ರಾಯಚೂರು ರ್ಯಾಲಿ ಮೂಲಕ ಚುನಾವಣೆಗೆ ಮೋದಿ ರಣಕಹಳೆ

ಈ ಸುದ್ದಿಯನ್ನು ಶೇರ್ ಮಾಡಿ

Modi--02

ಬೆಂಗಳೂರು, ಏ.17-ಬಿಜೆಪಿ ಕಾರ್ಯಕರ್ತರು ಸೇರಿದಂತೆ ಕರ್ನಾಟಕದ ಜನತೆ ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೇ 29 ರಂದು ಹೈದರಾಬಾದ್ ಕರ್ನಾಟಕದ ರಾಯಚೂರಿನಲ್ಲಿ ಬಿಜೆಪಿ ಪರ ಪ್ರಚಾರ ನಡೆಸುವ ಮೂಲಕ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ. ಹೈದರಾಬಾದ್ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಹೆಗ್ಗುರಿಯೊಂದಿಗೆ ಬಿಜೆಪಿ ಇದೇ 29 ರಂದು ರಾಯಚೂರಿನಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ಏರ್ಪಡಿಸಿದ್ದು, ಅಂದು ಮೋದಿಯವರು ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ರಾಜ್ಯಕ್ಕೆ ಮೋದಿಯವರು ಆಗಮಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಬೆಂಗಳೂರು, ಮೈಸೂರು ಹಾಗೂ ದಾವಣಗೆರೆಯಲ್ಲಿ ಪ್ರಚಾರ ನಡೆಸಿದ್ದರು.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ರಾಜ್ಯದಲ್ಲಿ ಅನೇಕ ಬಾರಿ ಬಂದು ಪ್ರಚಾರ ನಡೆಸಿದರೂ ಮೋದಿ ಮಾತ್ರ ರಾಜ್ಯದತ್ತ ಸುಳಿದಿರಲಿಲ್ಲ. ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ವಲಯದಲ್ಲೂ ಮೋದಿ ಆಗಮಿಸದಿರುವುದು ಚರ್ಚೆಗೆ ಕಾರಣವಾಗಿತ್ತು. ಇದೇ 24 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, 29 ರಿಂದ ಬಿಜೆಪಿ ಕಾಂಗ್ರೆಸ್ ಮುಕ್ತ ಕರ್ನಾಟಕ ಘೋಷಣೆಯೊಂದಿಗೆ ರಾಯಚೂರಿನಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ಏರ್ಪಡಿಸಿದೆ.

ಮತದಾನ ನಡೆಯುವುದಕ್ಕೂ ಮುನ್ನ ಅಂದರೆ ಮೇ 10ರವರೆಗೆ ರಾಜ್ಯದಲ್ಲಿ 20 ರ್ಯಾಲಿಗಳನ್ನು ನಡೆಸಲಿರುವ ಮೋದಿ ಕೆಲವು ಕಡೆ ರೋಡ್‍ಶೋ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಇನ್ನು ಜಿಲ್ಲಾಧಿಕಾರಿಗಳಿಂದ ಅನುಮತಿ ದೊರೆತಿಲ್ಲ. ಮೋದಿಯವರಿಗೆ ಕೆಲವು ಸಂಘಟನೆಗಳಿಂದ ಪ್ರಾಣಬೆದರಿಕೆ ಇರುವ ಹಿನ್ನೆಲೆಯಲ್ಲಿ ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ.

ಎಲ್ಲೆಲ್ಲಿ ಪ್ರಚಾರ:
29 ರಂದು ರಾಯಚೂರಿನ ಸಭೆ ಬಳಿಕ ಮೇ 1 ರಂದು ಗಣಿ ಜಿಲ್ಲೆ ಬಳ್ಳಾರಿ ಹಾಗೂ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎರಡು ಸಭೆಗಳನ್ನು ನಡೆಸಲಿದ್ದಾರೆ. ಮೇ 3 ರಂದು ಚಾಮರಾಜನಗರ ಹಾಗೂ ಕರಾವಳಿ ತೀರ ಪ್ರದೇಶದ ಜಿಲ್ಲೆ ಉಡುಪಿಯಲ್ಲಿ ಬಿಜೆಪಿ ಪರ ಮತ ಯಾಚನೆ ಮಾಡುವರು. ಮೇ 5 ರಂದು ಕಲಬುರಗಿ, ಹುಬ್ಬಳ್ಳಿ, 6ರಂದು ಶಿವಮೊಗ್ಗ, ತುಮಕೂರು, 7 ರಂದು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿಯವರು ಇನ್ನು ಕೆಲವು ಕಡೆ ಪಾಲ್ಗೊಳ್ಳಬೇಕೆಂದು ಜಿಲ್ಲಾ ಘಟಕದ ವತಿಯಿಂದ ಬೇಡಿಕೆ ಬಂದಿದೆ. ವಿಶೇಷವಾಗಿ ಹೈದರಾಬಾದ್-ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಜಿಲ್ಲೆ ಸೇರಿದಂತೆ ಮತ್ತಿತರೆಡೆಯು ಬೇಡಿಕೆ ಹೆಚ್ಚಾಗಿದೆ.

ಪ್ರಧಾನಿಯವರು ಕೆಲವು ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೇ ಬೇಕಾಗಿರುವುದರಿಂದ ರಾಜ್ಯದಲ್ಲಿ 20 ಸಭೆ, ಸಮಾರಂಭಗಳಲ್ಲಿ ಭಾಗವಹಿಸಲು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಬಿಜೆಪಿಯ ತಾರಾ ಪ್ರಚಾರಕರೆನಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜಸ್ತಾನ ವಸುಂಧರಾ ರಾಜೇ, ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್, ಮಧ್ಯ ಪ್ರದೇಶದ ಶಿವರಾಜ್‍ಸಿಂಗ್ ಚೌಹಾಣ್, ಗೋವಾದ ಮನೋಹರ್ ಪಾರಿಕ್ಕರ್, ಛತ್ತೀಸ್‍ಗಡದ ಡಾ.ರಮಣ್‍ಸಿಂಗ್, ಕೇಂದ್ರ ಸಚಿವರಾದ ರಾಜ್‍ನಾಥ್‍ಸಿಂಗ್, ಸುಷ್ಮಾಸ್ವರಾಜ್, ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್, ನಿರ್ಮಲಾ ಸೀತಾರಾಮನ್, ಉಮಾಭಾರತಿ, ಸ್ಮೃತಿ ಇರಾನಿ, ಸಂಸದರಾದ ಹೇಮಮಾಲಿನಿ ಸೇರಿದಂತೆ ಘಟಾನುಘಟಿ ನಾಯಕರು ಕರ್ನಾಟಕಕ್ಕೆ ದಾಂಗುಡಿ ಇಡಲಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin