ತಿಂಗಳಾಂತ್ಯಕ್ಕೆ ರಾಜ್ಯದಲ್ಲಿ ಮೋದಿ ಅಬ್ಬರದ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

Modi--02

ಬೆಂಗಳೂರು,ಏ.16-ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ ಅಂತ್ಯದಿಂದ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಮೂಲಕ ವಿಧಾನಸಭಾ ಚುನಾವಣೆಗೆ ರಣ ಕಹಳೆ ಮೊಳಗಿಸಲಿದ್ದಾರೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ತಿಳಿಸಿದರು.  ಈಗಾಗಲೇ ರಾಜ್ಯದಲ್ಲಿ ಯಾವ ಯಾವ ಕಡೆ ಪ್ರಚಾರ ನಡೆಸಬೇಕೆಂಬ ಬಗ್ಗೆ ಪಟ್ಟಿ ಸಿದ್ದಪಡಿಸಿ ಕಳುಹಿಸಿಕೊಡಲಾಗಿದೆ. ತಿಂಗಳ ಅಂತ್ಯದಿಂದ ಮೋದಿ ಅವರು ರಾಜ್ಯದ ನಾನಾ ಕಡೆ ಬಹಿರಂಗ ಪ್ರಚಾರ, ರೋಡ್ ಶೋಗಳ ಮೂಲಕ ಮತಯಾಚನೆ ಮಾಡಲಿದ್ದಾರೆ.

ಬೆಂಗಳೂರು ಪ್ರೆಸ್‍ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯುವುದಕ್ಕೆ ಸಾಧ್ಯವೇ ಇಲ್ಲ. ಸ್ವಂತ ಬಲದ ಮೇಲೆ ನಾವು ಅಧಿಕಾರ ಹಿಡಿಯುವುದು ಶತಸಿದ್ಧ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಯಾವ ಸಮೀಕ್ಷೆಗಳು ಏನೇ ಹೇಳಲಿ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿರುವ ನನಗೆ ಜನರ ನಾಡಿಮಿಡಿತ ಏನೆಂಬುದು ತಿಳಿದಿದೆ. ನಮ್ಮದು ಕಾರ್ಯಕರ್ತರ ಪಕ್ಷ. ಕಾಂಗ್ರೆಸ್ ಆಡಳಿತಕ್ಕೆ ಜನ ರೋಸಿ ಹೋಗಿದ್ದಾರೆ. ಆಡಳಿತ ವಿರೋಧಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಲಿದೆ ಎಂದರು.  ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ರಾಜ್ಯದ ಜನತೆ ಕಾಂಗ್ರೆಸ್ ಬದಲಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಿದ್ದರಿದ್ದಾರೆ. ಕಾಂಗ್ರೆಸ್‍ನ ಕೌಂಡೌನ್ ಆರಂಭವಾಗಿದೆ ಎಂದು ರಾವ್ ಭವಿಷ್ಯ ನುಡಿದರು.

