ಜಗತ್ತು ಕಂಡ ಅಪರೂಪದ ಸಮಗ್ರ ಯುಗಪುರುಷ ಬಸವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

basavanna

ಡಾ.ಗುರುರಾಜ ಪೋಶೆಟ್ಟಿಹಳ್ಳಿ
ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ.
ಆಚಾರವೇ ಸ್ವರ್ಗ, ಅನಾಚಾರವೇ ನರಕ.
ದಯವೇ ಧರ್ಮದ ಮೂಲವಯ್ಯ

ಇಂತಹ ಮುತ್ತಿನಂಥ ಮಾತುಗಳನ್ನು ನುಡಿದವರು ಬಸವಣ್ಣನವರು.

ಉಳ್ಳವರು ಶಿವಾಲಯ ಮಾಡಿಹರು, ನಾನೇನು ಮಾಡುವೆ ಬಡವನಯ್ಯಾ,
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಲಶವಯ್ಯಾ ಕೂಡಲ ಸಂಗಮದೇವ ಕೇಳಯ್ಯಾ ಸ್ಥಾವರಕ್ಕಳಿವುಂಟು,
ಜಂಗಮಕ್ಕಳಿವಿಲ್ಲ.

ಹೀಗೆ 900 ವರ್ಷಗಳ ಹಿಂದೆಯೇ ನಮ್ಮ ಸಮಾಜದಲ್ಲಿ ಇಂದೂ ಅಗತ್ಯವಾಗಿರುವ ಸುಧಾರಣೆ ಕಂಡುಕೊಂಡು ಆಚರಣೆಗೆ ತರಲು ಪ್ರಯತ್ನಿಸಿದ ಬಸವಣ್ಣನವರು ಕನ್ನಡಿಗರಿಗೆ ಚಿರವಂದ್ಯರು. ಕನ್ನಡ ನೆಲದ ಮೇಲೆ ಪ್ರಥಮ ಸಮಾಜೋ ಧಾರ್ಮಿಕ ಆಂದೋಲನವೊಂದು ಹನ್ನೆರಡನೆಯ ಶತಮಾನದಲ್ಲಿ ಜರುಗಿತು. ಈ ಆಂದೋಲನದ ನೇತಾರ ಬಸವಣ್ಣನವರು.

ಜಾಗತಿಕ ಸಂಸ್ಕೃತಿ ಗೆ ಘನತೆಯನ್ನು ತಂದು ಕೊಡುವವರೆಂದರೆ ತಮ್ಮ ವ್ಯಕ್ತಿತ್ವವನ್ನು ಉದಾತ್ತೀಕರಿಸಿಕೊಂಡ ಮತ್ತು ತಮ್ಮ ಪರಿಸರವನ್ನು ಉದಾತ್ತೀಕರಿಸುವ ಯುಗ ಪುರುಷರು. ಈ ಎರಡನ್ನೂ ಸಾಧಿಸುವ ಮೂಲಕ ಬಸವಣ್ಣನವರು ಕೇವಲ ಮಹಾಪುರುಷರಾಗಿ ಉಳಿಯದೆ, ಯುಗ ಪುರುಷರಾಗಿಯೂ ಬೆಳೆದಿದ್ದಾರೆ. ಸಾಮಾನ್ಯವಾಗಿ ಯುಗ ಪುರುಷರು ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಹೀಗೆ ಜೀವನದ ಯಾವುದೋ ಒಂದು ಕ್ಷೇತ್ರಕ್ಕೆ ಒಂದು ಹೊಸ ತಿರುವು ತಂದುಕೊಡುತ್ತಾರೆ. ಬಸವಣ್ಣನವರು ಇಂಥ ಎಲ್ಲ ಕ್ಷೇತ್ರಗಳಿಗೂ ಹೊಸ ತಿರುವು ಕೊಟ್ಟ ಕಾರಣ ಅವರನ್ನು ಜಗತ್ತು ಕಂಡ ಒಬ್ಬ ಅಪರೂಪದ ಸಮಗ್ರ ಯುಗಪುರುಷನೆಂದು ಗುರುತಿಸಲಾಗುತ್ತಿದೆ.

