admin