ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ‘ಗೃಹ ಪ್ರವೇಶ’

ಈ ಸುದ್ದಿಯನ್ನು ಶೇರ್ ಮಾಡಿ

Vijayendra--01
ಟಿ.ನರಸೀಪುರ, ಏ.13- ವರುಣಾದಲ್ಲಿ ಕ್ಷೇತ್ರದಲ್ಲಿ ಸಿಎಂ ಪುತ್ರ ಯತೀಂದ್ರ ವಿರುದ್ಧ ಗೆಲ್ಲಲೇ ಬೇಕೆಂದು ಪಣ ತೊಟ್ಟಿರುವ ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಸಕಲ ತಾಯಾರಿ ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ  ವರುಣಾದಲ್ಲಿ ಕ್ಷೇತ್ರದಿಂದ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಕ್ಷೇತ್ರದಲ್ಲಿ ಹೊಸ ನಿವಾಸದಲ್ಲಿ ಕುಟುಂಬ ಸಮೇತ ವಿಶೇಷ ಪೂಜೆಯನ್ನು ನಡೆಸಿದರು.

ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ತವರಾದ ಹದಿನಾರು ಗ್ರಾಮ ಸೇರಿದಂತೆ ವರುಣಾ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಬಿರುಸಿನ ಪ್ರಚಾರ ನಡೆಸಿದರು. ಹದಿನಾರು ಗ್ರಾಮದ ಗ್ರಾಮದೇವತೆಗೆ ಪೂಜೆ ಸಲ್ಲಿಸಿದ ವಿಜಯೇಂದ್ರ ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಗ್ರಾಮದ ವಿವಿಧ ಬಡಾವಣೆಗಳ ಮನೆಮನೆಗೆ ತೆರಳಿ ಮತ ಯಾಚಿಸಿದರು.

ತಮ್ಮ ಗ್ರಾಮಕ್ಕೆ ಆಗಮಿಸಿದ ವಿಜಯೇಂದ್ರ ಅವರಿಗೆ ಗ್ರಾಮಸ್ಥರು ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ತಂದೆ ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ರೈತಪರವಾದ ಬಜೆಟ್ ಮಂಡಿಸಿ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಅವರ ಕಾಲದಲ್ಲಿ ಜಾರಿಗೊಳಿಸಿದ ಬಹು ನಿರೀಕ್ಷಿತ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ, ಸರ್ಕಾರಿ ಮಕ್ಕಳಿಗೆ ಸೈಕಲ್ ವಿತರಣೆ, ಸೇರಿದಂತೆ ತುರ್ತು ಚಿಕಿತ್ಸೆ ವಾಹನ ಸೌಲಭ್ಯ ಜನಮನ್ನಣೆ ಗಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ವರುಣಾ ಕ್ಷೇತ್ರದಲ್ಲಿರುವ ಎಲ್ಲ ಜನಾಂಗದ ಜನರ ವಿಶ್ವಾಸ ಗಳಿಸಿ ಅಧಿಕ ಮತಗಳಿಂದ ಜಯಭೇರಿ ಬಾರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ಕಾ.ಪು ಸಿದ್ದಲಿಂಗಸ್ವಾಮಿ, ಶಂಭು ಪಟೇಲ್, ಕೌಟಿಲ್ಯ ಆರ್.ರಘು, ನಾಯಕ ಜನಾಂಗದ ಮುಖಂಡ ಅಪ್ಪಣ್ಣ, ಜಿಪಂ ಸದಸ್ಯ ಸದಾನಂದ, ಗುರುಸ್ವಾಮಿ, ಎಲ್.ಮಾದಪ್ಪ, ಶಿವಪ್ರಸಾದ್ ಜೆ., ಕಲ್ಮಹಳ್ಳಿ ವಿಜಯಕುಮಾರ್, ಕಾರ್ತಿಕ್, ಚಿಕ್ಕಮಾದಪ್ಪ, ತಮ್ಮಯ್ಯಪ್ಪ ಮತ್ತಿತರರಿದ್ದರು.

Facebook Comments

Sri Raghav

Admin