ಬಸವಣ್ಣನವರ ಬಾಳು ಸತತ ಸಾಧನೆಯ ಸೋಪಾನ. ಅಂದಿನವರೆಗೆ ಸಮಾಜದಲ್ಲಿ ಹೆಪ್ಪುಗಟ್ಟಿದ್ದ ಅಮಾನವವೀಯತೆ ಮೌಢ್ಯದ ಕತ್ತಲೆಯನ್ನು ಬಸವಣ್ಣನವರು ಮತ್ತು ಇತರ ಶರಣರು ತಮ್ಮ ಪ್ರಖರ ವ್ಯಕ್ತಿತ್ವದ ಕಿರಣಗಳಿಂದ ಹೊರದೂಡುವ ಬೆಳಕಿನ ಆಶಾಕಿರಣವಾದರು. ಮಾನವ ಮಹಾದೇವನಾಗುವುದು ಬೇಡ, ಲೋಕೋಪಕಾರಿ ಕಲ್ಯಾಣಿಯಾದರೆ ಸಾಕು ಎಂದರು. ಬಸವಣ್ಣನವರು ಹುಟ್ಟುವ ಹೊತ್ತಿಗೆ ಕರ್ನಾಟಕದ ಧಾರ್ಮಿಕ ಕ್ಷೇತ್ರವನ್ನು ಅಗ್ರಹಾರ, ದೇವಾಲಯ ಸಂಸ್ಕೃತಿ ಗಳು ಆಳುತ್ತಿದ್ದವು. ಹೀಗಾಗಿ ಹುಟ್ಟು ಹೋರಾಟಗಾರರಾದ ಬಸವಣ್ಣನವರು ತನ್ನ ಎಳೆಯ ವಯಸ್ಸಿನಲ್ಲೆ ಸ್ಥಗಿತ ಮೌಲ್ಯದ ಅಗ್ರಹಾರ ಸಂಸ್ಕೃತಿ ಯನ್ನು ತೊರೆದು, ಚಲನಶೀಲ ಮೌಲ್ಯದ ದೇವಾಲಯ ಸಂಸ್ಕೃತಿ ಯ ನೆಲೆಯಾಗಿದ್ದ ಕೂಡಲ ಸಂಗಮಕ್ಕೆ ಬಂದರು. ಇದು ಅವರ ಜೀವನದಲ್ಲಿ ಕರ್ಮದಿಂದ ಧರ್ಮಕ್ಕೆ ದಾಟಿ ಬಂದ ಕಾಲಘಟ್ಟವಾಗಿದೆ.

ಭಾರತೀಯರು ವೈಯಕ್ತಿಕವಾಗಿ ಸಬಲರು, ಸಾಮಾಜಿಕವಾಗಿ ದುರ್ಬಲರು ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಶರಣರು ಸಬಲ ಸಮಾಜಕ್ಕಾಗಿ ಬುದ್ಧನಿಗಿಂತ ಹೆಚ್ಚು ವೈಜ್ಞಾನಿಕವಾಗಿ ವಿಚಾರಿಸಿ, ವ್ಯಕ್ತಿ ಕಲ್ಯಾಣದೊಂದಿಗೆ ಸಮಾಜ ಕಲ್ಯಾಣಕ್ಕಾಗಿಯೂ ಶ್ರಮಿಸಿದರು. ಈ ಉಭಯ ಕಲ್ಯಾಣಗಳನ್ನು ಲಿಂಗ ವ್ಯಸನ, ಜಂಗಮ ಪ್ರೇಮವೆಂದು ಬಸವಣ್ಣನವರು ಕರೆದಿದ್ದಾರೆ. ಸೋಹಂ ಎಂದೆನಿಸಿದೆ, ದಾಸೋಹಂ ಎಂದೆನಿಸಯ್ಯ ಎಂದು ಹೇಳಿ ಜಂಗಮ ದಾಸೋಹ ತತ್ವಕ್ಕೆ ಅವರು ಮಾದರಿ ಎನಿಸಿದ್ದಾರೆ. ಬಸವಣ್ಣನವರ ಮಾನವ ಪ್ರೇಮದ ಮಹತ್ಕಾರ್ಯಗಳಲ್ಲಿ ಸ್ತ್ರೀ ಸಮಾನತೆಯೂ ಪ್ರಮುಖವಾದುದು. ಸ್ತ್ರೀಯರಿಗೆ ಆರ್ಥಿಕ, ಸಾಮಾಜಿಕ ಸಮಾನತೆಯ ಜತೆಗೆ ಬೌದ್ಧಿಕ ಹಾಗು ಆಧ್ಯಾತ್ಮಿಕ ತತ್ವಜ್ಞಾನದ ಸಮಾನತೆ ಒದಗಿಸಿದರು. ಅದಕ್ಕೆ ಮುಕ್ತಾಯಕ್ಕ , ಅಕ್ಕ ಮಹಾದೇವಿಯರೇ ಉದಾಹರಣೆ.

