ರೈತರು ಸಾಲದ ಸುಳಿಯಲ್ಲಿ ಸಿಲುಕದಿರಲು 25 ಸಾವಿರ ಕೋಟಿ ಮೀಸಲು : ಎಚ್’ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

kumaraswamy-1

ಬೆಂಗಳೂರು,ಏ.13-ರೈತರ ಸಾಲ ಮನ್ನಾ ಮಾಡುವ ಜೊತೆಗೆ ಮತ್ತೆ ರೈತರು ಸಾಲದ ಸುಳಿಯಲ್ಲಿ ಸಿಲುಕದಂತೆ ಮಾಡಲು 25 ಸಾವಿರ ಕೋಟಿ ರೂ.ಗಳನ್ನು ಮೀಸಲಿಡುವ ಉದ್ದೇಶವಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ರೇಷ್ಮೆ ಬೆಳೆಗಾರರು, ಮೊಟ್ಟೆ ಉತ್ಪಾದಕರು,ನೂಲು ಬಿಚ್ಚಾಣಿಕೆದಾರರು ಹಾಗೂ ನೇಕಾರರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇವೆ. ರೇಷ್ಮೆ ಬೆಳೆಗಾರರ ಸಂಘದ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ. ಅದರಲ್ಲೂ ಕೃಷಿ ವಲಯಕ್ಕೆ ಅಗತ್ಯವಿರುವ ನೀತಿ ರೂಪಿಸಲು ಹೊಸ ಕೃಷಿ ನೀತಿಯನ್ನು ಜಾರಿಗೆ ತಂದು ಕೋಲಾರದಿಂದ ಚಾಮರಾಜನಗರದ ವರೆಗೆ ರೇಷ್ಮೆ ಕಾರಿಡಾರ್ ಸ್ಥಾಪಿಸಿ, ರೇಷ್ಮೆ ಬೆಳೆ ಹಾಗೂ ಉದ್ಯಮ ಅವಲಂಬಿತರಿಗೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಎಲ್ಲ ರೀತಿಯ ಕ್ರಮ ವಹಿಸುವುದಾಗಿ ಹೇಳಿದರು.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮನೆ ಬಾಗಿಲಿಗೆ ನಾವು ಹೋಗುವುದಿಲ್ಲ. ನಾವು ಜನರ ಮನೆಬಾಗಿಲಿಗೆ ಹೋಗುತ್ತೇವೆ. ಜನರಿಂದ ನೇರವಾಗಿ ಸಲಹೆ ಸೂಚನೆ ಪಡೆದು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಇನ್ನು ಮುಂದೆ ಐಎಎಸ್ ಅಧಿಕಾರಿಗಳ ಸಲಹೆ ಸೂಚನೆ ಬದಲಿಗೆ ನಿಮ್ಮಿಂದಲೇ ನಮ್ಮ ಸರ್ಕಾರ ನಡೆಯಲಿದೆ ಎಂದು ಹೇಳಿದರು.

