ಎನ್.ಆರ್.ರಮೇಶ್‍ಗೆ ಚಿಕ್ಕಪೇಟೆ ಬಿಜೆಪಿ ಟಿಕೆಟ್ …?

ಈ ಸುದ್ದಿಯನ್ನು ಶೇರ್ ಮಾಡಿ

N-R-Ramesh

ಬೆಂಗಳೂರು,ಏ.13-ಟ್ವಿಟರ್ ವಾರ್ ನಂತರ ಚಿಕ್ಕಪೇಟೆಯಲ್ಲಿ ಮತ್ತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಕಾಣುತ್ತಿದೆ. ಬಿಜೆಪಿ ಬಿಡುಗಡೆ ಮಾಡಿದ 72 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಉದ್ಯಮಿ ಉದಯ ಗರುಡಾಚಾರ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಈ ಬೆಳವಣಿಗೆ ನಂತರ ತಿರುಗಿ ಬಿದ್ದ ಎನ್.ಆರ್.ರಮೇಶ್, ಕೇಂದ್ರ ಸಚಿವ ಅನಂತ್‍ಕುಮಾರ್ ಹಾಗೂ ಮಾಜಿ ಡಿಸಿಎಂ ಆರ್.ಅಶೋಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರಲ್ಲದೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆಂದು ಧಮ್ಕಿ ಹಾಕಿದ್ದರು.

ಇಷ್ಟೇ ಅಲ್ಲದೆ, ಎನ್.ಆರ್.ರಮೇಶ್ ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೆ 30 ಸಾವಿರಕ್ಕೂ ಹೆಚ್ಚು ಟ್ವೀಟ್ ಮಾಡಿದ್ದರು. ಚಿಕ್ಕಪೇಟೆ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಪಾಲುದಾರರಾಗಿರುವ ಉದಯ ಗರುಡಾಚಾರ್ ಅವರಿಗೆ ಟಿಕೆಟ್ ನೀಡುವ ಬದಲು ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಹೋರಾಡಿರುವ ಎನ್.ಆರ್.ರಮೇಶ್ ಅವರಿಗೆ ಟಿಕೆಟ್ ನೀಡುವಂತೆ ಟ್ವಿಟರ್‍ನಲ್ಲೇ ಒತ್ತಾಯಿಸಿದ್ದರು.

ಎನ್.ಆರ್.ರಮೇಶ್‍ಗೆ ಟಿಕೆಟ್ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ಒಲವು ತೋರಿದ್ದರು. ಆದರೆ ಆರ್.ಅಶೋಕ್ ಮತ್ತು ಅನಂತ್ ಕುಮಾರ್ ಆಕ್ಷೇಪವೆತ್ತಿದ್ದರಿಂದ ಉದಯ ಗರುಡಾಚಾರ್‍ಗೆ ಟಿಕೆಟ್ ಸಿಕ್ಕಿತು. ಎನ್.ಆರ್.ರಮೇಶ್ ಕೂಡ ಚಿಕ್ಕಪೇಟೆಯಲ್ಲಿ ತಮಗೆ ಟಿಕೆಟ್ ಕೈ ತಪ್ಪುತ್ತದೆ ಎಂದುಕೊಂಡಿರಲಿಲ್ಲ. ಒಂದು ವೇಳೆ ಎನ್.ಆರ್.ರಮೇಶ್ ಪಕ್ಷ ತೊರೆದರೆ ಪದ್ಮನಾಭ ನಗರದಲ್ಲಿ ಅಶೋಕ್ ವಿರುದ್ಧ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ, ಲೋಕಸಭಾ ಚುನಾವಣೆಯಲ್ಲಿ ಇನ್ನು ಹೆಚ್ಚು ಎಫೆಕ್ಟ್ ಆಗುತ್ತದೆ ಎಂಬುದನ್ನೆಲ್ಲ ಮನಗಂಡಿರುವ ಬಿಜೆಪಿ ವರಿಷ್ಠರು ನಾಳೆ, ನಾಡಿದ್ದರಲ್ಲಿ ಬಿಡುಗಡೆಯಾಗಲಿರುವ 2ನೆ ಪಟ್ಟಿಯಲ್ಲಿ ಚಿಕ್ಕಪೇಟೆಯಿಂದ ಎನ್.ಆರ್.ರಮೇಶ್ ಅವರಿಗೆ ಟಿಕೆಟ್ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಎನ್.ಆರ್.ರಮೇಶ್‍ಗೆ ಬಿಜೆಪಿ ವರಿಷ್ಠರು ಮಣೆ ಹಾಕಿದರೆ ಚಿಕ್ಕಪೇಟೆ ಕ್ಷೇತ್ರದಿಂದಲೆ ಉದಯ ಗರುಡಾಚಾರ್ ಜೆಡಿಎಸ್ ಅಭ್ಯರ್ಥಿಯಾದರೂ ಅಚ್ಚರಿ ಪಡುವಂತಿಲ್ಲ.

Facebook Comments

Sri Raghav

Admin