ಬಸವಣ್ಣನವರು ಸನ್ಯಾಸಿಯಾಗಿರಲಿಲ್ಲ; ಮಠಾಧಿಪತಿಯಾಗಿರಲಿಲ್ಲ; ಕಾವಿಧಾರಿಯಾಗಿರಲಿಲ್ಲ; ಸಂಸಾರಿಯಾಗಿ ಲೌಕಿಕದಲ್ಲಿದ್ದು ಅಪ್ರತಿಮ ವಿಶ್ವಗುರುವಾಗಿ ಅಲೌಕಿಕ ಬೆಳಕು ಬೆಳಗಿದರು. ಮನುಕುಲದ ಸರ್ವಾಂಗೀಣ ಅಭ್ಯುದಯವೇ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಅಥವಾ ಬಸವ ಧರ್ಮದ ಮಹೋನ್ನತ ಗುರಿಯಾಗಿತ್ತು. ತಾನು ಮಾಡುವ ಕಾಯಕದಲ್ಲೇ ಕೈಲಾಸ ಕಾಣುವ ಧನ್ಯತೆ. ಇದು ಅವರು ಕಾಯಕಕ್ಕೆ ನೀಡಿದ ಪರಮೋಚ್ಛ ಪ್ರಾಧಾನ್ಯತೆ. ನಮ್ಮ ದೇಶದ ಸಂವಿಧಾನ ಜಾತ್ಯಾತೀತ ಎಂದು ಘೋಷಣೆ ಮಾಡಿದ್ದರೂ ಶಾಲೆಗೆ ಪ್ರಥಮ ಪ್ರವೇಶ ಮಾಡುವ ಮಗು ಪ್ರವೇಶ ಪತ್ರದಲ್ಲಿ ಜಾತಿಯ ಬಗ್ಗೆ ಬರೆಯಬೇಕು. ಇದು ಪ್ರಸ್ತುತ ಪ್ರಜಾತಂತ್ರದ ಅಣಕವೆಂದೇ ಹೇಳಬಹುದು. ಇಂತಹ ಮಹಾನ್ ವ್ಯಕ್ತಿ ನೀಡಿದ ಸಂದೇಶ ಹಾಗೂ ನಡೆದುಕೊಂಡ ರೀತಿ ಸೂರ್ಯ-ಚಂದ್ರ ಇರುವವರೆಗೂ ಅನುಕರಣೀಯವಾಗಿದೆ. ಸ್ವಾರ್ಥವೇ ಪ್ರಧಾನವಾಗಿರುವ ಇಂದಿನ ಆಧುನಿಕ ಯುಗದಲ್ಲಿ ಸತ್ಯ, ಶಾಂತಿ, ಅಹಿಂಸೆ, ಪ್ರೀತಿ, ಸ್ನೇಹ, ನಂಬಿಕೆ, ಸಹÀಕಾರ, ಸೌಹಾರ್ದತೆಗಳು ಕಣ್ಮರೆಯಾಗಿವೆ. ಪರಸ್ಪರ ದ್ವೇಷ, ಅಸೂಯೆಯ ಜ್ವಾಲಾಮುಖಿ ಹೊಗೆ ಕಾರುತ್ತಿದೆ. ಇಂತಹ ಸಂದರ್ಭದಲ್ಲಿ ಅನೇಕ ಸಮಸ್ಯೆಗಳಿಗೆ ಬಸವಣ್ಣನವರ ಸಂದೇಶಗಳು ಮಾರ್ಗದರ್ಶಿ ಸೂತ್ರಗಳಾಗಲಿವೆ.

