ಕಾಮನ್‍ವೆಲ್ತ್ ಕ್ರೀಡಾಕೂಟದ 10ನೇ ದಿನವೂ ಭಾರತಕ್ಕೆ ಪದಕಗಳ ಸುರಿಮಳೆ

ಈ ಸುದ್ದಿಯನ್ನು ಶೇರ್ ಮಾಡಿ

CWG--11-Day

ಗೋಲ್ಡ್‍ಕೋಸ್ಟ್, ಏ.14-ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದ 10ನೇ ದಿನವಾದ ಇಂದೂ ಕೂಡ ಭಾರತದ ಪಾರಮ್ಯ ಮುಂದುವರಿದಿದ್ದು, ದೇಶದ ಹೆಮ್ಮೆಯ ಬಾಕ್ಸಿಂಗ್ ತಾರೆ ಮೇರಿ ಕೋಮ್ ಸೇರಿದಂತೆ ನಾಲ್ವರು ಪ್ರತಿಭಾವಂತ ಸ್ಫರ್ಧಿಗಳು ಬಂಗಾರದ ಪದಕಗಳನ್ನು ಕೊರಳಿಗೇರಿಕೊಂಡಿದ್ದಾರೆ. ಒಂಭತ್ತನೇ ದಿನವಾದ ನಿನ್ನೆಗೆ ಒಟ್ಟು 11 ಪದಕಗಳನ್ನು ಗೆದ್ದಿರುವ ಭಾರತೀಯ ಕ್ರೀಡಾಪಟುಗಳ ಪ್ರಾಬಲ್ಯ ಇಂದೂ ಕೂಡ ಮುಂದುವರಿಯಿತು.

ಮಹಿಳೆಯರ 45-48 ಕೆಜಿ ವಿಭಾಗದ ಫೈನಲ್‍ನಲ್ಲಿ ಮೇರಿ ಕೋಮ್ ಉತ್ತರ ಐರ್ಲೆಂಡ್‍ನ ಕ್ರಿಸ್ಟಿನಾ ಒಹಾರಾ ಅವರನ್ನು ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮಹಿಳೆಯರ ವಿಭಾಗದ ಬಾಕ್ಸಿಂಗ್‍ನಲ್ಲಿ 35ರ ಹರೆಯದ ಅನುಭವಿ ತಾರೆ ಎಂಸಿ ಮೇರಿ ಕೋಮ್ ಸೆಮಿಫೈನಲ್ಸ್‍ನಲ್ಲಿ ಶ್ರೀಲಂಕಾದ ಅನುಷಾ ದಿಲುಕ್ಷೆ ವಿರುದ್ಧ 5-0 ಅಂತರದ ನಿರಾಯಾಸ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದ್ದರು.

ಚಿನ್ನ ಗೆದ್ದ ಗೌರವ್ :
ಭಾರತದ ಮತ್ತೊಬ್ಬ ಪ್ರತಿಭಾವಂತ ಬಾಕ್ಸರ್ ಗೌರವ್ ಸೋಳಂಕಿ 52 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಪುರುಷರ 60 ಕೆಜಿ ವಿಭಾಗದಲ್ಲಿ ಭಾರತದ ಬಾಕ್ಸರ್ ಮನಿಷ್ ಕೌಶಿಕ್ ಫೈನಲ್‍ನಲ್ಲಿ ಆಸ್ಟ್ರೇಲಿಯಾದ ಹ್ಯಾರಿ ಗ್ಯಾರ್‍ಸೈಡ್‍ರಿಂದ ಪರಾಭವಗೊಂಡರೂ ರಜತ ಪದಕ ಗೆದ್ದುಕೊಂಡಿದ್ಧಾರೆ.

ಕುಸ್ತಿಯಲ್ಲಿ ಸುಮಿತ್‍ಗೆ ಚಿನ್ನ :

ಪುರುಷರ 125 ಕೆಜಿ ಪುರುಷರ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಭಾರತ ಪಟು ಸುಮಿತ್ ಮಲಿಕ್ ಸ್ವರ್ಣ ಪದಕ ಗಳಿಸಿ ಗೆಲುವಿನ ಕಿರುನಗೆ ಬೀರಿದ್ದಾರೆ. ಗಾಯದಿಂದಾಗಿ ಅವರ ಪ್ರತಿಸ್ಪರ್ಧಿ ನೈಜಿರಿಯಾದ ಸಿನಿವೀ ಬೋಲ್ಟಿಕ್ ಫೈನಲ್‍ನಿಂದ ನಿರ್ಗಮಿಸಿದ ಕಾರಣ ಸುಮಿತ್ ವಿಜೇತರನ್ನಾಗಿ ಘೋಷಿಸಲಾಗಿದೆ. ಸೆಮಿಫೈನಲ್‍ನಲ್ಲಿ ಅವರು ಪಾಕಿಸ್ತಾನದ ತೈಯಬ್ ರಾಝಾ ಅವರನ್ನು 10-4ರಿಂದ ಮಣಿಸಿ ಅಂತಿಮ ಸುತ್ತು ತಲುಪಿದ್ದರು.

ಸ್ವರ್ಣಕ್ಕೆ ಗುರಿಯಿಟ್ಟ ರಜಪೂತ್ :

ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಶೂಟರ್‍ಗಳ ನಿಖರ ಗುರಿಯಿಂದ ಪದಕಗಳು ಸುರಿಮಳೆಯಾಗುತ್ತಿರುವಾಗಲೇ ಸೌರವ್ ರಜಪೂತ್ 50 ಮೀಟರ್ ರೈಫಲ್ 3 ಪೋಸಿಷನ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. 37 ವರ್ಷದ ರಜಪೂತ್ 454.5 ಸ್ಕೋರ್‍ಗಳೊಂದಿಗೆ ಈ ಸಾಧನೆ ಮಾಡಿದ್ದಾರೆ.

ಟಿಟಿ ಸಿಂಗಲ್ಸ್‍ನಲ್ಲಿ ಮನಿಕಾ ಫೈನಲ್‍ಗೆ :
ಟೇಬಲ್ ಟೆನಿಸ್ ವಿಭಾಗದ ಮಹಿಳಾ ಸಿಂಗಲ್ಸ್‍ನಲ್ಲಿ ಭಾರತದ ಮನಿಕಾ ಬಾತ್ರಾ ವಿಶ್ವದ ನಂ.4ನೇ ಶ್ರೇಯಾಂಕದ ಸಿಂಗಪುರ್‍ನ ತಿಯಾನ್‍ವಿ ಫೆಂಜ್‍ರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದು, ಪದಕ ಗೆಲುವನ್ನು ಖಾತರಿಗೊಳಿಸಿದ್ದಾರೆ. ಮನಿಕಾ, ಫೆಂಜ್‍ರನ್ನು 12-10, 5-11, 11-8, 5-11, 5-11, 11-9, 13-11 ಸೆಟ್‍ಗಳಿಂದ ಸೋಲಿಸಿ ಅಂತಿಮ ಸುತ್ತು ತಲುಪಿದ್ದು, ಮತ್ತೊಂದು ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ.

Facebook Comments

Sri Raghav

Admin