ಚುನಾವಣೆ ಸಂದರ್ಭದಲ್ಲೇ ಬೆಳಗಾವಿಯಲ್ಲಿ 7 ಕೋಟಿ ರೂ. ಖೋಟಾ ನೋಟು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Black-Money--01

ಬೆಳಗಾವಿ, ಏ.18- ಚುನಾವಣೆ ವೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿದ್ದರೆನ್ನಲಾದ 7 ಕೋಟಿ ರೂ.ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದು ಆರೋಪಿಯೊಬ್ಬನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಮೂಲದ ಅಜಿತ್ ನಿಡೋಣಿ(35) ಬಂಧಿತ ಆರೋಪಿ.  ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವೇಶ್ವರಯ್ಯ ನಗರದ ಪಿಡಬ್ಲ್ಯುಡಿ ಖಾಲಿ ಇದ್ದ ವಸತಿ ಗೃಹದಲ್ಲಿ 500 ರೂ. ಮುಖಬೆಲೆಯ 263 ಬಂಡಲ್, 2000 ರೂ. ಮುಖಬೆಲೆಯ 296 ಬಂಡಲ್ ನಕಲಿ ನೋಟುಗಳು ಪತ್ತೆಯಾಗಿವೆ. ಖಾಲಿ ಇರುವ ಪಿಡಬ್ಲ್ಯುಡಿ ವಸತಿ ಗೃಹಕ್ಕೆ ಕಾರೊಂದು ಆಗಾಗ್ಗೆ ಬಂದು ಹೋಗುತ್ತಿತ್ತು. ಇದರಿಂದ ಅನುಮಾನಪಟ್ಟ ಸಾರ್ವಜನಿಕರು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಜಾಡು ಹಿಡಿದ ಪೊಲೀಸರು ದಾಳಿ ನಡೆಸಿದಾಗ ಇಷ್ಟು ದೊಡ್ಡ ಪ್ರಮಾಣದ ನಕಲಿ ನೋಟುಗಳು ಪತ್ತೆಯಾಗಿವೆ.

ಆರೋಪಿಯನ್ನು ವಶಪಡಿಸಿಕೊಂಡಿರುವ ಬೆಳಗಾವಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.  ಈ ನಕಲಿ ನೋಟುಗಳು ಎಲ್ಲಿಂದ ಬಂತು, ಯಾವುದಕ್ಕೆ ಬಳಸಲು ಇವುಗಳನ್ನು ತಯಾರು ಮಾಡಲಾಗುತ್ತಿತ್ತು. ಇವು ಖೋಟಾ ನೋಟುಗಳೇ, ಚುನಾವಣೆ ಸಂದರ್ಭದಲ್ಲಿ ಅಸಲಿ ನೋಟುಗಳ ಜೊತೆ ಇವುಗಳನ್ನು ಚಲಾವಣೆ ಮಾಡುವ ಸಂಚು ರೂಪಿಸಲಾಗುತ್ತಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಬೆಳಗಾವಿ ಪೊಲೀಸ್ ಆಯುಕ್ತ ಡಿ.ಸಿ.ರಾಜಪ್ಪ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin