ಬಿ.ಬಿ.ರಾಮಸ್ವಾಮಿ ಗೌಡರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಡಿಕೆ ಬ್ರದರ್ಸ್ ಪ್ರತಿಕೃತಿ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Kunigal--01

ಕುಣಿಗಲ್,ಏ.16- ಕಾಂಗ್ರೆಸ್‍ನ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಡಿಕೆಎಸ್ ಸಹೋದರರ ಪ್ರತಿಕೃತಿ ದಹಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 40 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ರಾಮಸ್ವಾಮಿ ಗೌಡ ಅವರಿಗೆ ಟಿಕೆಟ್ ತಪ್ಪಲು ಕಾರಣರಾದ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಬಿ.ಬಿ.ರಾಮಸ್ವಾಮಿ ಗೌಡ ಬೆಂಬಲಿಗರು ಅರೆಬೆತ್ತಲೆ ಮೆರವಣಿಗೆ ಮಾಡಿ ಅವರ ಪ್ರತಿಕೃತಿ ದಹಿಸಿ ರಸ್ತೆ ತಡೆ ನಡೆಸಿದರು.

ನಂತರ ಸಂತೋಷ್ ಎಂಬಾತ ರಾಮಸ್ವಾಮಿ ಅಭಿಮಾನಿ ಕಾಂಗ್ರೆಸ್ ಕಚೇರಿ ನಮ್ಮ ಮನೆ ಮುಂಭಾಗದಲ್ಲಿದ್ದ ನೀರಿನ ಟ್ಯಾಂಕರ್ ಹತ್ತಿ ಆತ್ಮಹತ್ಯೆಗೆ ಪ್ರಯತ್ನಿಸಿದ ವೇಳೆ ಸ್ಥಳಕ್ಕೆ ಪೊಲೀಸರು ಆಗಮಿಸಿ ರಕ್ಷಿಸುವಲ್ಲಿ ಯಶಸ್ವಿಯಾದರು. ನಂತರ ರಾಮಸ್ವಾಮಿ ಗೌಡರು ದೆಹಲಿಯಿಂದ ದೂರವಾಣಿ ಕರೆ ಮಾಡಿ ಬೆಂಬಲಿಗರಿಗೆ ನಾನು ಬರುವವರೆಗೂ ಶಾಂತಿಯಿಂದ ಇದ್ದು,ಸಾರ್ವಜನಿಕರಿಗೆ ತೊಂದರೆ ನೀಡಬೇಡಿ. ಕಾಂಗ್ರೆಸ್ ಅಭ್ಯರ್ಥಿ ರಂಗನಾಥ್ ಮತ್ತು ಡಿಕೆಎಸ್ ಸಹೋದರರಿಗೆ ಬುದ್ಧಿ ಕಲಿಸುವ ಕಾಲ ಹತ್ತಿರವಾಗಿದೆ. ಇಂದು ನನ್ನ ಮುಂದಿನ ನಡೆ ಬಗ್ಗೆ ನಿರ್ಧಾರ ತಿಳಿಸುತ್ತೇನೆ. ಅಲ್ಲಿಯವರೆಗೂ ಬೆಂಬಲಿಗರು ಪ್ರಚೋದನೆಗೆ ಒಳಗಾಗಬೇಡಿ ಎಂದು ತಿಳಿಸಿದರು.

ಆಗ ಅವರ ಬೆಂಬಲಿಗರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಆದರೆ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವ ಘಳಿಗೆಯಲ್ಲಿ ಸ್ಫೋಟವಾಗುತ್ತದೆಯೋ ತಿಳಿಯದು.  ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಒಟ್ಟಿನಲ್ಲಿ ಡಿಕೆಎಸ್ ಸಹೋದರರ ನಡೆಯನ್ನು ತಾಲೂಕಿನ ಜನತೆ ಪಕ್ಷಾತೀತವಾಗಿ ಖಂಡಿಸುತ್ತಿದ್ದಾರೆ.

Facebook Comments

Sri Raghav

Admin