ಈ ಸಾಮಾಜಿಕ ಸಮಾನತೆಗೆ ಮೂಲವಾದುದು ಆರ್ಥಿಕ ಸಮಾನತೆ ಯೆಂಬುದನ್ನು ಅರಿತಿದ್ದ ಬಸವಣ್ಣನವರು, ಅರ್ಥಮಂತ್ರಿ (ಫೈನಾನ್ಸ್ ಮಿನಿಸ್ಟರ್) ಆಗಿದ್ದುದು ಒಂದು ಯೋಗಾಯೋಗ. ಬಸವಣ್ಣನ ಈ ಅರ್ಥತತ್ವಕ್ಕೆ ಎರಡು ಮಗ್ಗಲುಗಳುಂಟು. ಒಂದು ಕಾಯಕ (ಶ್ರಮ) ಇನ್ನೊಂದು ದಾಸೋಹ (ವಿತರಣೆ). ಕಾಯಕ ಮಾಧ್ಯಮದಿಂದ ಗಳಿಸಬೇಕು. ದಾಸೋಹ ಮಾಧ್ಯಮದಿಂದ ಬಳಸಬೇಕು ಎಂಬ ಸೂತ್ರದ ಆದರ್ಶದಲ್ಲಿ ಕಲ್ಯಾಣ ರಾಜ್ಯ ಕಟ್ಟುವುದು ಮಂತ್ರಿ ಬಸವಣ್ಣನವರ ಧ್ಯೇಯವಾಗಿತ್ತು. ಭಾರತೀಯ ಪರಂಪರೆಯಲ್ಲಿ ಧರ್ಮ ವೀರನೆನಿಸುವ ಬಸವಣ್ಣ, ಅದನ್ನೂ ಮೀರಿದ ಮಹಾಪುರುಷನೆಂದು ಈ ಎಲ್ಲ ಚಿಂತನೆಗಳು ವ್ಯಕ್ತಪಡಿಸುತ್ತದೆ. ಅವನು ಈ ಚಿಂತನೆಗಳಿಗೆ ಸಮರ್ಥ ವಾಹಕವಾಗಿ ಬಳಸಿದ್ದು ವಚನಗಳನ್ನು. ಬಸವಣ್ಣನವರು ಸಾಂಪ್ರದಾಯಿಕತೆಗಿಂತ ಮಾನವೀಯ ಮೌಲ್ಯಗಳಿಗೆ ಹೆಚ್ಚು ಮಹತ್ವವನ್ನು ಕೊಟ್ಟರು. ಅವುಗಳ ತಳಹದಿಯ ಮೇಲೆ ಹೊಸ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದರು. ಉಚ್ಛ ವರ್ಗದಲ್ಲಿ ಹುಟ್ಟಿದವನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಇತರರನ್ನು ಹಿಂಸಿಸುವ ಕಾರ್ಯದಲ್ಲಿ ತೊಡಗಿದರೆ, ಹೊಲಸು ತಿನ್ನುವ ಚಪಲವನ್ನು ಬಳಸಿಕೊಂಡರೆ ಅವನನ್ನು ಹೊಲೆಯನೆಂದೇ ಪರಿಗಣಿಸಬೇಕು. ಕೀಳು ಜಾತಿಯಲ್ಲಿ ಹುಟ್ಟಿದವನೊಬ್ಬ ಸಾತ್ವಿಕ ಜೀವನ ನಡೆಸಿ ದಿವ್ಯ ಜೀವನ ಸಿದ್ಧಿಯನ್ನು ಪಡೆದರೆ ಅವನನ್ನೂ ಉಚ್ಚ ಕುಲದವನೆಂದೇ ಕಾಣಬೇಕು.

ಎಲ್ಲಾ ಧರ್ಮಗಳಿಗೂ ದಯವೇ ಮೂಲವಾಗಬೇಕು. ಯಾವ ಧರ್ಮವೂ ನಿರ್ದಯತೆಯನ್ನು ಬೋಧಿಸುವುದಿಲ್ಲ. ಅಕಸ್ಮಾತ್ ಅಂಥ ಯಾವುದಾದರೂ ಧರ್ಮಿವಿದ್ದರೆ ಅದು ಪರಮಾತ್ಮನಿಗೆ ಒಪ್ಪಿಗೆಯಾದ ಧರ್ಮವೇ ಅಲ್ಲ. ಬಸವಣ್ಣ ನವರು ಪ್ರಯೋಗಶೀಲ, ಚಲನಶೀಲ, ಲೋಕದ ಡೊಂಕ ತಿದ್ದಲು ಹೊರಡುವ ಜನನಾಯಕನ ಧಾಟಿಯಲ್ಲಿ ಅವನ ವಚನ ಇರುವುದಿಲ್ಲ. ಅಲ್ಲಿ ಸಂತನ ನಮ್ರತೆಯಿದೆ, ಸಿದ್ಧಾಂತದ ಭಾರಕ್ಕೆ ಬದಲಾಗಿ ಜೀವನ ಪ್ರೇಮದ ಹೂ ಹಗುರತೆಯಿದೆ. ಆತ ಲೋಕವನ್ನು ತಿದ್ದುವ ಮುನ್ನ ತಮ್ಮ ತಮ್ಮ ಅಂತರಂಗವನ್ನು ತಿದ್ದಿಕೊಳ್ಳುವ ಕುರಿತು ಹೇಳುತ್ತಾರೆ.

