ವಿನೇಶ್ ಪೊಗಟ್ ಗೆ ಕುಸ್ತಿಯಲ್ಲಿ ಚಿನ್ನ : ಪದಕ ಗಳಿಕೆಯಲ್ಲಿ ಅರ್ಧ ಸೆಂಚುರಿ ಬಾರಿಸಿದ ಭಾರತೀಯರು

ಈ ಸುದ್ದಿಯನ್ನು ಶೇರ್ ಮಾಡಿ

Pogat--01

ಗೋಲ್ಡ್‍ಕೋಸ್ಟ್, ಏ.14- ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ವಿನೇಶ್ ಪೋಗಟ್ ಹಾಗೂ ಸುಮಿತ್ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತ ಪದಕ ಪಟ್ಟಿಯಲ್ಲಿ 50ಕ್ಕೂ ಅಧಿಕ ಪದಕ ಗೆಲ್ಲುವ ಮೂಲಕ ಪದಕ ಗಳಿಕೆಯಲ್ಲಿ ಭಾರತದ ಆರಗಾರರು ಅರ್ಧ ಸೆಂಚುರಿ ಬಾರಿಸಿದ್ದಾರೆ.  ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೆ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪ್ರತಿಭಾವಂತ ಕುಸ್ತಿಪಟು ವಿನೇಶ್ ಪೋಗತ್ ಮಹಿಳೆಯರ 50ಕೆ.ಜಿ. ಫ್ರೀಸ್ಟ್ರೈಲ್ ವಿಭಾಗದಲ್ಲಿ ಬಂಗಾರದ ಪದಕ ಗೆದ್ದುಕೊಂಡಿದ್ದಾರೆ. ವಿನೇಶ್ 10ನೇ ದಿನವಾದ ಶನಿವಾರ ಭಾರತಕ್ಕೆ 23ನೇ ಚಿನ್ನ ಗೆದ್ದುಕೊಟ್ಟರು.

ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಕುಸ್ತಿತಾರೆ ಸಾಕ್ಷಿ ಮಲಿಕ್ ಮಹಿಳೆಯರ 62 ಕೆಜಿ  ಫ್ರೀಸ್ಟೈಲ್‌ನಲ್ಲಿ ನ್ಯೂಝಿಲೆಂಡ್‌ನ ಟೇಲಾ ಫೋರ್ಡ್‌ರನ್ನು ಮಣಿಸಿ ಕಂಚಿನ ಪದಕ ಜಯಿಸಿದರು.   ಪುರುಷರ ಫ್ರೀಸ್ಟೈಲ್ 125 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ ನೈಜೀರಿಯದ ಸಿನಿವೀ ಬೋಲ್ಟಿಕ್ ಗಾಯಗೊಂಡು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಸುಮಿತ್ ಚಿನ್ನದ ಪದಕದ ಪಡೆದರು. ಸುಮಿತ್ ಚಿನ್ನ ಜಯಿಸುವುದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಅರ್ಧಶತಕ ಬಾರಿಸಿತು.

58 ವರ್ಷಗಳ ಬಳಿಕ ಜಾವೆಲಿನ್‍ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ನೀರಜ್
ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಕ್ರೀಡಾಕೂಟ 10 ದಿನ ಭಾರತ ಹೆಮ್ಮೆಪಡುವಂಥ ಸಾಧನೆ ಸಾಕ್ಷಿಯಾಗಿದೆ. ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 58 ವರ್ಷಗಳ ಬಳಿಕ ಈ ಕ್ರೀಡೆಯಲ್ಲಿ ಭಾರತ ಗಳಿಸಿದ ಮೊದಲ ಚಿನ್ನದ ಪದಕ ಇದಾಗಿದೆ. ತೀವ್ರ ಪೈಪೋಟಿಯಿದ ಫೈನಲ್‍ನಲ್ಲಿ ನೀರಜ್ 86.47 ಮೀಟರ್ ದೂರಕ್ಕೆ ಭರ್ಜಿಯನ್ನು ನಿಖರವಾಗಿ ಎಸೆದು ಬಂಗಾರಕ್ಕೆ ಕೊರಳೊಡ್ಡಿದರು. 58 ವರ್ಷಗಳ ಹಿಂದೆ ಭಾರತದ ಅಥ್ಲೀಟ್ ದಂತಕಥೆ ಮಿಲ್ಕಾ ಸಿಂಗ್ ಈ ಸಾಧನೆ ಮಾಡಿದರು. ನೀರಜ್ ಸಾಧನೆ ಭಾರತಕ್ಕೆ ದೊಡ್ಡ ಹೆಮ್ಮೆಯ ಸಂಗತಿಯಾಗಿದೆ.

