ಪ್ರಾಣಿ-ಪಕ್ಷಿಗಳ ದಾಹ ನೀಗಿಸಿ, ಸಂತತಿ ಉಳಿಸಿ

ಈ ಸುದ್ದಿಯನ್ನು ಶೇರ್ ಮಾಡಿ

animal-water-tank

ಆನಂದ ತಿಪಟೂರು

ನಾನು, ನನ್ನದು ಎಂಬ ಸ್ವಾರ್ಥಪರ ಜನರ ನಡುವೆ ಪ್ರಾಣಿ-ಪಕ್ಷಿ ಸಂಕುಲ ವಿನಾಶದ ಅಂಚಿಕೆ ತಲುಪುತ್ತಿವೆ. ಬಿರುಬೇಸಿಗೆಯಲ್ಲಿ ಕೆರೆ-ಕಟ್ಟೆಗಳು ಒಣಗಿ ನಿಂತಿವೆ. ಜನ-ಜಾನುವಾರು ನೀರಿಗೆ ಪರಿತಪಿಸುತ್ತಿವೆ. ಇಂತಹ ಬಿಸಿಲ ಬೇಗೆಯಲ್ಲೂ ಪ್ರಾಣಿ-ಪಕ್ಷಿ ಪ್ರಿಯರು ಪರಿಸರ ಪ್ರೇಮಿಗಳು ಆಹಾರ, ನೀರು ಒದಗಿಸುತ್ತಾ ಮಾದರಿಯಾಗಿದ್ದಾರೆ.  ಪ್ರಕೃತಿಯ ಅವಿಭಾಜ್ಯ ಅಂಗವಾಗಿರುವ ಪ್ರಾಣಿ-ಪಕ್ಷಿಗಳ ಸಂಕುಲ ಇಂದು ಬರಗಾಲದ ಪರಿಸ್ಥಿತಿಯಲ್ಲಿ ಆಹಾರ, ನೀರು, ನೆಲೆಗಳಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ ಸಂಗತಿಯಾಗಿದೆ.

ಇಂತಹ ಸನ್ನಿವೇಶಗಳನ್ನು ಗಮನಿಸಿದ ಹಲವು ಪರಿಸರ, ಪಕ್ಷಿ ಪ್ರೇಮಿ ಸಂಘಟನೆಗಳು ಮಾನವೀಯತೆ ಮೆರೆದು ಆಹಾರ, ನೀರನ್ನು ಒದಗಿಸುವ ಕಾರ್ಯದಲ್ಲಿ ತೊಡಗಿರುವುದು ನಿಜಕ್ಕೂ ಮೆಚ್ಚುವಂತಹದ್ದಾಗಿದೆ. ಪ್ರಕೃತಿಯೇ ಪ್ರಾಣಿ-ಪಕ್ಷಿ ಹಾಗೂ ಜೀವರಾಶಿಗಳಿಗೆ ಆಹಾರ, ನೀರು ಮತ್ತು ತಾಣಗಳನ್ನು ಒದಗಿಸಿದೆ. ಆದರೆ, ಕಾಲ ಬದಲಾದಂತೆ ಮನುಷ್ಯನ ದುರಾಸೆಗಳು ಹೆಚ್ಚಾಗಿ ಪ್ರಕೃತಿ ಮೇಲೆ ಹಲವಾರು ರೀತಿಯಲ್ಲಿ ಕೃತ್ಯಗಳನ್ನು ಎಸಗುತ್ತ ವಿಕೋಪ ಉಂಟಾಗುವ ಹಾಗೆ ಮಾಡುತ್ತಿದ್ದಾನೆ. ಇದರಿಂದ ನೈಸರ್ಗಿಕವಾಗಿ ಜೀವರಾಶಿಗಳಿಗೆ ದೊರಕುತ್ತಿದ್ದ ನೀರು, ಆಹಾರ ಸಿಗದಂತಹ ದುಸ್ಥಿತಿ ಒದಗಿ ಬಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ಬೆಳವಣಿಗೆಯಿಂದ ವಾತಾವರಣದಲ್ಲಿ ಪಕ್ಷಿಗಳು ಜೀವ ಉಳಿಸಿಕೊಳ್ಳಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪಕ್ಷಿಗಳ ಸಂಕುಲ ಕ್ಷೀಣಿಸಿವೆ. ಕೆಲವು ಕಡೆ ಪಕ್ಷಿಗಳಿಗೆ ನೀರು, ಆಹಾರವನ್ನು ಮನುಷ್ಯನೇ ಒದಗಿಸುವಂತಹ ಮನೋಭಾವನೆ ಬೆಳೆಸಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಪ್ರಾಣಿ-ಪಕ್ಷಿ ಪ್ರಿಯ ಸಂಘಟನೆಗಳ ಸಾಲಿನಲ್ಲಿ ತಿಪಟೂರಿನ ಹೊನ್ನವಳ್ಳಿ ಹೋಬಳಿಯ ಹೆಚ್.ಭೈರಾಪುರ ಗ್ರಾಮದ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಬಿ.ಟಿ.ಕುಮಾರ್ ಪ್ರಮುಖರು. ಇವರು ತಮ್ಮ ತೋಟದಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ.