ಶರಣರು ಭಾವನೆಗಳನ್ನು ಕಲಾತ್ಮಕ ಗೊಳಿಸಲು ಹೊರಟ ಕವಿಗಳಲ್ಲ; ಬದುಕನ್ನು ಕಲಾತ್ಮಕಗೊಳಿಸಲು ಹೋರಾಡಿದ ಸಂತರು. ಒಂದು ಸಾಹಿತ್ಯಕೃತಿಯ ಅಧ್ಯಯನವೆಂಬುದು ಅಲ್ಲಿ ಹುದುಗಿರುವ ವ್ಯಕ್ತಿಶೋಧ, ಸಮಾಜಶೋಧ, ಮೌಲ್ಯಾದರ್ಶ ಶೋಧ ಮತ್ತು ಸೌಂದರ್ಯ ಶೋಧವಾಗಿದೆ.ಈ ನಾಲ್ಕೂ ನೆಲೆಗಳ ಅಧ್ಯಯನಕ್ಕೆ ವಸ್ತುವಾಗುವ ಶಕ್ತಿ ಬಸವಣ್ಣನವರ ವಚನಗಳಲ್ಲಿದೆ. ವಚನ ಸಾಹಿತ್ಯದಲ್ಲಿ ಪ್ರಾಸ -ಛಂದಸ್ಸುಗಳಿಗೆ ಪ್ರಾಮುಖ್ಯ ಅಲ್ಲ. ಅನುಭವ ಅನುಭಾವಗಳೇ ಇಲ್ಲಿ ಮುಖ್ಯ. ಪದ ಸೌಂದರ್ಯಕ್ಕಿಂತ ಭಕ್ತಿ-ಭಾವದ ಆವಿ ರ್ಭಾವವೇ ಅಗತ್ಯ. ಅವರ ವಚನಗಳು ಕುಸುಮದ ಕುಡಿಗಳು, ವೈಚಾರಿಕ ವಜ್ರದ ಕಿಡಿಗಳು. ಈ ಎಲ್ಲ ಚಿಂತನೆಗಳ ಹಿಂದೆ ಸ್ಥಾವರಕ್ಕಿಳಿವುಂಟು, ಜಂಗಮಕ್ಕಳಿವಿಲ್ಲ ಎಂಬ ಸಿದ್ಧಾಂತ ಸದಾ ಸ್ಪಂದಿಸುತ್ತಿರುತ್ತದೆ. ಈ ತತ್ವದ ಮೇರೆಗೆ ಬಸವಣ್ಣನವರ ವಚನ; ಆಶಯದಲ್ಲಿರುವಂತೆ ಆಕೃತಿಯಲ್ಲಿಯೂ ಜಂಗಮ ತತ್ವವನ್ನು ಪಡೆಯಿತು. ಹೀಗಾಗಿ ಅವರ ವಚನಗಳದು ತುಂಬಾ ಸರಳ ಶಿಲ್ಪ. ಸರಳವೆಂದರೂ ಅಲ್ಲಿ ಸಂಕೀರ್ಣತೆಯಿದೆ. ವಾಚ್ಯವೆಂದರೂ ಅಲ್ಲಿ ಧ್ವನಿಯಿದೆ. ಏನು ಹೇಳಬೇಕೆಂಬ ಆಶಯ ಉತ್ಕಟವಾದಾಗ ಹೇಗೆ ಹೇಳಬೇಕೆಂಬ ಆಕೃತಿ ತಾನಾಗಿಯೇ ಅಚ್ಚು ಕಟ್ಟುತನ ಪಡೆಯುತ್ತದೆ. ಈ ಆಕೃತಿ ಸೌಂದರ್ಯಕ್ಕೆ ಮಾದರಿಯಾಗಿದೆ ಬಸವಣ್ಣನವರ ಬರವಣಿಗೆ.

Facebook Comments

Sri Raghav

Admin