20 ವರ್ಷಗಳ ಜ್ಯೂನಿಯರ್ ವಿಶ್ವ ಚಾಂಪಿಯನ್ ನೀರಜ್ ನಿನ್ನೆ ಪ್ರಥಮ ಎಸೆತದಲ್ಲೇ ಫೈನಲ್‍ಗೆ ಅರ್ಹತೆ ಪಡೆದು ಪದಕ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಕಳೆದ ತಿಂಗಳು ಪಟಿಯಾಲದಲ್ಲಿ ನಡೆದ ಫೆಡರೇಷನ್ ಕಪ್ ನ್ಯಾಷನಲ್ ಚಾಂಪಿಯನ್‍ಶಿಪ್ ಕ್ರೀಡಾಕೂಡದಲ್ಲಿ ನೀರಜ್ 85.94 ಮೀ. ದೂರಕ್ಕೆ ಜಾವೆಲಿನ್ ಎಸೆದು ಸಿಡಬ್ಲ್ಯುಜಿನಲ್ಲಿ ಪದಕ ಜಯದ ಭರವಸೆ ಹೊಂದಿದ್ದರು.

10ನೇ ದಿನವೂ ಭಾರತಕ್ಕೆ ಪದಕಗಳ ಸುರಿಮಳೆ : 
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದ 10ನೇ ದಿನವಾದ ಇಂದೂ ಕೂಡ ಭಾರತದ ಪಾರಮ್ಯ ಮುಂದುವರಿದಿದ್ದು, ದೇಶದ ಹೆಮ್ಮೆಯ ಬಾಕ್ಸಿಂಗ್ ತಾರೆ ಮೇರಿ ಕೋಮ್ ಸೇರಿದಂತೆ ನಾಲ್ವರು ಪ್ರತಿಭಾವಂತ ಸ್ಫರ್ಧಿಗಳು ಬಂಗಾರದ ಪದಕಗಳನ್ನು ಕೊರಳಿಗೇರಿಕೊಂಡಿದ್ದಾರೆ. ಒಂಭತ್ತನೇ ದಿನವಾದ ನಿನ್ನೆಗೆ ಒಟ್ಟು 11 ಪದಕಗಳನ್ನು ಗೆದ್ದಿರುವ ಭಾರತೀಯ ಕ್ರೀಡಾಪಟುಗಳ ಪ್ರಾಬಲ್ಯ ಇಂದೂ ಕೂಡ ಮುಂದುವರಿಯಿತು.  ಮಹಿಳೆಯರ 45-48 ಕೆಜಿ ವಿಭಾಗದ ಫೈನಲ್‍ನಲ್ಲಿ ಮೇರಿ ಕೋಮ್ ಉತ್ತರ ಐರ್ಲೆಂಡ್‍ನ ಕ್ರಿಸ್ಟಿನಾ ಒಹಾರಾ ಅವರನ್ನು ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮಹಿಳೆಯರ ವಿಭಾಗದ ಬಾಕ್ಸಿಂಗ್‍ನಲ್ಲಿ 35ರ ಹರೆಯದ ಅನುಭವಿ ತಾರೆ ಎಂಸಿ ಮೇರಿ ಕೋಮ್ ಸೆಮಿಫೈನಲ್ಸ್‍ನಲ್ಲಿ ಶ್ರೀಲಂಕಾದ ಅನುಷಾ ದಿಲುಕ್ಷೆ ವಿರುದ್ಧ 5-0 ಅಂತರದ ನಿರಾಯಾಸ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದ್ದರು.