ಈ ಬಿರು ಬೇಸಿಗೆ ಸಂದರ್ಭದಲ್ಲಿ ನೀರಿಗಾಗಿ ಹಾಹಾಕಾರದ ಮಧ್ಯೆಯೂ ಪ್ರತ್ಯೇಕವಾದ ನೀರಿನ ತೊಟ್ಟಿ ನಿರ್ಮಿಸಿ ದಿನನಿತ್ಯ ತಮ್ಮ ಕೊಳವೆ ಬಾವಿಯಿಂದ ಶುದ್ಧ ನೀರನ್ನು ತುಂಬಿಸಿ ಪ್ರಾಣಿ-ಪಕ್ಷಿಗಳ ದಾಹ ನೀಗಿಸಲು ಮುಂದಾಗಿದ್ದಾರೆ. ಇದರ ಜತೆಗೆ ತೋಟದ ಸುತ್ತಮುತ್ತಲಿನಲ್ಲಿಯೂ ಮಣ್ಣಿನ ಮಡಕೆಗಳನ್ನು ಅಲ್ಲಲ್ಲಿ ಇರಿಸಿ ಅವುಗಳಿಗೆ ನೀರು ತುಂಬಿಸಿ ಸಣ್ಣ ಸಣ್ಣ ಪಕ್ಷಿ ಸಂಕುಲಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಿತ್ಯ ಊರಿನ ಹಾಗೂ ಸುತ್ತಮುತ್ತಲಿನ ದನ-ಕರುಗಳಿಗೆ ನೀರಿನ ವ್ಯವಸ್ಥೆ ಮಾಡಿ ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿ ಮೆರೆದಿದ್ದಾರೆ. ಪ್ರತಿಯೊಬ್ಬರೂ ತಮ್ಮ ಊರುಗಳಲ್ಲಿ, ತೋಟ-ಹೊಲಗಳಲ್ಲಿ, ತಮ್ಮ ಮನೆಯ ಮೇಲ್ಬಾಗ, ಮುಂಭಾಗದಲ್ಲಿ ಈ ರೀತಿಯ ನೀರಿನ ವ್ಯವಸ್ಥೆ ಕಲ್ಪಿಸಿದಲ್ಲಿ ಪಕ್ಷಿ, ಪ್ರಾಣಿಗಳು ತಮ್ಮ ದಾಹ ನೀಗಿಸಿಕೊಂಡು ನೆಮ್ಮದಿಯೊಂದಿಗೆ ಸಂತತಿಯನ್ನು ವೃದ್ಧಿಸಿಕೊಂಡು ಹೋಗಲು ಅನುಕೂಲವಾಗುತ್ತದೆ.

ಮುಂಗಾರಿನ ಮಳೆ ಭೂಮಿಗೆ ತಂಪೆರೆದು ಸಮೃದ್ಧವಾಗಿ ಕೆರೆ-ಕಟ್ಟೆ, ಬಾವಿಗಳಲ್ಲಿ ನೀರು ಬರುವವರೆಗೂ ಈ ರೀತಿಯ ತೊಟ್ಟಿ ಅಥವಾ ಪಾತ್ರೆಗಳಲ್ಲಿ ನೀರನ್ನು ತುಂಬಿಸಿದರೆ ಮೂಕ ಪ್ರಾಣಿ-ಪಕ್ಷಿಗಳು ನೀರನ್ನು ಕುಡಿದು ಬದುಕುಳಿಯಲು ಸಹಕಾರಿಯಾಗುತ್ತದೆ. ಇಲ್ಲದೆ ಹೋದಲ್ಲಿ ಕ್ರಮೇಣ ಇವುಗಳ ಸಂಕುಲವೇ ನಾಶವಾಗುತ್ತ ಹೋಗುತ್ತದೆ. ಪತ್ರಿಕೆಯೊಂದಿಗೆ ಮಾತನಾಡಿದ ಬಿ.ಟಿ.ಕುಮಾರ್, ನನಗೆ ಮೊದಲಿನಿಂದಲೂ ಪ್ರಾಣಿ-ಪಕ್ಷಿಗಳೆಂದರೆ ಪ್ರೀತಿ. ಅದರಲ್ಲಿ ಕೃಷಿ ಭೂಮಿ, ತೋಟದಲ್ಲಿ ಇರುವಂತ ಪ್ರಾಣಿ-ಪಕ್ಷಿಗಳು ಬಿಸಿಲಿನಲ್ಲಿ ನೀರಿಗಾಗಿ ಪರದಾಡುತ್ತಿರುವ ಸಂದರ್ಭವನ್ನು ನೋಡಲಾರದೆ ಈ ರೀತಿಯ ನೀರಿನ ತೊಟ್ಟಿ, ಮಡಕೆಗಳನ್ನು ಇರಿಸಿ ನೀರನ್ನು ತುಂಬಿಸಿದ್ದೇನೆ. ಇವುಗಳ ನೀರನ್ನು ಕುಡಿದು ದಾಹ ನೀಗಿಸಿಕೊಂಡು ಸಂತೃಪ್ತವಾಗುವ ದೃಶ್ಯವನ್ನು ನೋಡಿದಾಗ ನನಗೆ ತುಂಬ ಆನಂದವಾಗುತ್ತದೆ ಎಂದು ಹೇಳುತ್ತಾರೆ.

Facebook Comments