ವೈಫಲ್ಯಗಳ ಮರೆಮಾಚಲು ಯತ್ನ:
ಕಳೆದ ಐದು ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಕ್ಷೇತ್ರಗಳಲ್ಲೂ ವಿಫಲರಾಗಿದ್ದಾರೆ. ಇದನ್ನು ಜನರಿಂದ ಮರೆಮಾಚಲು ಲಿಂಗಾಯಿತ ಧರ್ಮ, ಪ್ರತ್ಯೇಕ ನಾಡಧ್ವಜ ಸೇರಿದಂತೆ ಕನ್ನಡಿಗರ ಭಾವನೆಗಳ ಜೊತೆ ಆಟವಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ನಾಟಕಗಳಿಗೆ ಕನ್ನಡಿಗರು ಮರುಳಾಗುವುದಿಲ್ಲ ಎಂದರು.  ಕಾವೇರಿ ಹಾಗೂ ಮಹದಾಯಿ ನದಿ ಹಂಚಿಕೆ ಸಮಸ್ಯೆಯನ್ನು ಪರಿಹರಿಸಲು ಬಿಜೆಪಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಎದುರಾಗಿದ್ದ ಅಂತಾರಾಜ್ಯ ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸಲಿಲ್ಲ. ಬಿಜೆಪಿಯಿಂದ ಮಾತ್ರ ಇದು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಯಾವ ಹಂತಕ್ಕೆ ಬಂದಿದೆ ಎಂದರೆ ಪಿಎಫ್‍ಐನಂತಹ ಕೆಲವು ರಾಷ್ಟ್ರದ್ರೋಹಿ ಸಂಘಟನೆಗಳ ಜೊತೆ ಕೈ ಜೋಡಿಸಲು ಮುಂದಾಗಿದೆ. ಕರ್ನಾಟಕದ ಜನತೆ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.  ಎಐಸಿಸಿ ಅಧ್ಯಕ್ಷ ರಾಹುಲ್ ಚುನಾವಣಾ ಸಂದರ್ಭದಲ್ಲಿ ಹಿಂದುವಾಗಿ ಮಠಮಾನ್ಯಗಳಿಗೆ ಭೇಟಿ ಕೊಡುತ್ತಿದ್ದಾರೆ. ಆದರೆ ಅವರದೇ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಠಮಾನ್ಯಗಳನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದರು. ಇದಕ್ಕೆ ರಾಹುಲ್ ಅವರ ನಿಲುವೇನು ಎಂದು ಪ್ರಶ್ನಿಸಿದರು. ಮಠ-ಮಂದಿರಗಳು, ಧಾರ್ಮಿಕ ಕೇಂದ್ರಗಳು ಚುನಾವಣೆಯ ವಿಷಯಗಳಾಗಬಾರದು. ಜನರ ಭಾವನೆಗಳ ಚೆಲ್ಲಾಟವಾಡಿದರೆ ಸರಿಯಾದ ಸಂದರ್ಭದಲ್ಲಿ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಚುನಾವಣಾ ಮುನ್ನವೇ ಉಪಮುಖ್ಯಮಂತ್ರಿ ಹುದ್ದೆ ಘೋಷಣೆ ಮಾಡುವ ಪದ್ಧತಿ ಇಲ್ಲ. ಶ್ರೀರಾಮುಲು ಒಬ್ಬ ಜನಪ್ರಿಯ ನಾಯಕ. ಅವರ ಸಾಮಥ್ರ್ಯವನ್ನು ಪಕ್ಷ ಬಳಸಿಕೊಳ್ಳಲಿದೆ. ರಾಜ್ಯದಲ್ಲಿ ಅವರು ಪ್ರಚಾರ ಮಾಡಲಿದ್ದು,ಉಪಮುಖ್ಯಮಂತ್ರಿ ಹುದ್ದೆ ನೀಡುವ ಸಂಬಂಧ ತೀರ್ಮಾನವಾಗಲಿದೆ ಎಂದರು.  ಸಂಸದರು ವಿಧಾನಸಭೆ ಚುನಾವಣೆಯಲ್ಲಿ ನಿಲ್ಲಬಾರದು ಎಂದೇನಿಲ್ಲ. ಅವರ ಸಾಮಥ್ರ್ಯಕ್ಕೆ ಅನುಗುಣವಾಗಿ ಪಕ್ಷ ಅವರ ಸೇವೆಯನ್ನು ಬಳಸಿಕೊಳ್ಳಲಿದೆ. ಶ್ರೀರಾಮುಲು ಒಬ್ಬ ಜನಪ್ರಿಯ ನಾಯಕನಾಗಿರುವುದರಿಂದಲೇ ಚುನಾವಣಾ ತಂತ್ರದ ಭಾಗವಾಗಿ ಕಣಕ್ಕಿಳಿಸಿದ್ದೇವೆ ಎಂದರು. ಗೋಷ್ಠಿಯಲ್ಲಿ ಪ್ರೆಸ್‍ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್‍ಕುಮಾರ್, ವರದಿಗಾರ ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮುಂತಾದವರಿದ್ದರು.

Facebook Comments

Sri Raghav

Admin