ಶ್ರೀರಾಮುಲು ವಿರುದ್ಧ ತಿಪ್ಪೆಸ್ವಾಮಿ ಬೆಂಬಲಿಗರಿಂದ ಪೊರಕೆ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Cgitradurga--1

ಚಿತ್ರದುರ್ಗ, ಏ.13- ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಶಾಸಕ ತಿಪ್ಪೆಸ್ವಾಮಿ ಬೆಂಬಲಿಗರು, ಮಹಿಳೆಯರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿತು. ಶ್ರೀರಾಮುಲು ಅವರಿಗೆ ಈಗಾಗಲೇ ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್ ಹಂಚಿಕೆಯಾಗಿರುವ ಹಿನ್ನೆಲೆಯಲ್ಲಿ ನಾಯಕನಹಟ್ಟಿಯಲ್ಲಿರುವ ತಿಪ್ಪೆರುದ್ರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡುವ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ವಿಷಯ ತಿಳಿದ ಶಾಸಕ ತಿಪ್ಪೆಸ್ವಾಮಿ ಬೆಂಬಲಿಗರು, ಮಹಿಳೆಯರು ಅಪಾರ ಸಂಖ್ಯೆಯಲ್ಲಿ ದೇವಾಲಯದ ಬಳಿ ಜಮಾಯಿಸಿ ಶ್ರೀರಾಮುಲು ಅವರು ಯಾವುದೇ ಕಾರಣಕ್ಕೂ ಇಲ್ಲಿಗೆ ಬರಬಾರದು ಎಂದು ಪೊರಕೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ವರಿಷ್ಠರು ಟಿಕೆಟ್ ಕೊಟ್ಟಿದ್ದರೂ ಈ ಕ್ಷೇತ್ರಕ್ಕೆ ಶ್ರೀರಾಮುಲು ಬರಬಾರದು. ಬಳ್ಳಾರಿಯಲ್ಲಿ ಅವರ ವರ್ಚಸ್ಸು ಕುಂದಿದೆ. ಅಲ್ಲಿ ನಿಂತರೆ ಗೆಲ್ಲಲು ಆಗುವುದಿಲ್ಲ ಎಂಬುದನ್ನು ಅರಿತು ಇಲ್ಲಿಗೆ ಬಂದಿದ್ದಾರೆ. ಈ ಕ್ಷೇತ್ರಕ್ಕೆ ಅವರ ಕೊಡುಗೆ ಏನಿದೆ? ಶ್ರೀರಾಮುಲು ಮೊಳಕಾಲ್ಮೂರಿಗೆ ಕಾಲಿಡಬಾರದು ಎಂದು ಹೇಳಿದರು. ನಮ್ಮ ಶಾಸಕರಾಗಿರುವ ತಿಪ್ಪೆಸ್ವಾಮಿ ಅವರು ನಮ್ಮೆಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಏನೇ ತೊಂದರೆಗಳಿದ್ದರೂ ಬಗೆಹರಿಸುತ್ತಾರೆ. ಅಂಥ ಒಳ್ಳೆ ಶಾಸಕರು ನಮ್ಮವರೇ ಇಲ್ಲಿರುವಾಗ ಶ್ರೀರಾಮುಲು ಏಕೆ ಇಲ್ಲಿಗೆ ಬರಬೇಕು ಎಂದು ಪ್ರಶ್ನಿಸಿದರು.

ವರಿಷ್ಠರು ಶ್ರೀರಾಮುಲು ಅವರನ್ನು ರಾಜ್ಯ ನಾಯಕ ಎಂದುಕೊಂಡಿದ್ದಾರೆ. ಇಡೀ ಬಳ್ಳಾರಿಯನ್ನೇ ನುಂಗಿ ನೀರು ಕುಡಿದಿದ್ದಾರೆ. ಅವರು ಗ್ರಾಪಂ ಸದಸ್ಯರಾಗಲೂ ಲಾಯಕ್ಕಿಲ್ಲ ಎಂದು ಮಹಿಳೆಯರು ಆರೋಪಿಸಿದರು. ಅಲ್ಲದೆ, ಈಗಾಗಲೇ ಶ್ರೀರಾಮುಲು ಅವರೇ ಮೊಳಕಾಲ್ಮೂರು ಕ್ಷೇತ್ರಕ್ಕೆ ಬರಲ್ಲ. ನಾನು ಬಳ್ಳಾರಿಯಲ್ಲಿ ಸ್ಪರ್ಧಿಸುತ್ತೇನೆ. ಇಲ್ಲಿ ನಿಮಗೆ ಟಿಕೆಟ್ ಕೊಡಿಸುವುದಾಗಿ ತಿಪ್ಪೆಸ್ವಾಮಿ ಅವರಿಗೆ ಆಶ್ವಾಸನೆ ನೀಡಿದ್ದರು. ಅದರಂತೆ ನಡೆದುಕೊಳ್ಳದೆ ದ್ರೋಹ ಮಾಡಿದ್ದಾರೆ. ನಿಮ್ಮಂಥವರಿಗೆ ನಾವು ವೋಟು ಕೊಡುವುದಿಲ್ಲ. ನೀವು ಇಲ್ಲಿಗೆ ಬರಬೇಡಿ ಎಂದು ಹೇಳಿದರು. ಅಲ್ಲದೆ, ವರಿಷ್ಠರು ಕೂಡಲೇ ಈ ಕ್ಷೇತ್ರದ ಬಗ್ಗೆ ಗಮನಹರಿಸಿ ಶಾಸಕ ತಿಪ್ಪೆಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ದೇವಾಲಯದ ಬಳಿ ಶಾಸಕ ತಿಪ್ಪೆಸ್ವಾಮಿ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಟ್ಟರು. ಅಲ್ಲದೆ, ಸ್ಥಳದಲ್ಲಿ ಬಿಗುವಿನ ವಾತಾವರಣ ಇರುವುದರಿಂದ ತಾವು ಸ್ಥಳಕ್ಕೆ ಆಗಮಿಸದಂತೆ ಶ್ರೀರಾಮುಲುಗೆ ಪೊಲೀಸರು ಮಾಹಿತಿ ನೀಡಿದ್ದರಿಂದ ಬೆಳಗ್ಗೆ 8 ಗಂಟೆಗೆ ದೇವಾಲಯದಲ್ಲಿ ಪೂಜೆ ನಿಗದಿಯಾಗಿದ್ದರೂ ಅವರು ಪೂಜೆ ಸಲ್ಲಿಸಲು ಬರಲಿಲ್ಲ.

Facebook Comments

Sri Raghav

Admin