ಚಿನ್ನ ಗೆದ್ದ ಗೌರವ್ :
ಭಾರತದ ಮತ್ತೊಬ್ಬ ಪ್ರತಿಭಾವಂತ ಬಾಕ್ಸರ್ ಗೌರವ್ ಸೋಳಂಕಿ 52 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಪುರುಷರ 60 ಕೆಜಿ ವಿಭಾಗದಲ್ಲಿ ಭಾರತದ ಬಾಕ್ಸರ್ ಮನಿಷ್ ಕೌಶಿಕ್ ಫೈನಲ್‍ನಲ್ಲಿ ಆಸ್ಟ್ರೇಲಿಯಾದ ಹ್ಯಾರಿ ಗ್ಯಾರ್‍ಸೈಡ್‍ರಿಂದ ಪರಾಭವಗೊಂಡರೂ ರಜತ ಪದಕ ಗೆದ್ದುಕೊಂಡಿದ್ಧಾರೆ.

ಕುಸ್ತಿಯಲ್ಲಿ ಸುಮಿತ್‍ಗೆ ಚಿನ್ನ :

ಪುರುಷರ 125 ಕೆಜಿ ಪುರುಷರ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಭಾರತ ಪಟು ಸುಮಿತ್ ಮಲಿಕ್ ಸ್ವರ್ಣ ಪದಕ ಗಳಿಸಿ ಗೆಲುವಿನ ಕಿರುನಗೆ ಬೀರಿದ್ದಾರೆ. ಗಾಯದಿಂದಾಗಿ ಅವರ ಪ್ರತಿಸ್ಪರ್ಧಿ ನೈಜಿರಿಯಾದ ಸಿನಿವೀ ಬೋಲ್ಟಿಕ್ ಫೈನಲ್‍ನಿಂದ ನಿರ್ಗಮಿಸಿದ ಕಾರಣ ಸುಮಿತ್ ವಿಜೇತರನ್ನಾಗಿ ಘೋಷಿಸಲಾಗಿದೆ. ಸೆಮಿಫೈನಲ್‍ನಲ್ಲಿ ಅವರು ಪಾಕಿಸ್ತಾನದ ತೈಯಬ್ ರಾಝಾ ಅವರನ್ನು 10-4ರಿಂದ ಮಣಿಸಿ ಅಂತಿಮ ಸುತ್ತು ತಲುಪಿದ್ದರು.

ಸ್ವರ್ಣಕ್ಕೆ ಗುರಿಯಿಟ್ಟ ರಜಪೂತ್ :

ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಶೂಟರ್‍ಗಳ ನಿಖರ ಗುರಿಯಿಂದ ಪದಕಗಳು ಸುರಿಮಳೆಯಾಗುತ್ತಿರುವಾಗಲೇ ಸೌರವ್ ರಜಪೂತ್ 50 ಮೀಟರ್ ರೈಫಲ್ 3 ಪೋಸಿಷನ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. 37 ವರ್ಷದ ರಜಪೂತ್ 454.5 ಸ್ಕೋರ್‍ಗಳೊಂದಿಗೆ ಈ ಸಾಧನೆ ಮಾಡಿದ್ದಾರೆ.

ಟಿಟಿ ಸಿಂಗಲ್ಸ್‍ನಲ್ಲಿ ಮನಿಕಾ ಫೈನಲ್‍ಗೆ :
ಟೇಬಲ್ ಟೆನಿಸ್ ವಿಭಾಗದ ಮಹಿಳಾ ಸಿಂಗಲ್ಸ್‍ನಲ್ಲಿ ಭಾರತದ ಮನಿಕಾ ಬಾತ್ರಾ ವಿಶ್ವದ ನಂ.4ನೇ ಶ್ರೇಯಾಂಕದ ಸಿಂಗಪುರ್‍ನ ತಿಯಾನ್‍ವಿ ಫೆಂಜ್‍ರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದು, ಪದಕ ಗೆಲುವನ್ನು ಖಾತರಿಗೊಳಿಸಿದ್ದಾರೆ. ಮನಿಕಾ, ಫೆಂಜ್‍ರನ್ನು 12-10, 5-11, 11-8, 5-11, 5-11, 11-9, 13-11 ಸೆಟ್‍ಗಳಿಂದ ಸೋಲಿಸಿ ಅಂತಿಮ ಸುತ್ತು ತಲುಪಿದ್ದು, ಮತ್ತೊಂದು ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ.

Facebook Comments

Sri Raghav

Admin