ರೇಷ್ಮೆ ವಲಯದ ಅಭಿವೃದ್ದಿಗಾಗಿ 1750 ಕೋಟಿ ರೂ. ವಿಶೇಷ ಪ್ಯಾಕೇಜ್‍ನ್ನು ಕೋರಿದ್ದಾರೆ. ಥೈಲ್ಯಾಂಡ್‍ನಲ್ಲಿ ರೇಷ್ಮೆಯಿಂದ ವಿವಿಧ 30 ಉತ್ಪನ್ನಗಳನ್ನು ತಯಾರು ಮಾಡುತ್ತಾರೆ. ನಮ್ಮಲ್ಲಿಯೂ ಅದೇ ರೀತಿ ತಯಾರಿಸಲು ಅಗತ್ಯವಿರುವ ಕೌಶಲ್ಯ ವಿವಿ ಸ್ಥಾಪನೆಗೆ ಅನುಕೂಲ ಕಲ್ಪಿಸಲಾಗುವುದು.
ಹೋಬಳಿ ಹಾಗೂ ತಾಲ್ಲೂಕಿಗೊಂದರಂತೆ ಉದ್ಯಮ ಆರಂಭಿಸುವ ಉದ್ದೇಶವಿದೆ. ಸೋಲಾರ್ ಇಂಧನ ಉತ್ಪಾದಿಸುವ ಉತ್ಪನ್ನಗಳನ್ನು ಚೈನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅದನ್ನು ಸ್ಥಳೀಯವಾಗಿ ಉತ್ಪಾದಿಸಲು ನೀಲಿ ನಕ್ಷೆ ತಯಾರು ಮಾಡಲಾಗುವುದು. ರೈತ ಕುಟುಂಬದವರಂತೆ ನೇಕಾರ ಕುಟುಂಬಕ್ಕೂ ಎಲ್ಲ ರೀತಿಯ ನೆರವು ನೀಡಿ ನೇಕಾರರ ಆತ್ಮಹತ್ಯೆಯನ್ನು ತಡೆಗಟ್ಟುವ ಜೊತೆಗೆ ಸಮುದಾಯವನ್ನು ಉಳಿಸುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.

ಮೇ 18ರಂದು ನಮ್ಮ ಹೊಸ ಸರ್ಕಾರ ಬರುವುದು ಭ್ರಮೆಯಲ್ಲ. ಭ್ರಮಾ ಲೋಕದಲ್ಲೂ ನಾವಿಲ್ಲ. ಜನತಾ ಲೋಕದಲ್ಲಿ ನಾವಿದ್ದೇವೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಮಗೂ ಒಂದು ಒಂದು ಬಾರಿ ಅವಕಾಶ ಕೊಡಿ. ಹೊಂದಾಣಿಕೆಯ ಸಂದರ್ಭ ಬಂದರೆ ನಾವು ದೂರವೇ ಉಳಿಯುತ್ತೇವೆ ಎಂದು ಹೇಳಿದರು. ನಮ್ಮ ಜನರ ಪ್ರೀತಿ ಬೇಕು. ಅವರಿಗಾಗಿ ನಮ್ಮ ಸೇವೆ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ 50ರಿಂದ 2 ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ. ಇದಕ್ಕೆಲ್ಲ ಜನರ ಆಶೀರ್ವಾದವೇ ಮುಖ್ಯ ಎಂದರು.  ಕೋಲಾರ, ಚಿಕ್ಕಬಳ್ಳಾಪುರ ಜನರಿಗೆ ಶುದ್ಧ ಕುಡಿಯುವ ನೀರು ಕೊಡಲು ಶಾಶ್ವತ ನೀರಾವರಿ ಯೋಜನೆಗೂ ಆದ್ಯತೆ ಕೊಡುತ್ತೇವೆ. ನನಗೆ ದುಡ್ಡು ಬೇಡ ರಾಜ್ಯದ ಅಭಿವೃದ್ಧಿ ಬೇಕು. ಬೀದಿಯಲ್ಲಿ ನಿಂತು ನೀರಿಗಾಗಿ ಹೋರಾಟ ಮಾಡಲು ಬಿಡುವುದಿಲ್ಲ. ನನ್ನ ಮೇಲೆ ನಂಬಿಕೆ ಇಡಿ ಎಂದು ಹೇಳಿದರು.  ರಾಜ್ಯ ನೋಂದಾಯಿತ ರೇಷ್ಮೆ ಮೊಟ್ಟೆ ಉತ್ಪಾದಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರಗೌಡ ಮನವಿ ಮಾಡಿ ರೇಷ್ಮೆ ಅವಲಂಬಿತ ಉದ್ಯಮ ವಲಯಕ್ಕೆ 1,750 ಕೋಟಿ ವಿಶೇಷ ಪ್ಯಾಕೇಜ್‍ಗೆ ಮನವಿ ಮಾಡಿದರು.

Facebook Comments

Sri Raghav

Admin