ಟಿಕೆಟ್ ಕೈತಪ್ಪಲು ಯಡಿಯೂರಪ್ಪ, ಶೋಭಾ ಕಾರಣ : ಗೋಪಾಲಕೃಷ್ಣ ಬೇಳೂರು ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Beluru-Gopalakrishna--01

ಬೆಂಗಳೂರು,ಏ.19-ನನಗೆ ಸಾಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ನೇರ ಕಾರಣ. ನಾನು ಈ ಬಾರಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ ಎಂದು ಮಾಜಿ ಶಾಸಕ ಗೋಪಾಲ ಕೃಷ್ಣ ಬೇಳೂರು ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರದಲ್ಲಿ ನನಗೆ ಟಿಕೆಟ್ ನೀಡಬೇಕೆಂದು ಸಮೀಕ್ಷೆ ಶಿಫಾರಸು ಮಾಡಿತ್ತು. ಆದರೆ ಯಡಿಯೂರಪ್ಪ , ಸಂಸದೆ ಶೋಭಾ ಕರಂದ್ಲಾಜೆ ಟಿಕೆಟ್ ತಪ್ಪಿಸಿದ್ದಾರೆ. ಇದರಿಂದ ನನಗೆ ತೀವ್ರ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಗರದಿಂದ ಸ್ಪರ್ಧಿಸುವಂತೆ ಜೆಡಿಎಸ್ ಸೇರಿದಂತೆ ಮತ್ತಿತರ ಪ್ರಮುಖ ಪಕ್ಷಗಳಿಂದ ಆಹ್ವಾನ ಬಂದಿದೆ. ಆದರೂ ನಾನು ಯಾವುದೇ ಪಕ್ಷಕ್ಕೂ ಸೇರದೆ ಬಂಡಾಯ ಅಭ್ಯರ್ಥಿಯಾಗಿ ನನ್ನ ಶಕ್ತಿ ಏನೆಂಬುದನ್ನು ತೋರಿಸುತ್ತೇನೆ ಎಂದು ಗುಡುಗಿದರು. ಕಳೆದ ಐದು ವರ್ಷಗಳಿಂದ ಸಾಗರದಲ್ಲಿ ನಾನು ಪಕ್ಷವನ್ನು ಕಟ್ಟಿ ಸಂಘಟಿಸಿದೆ. ನನಗೆ ಟಿಕೆಟ್ ತಪ್ಪಿಸಿ ಭ್ರಷ್ಟಾಚಾರಿ ಒಬ್ಬನಿಗೆ ಟಿಕೆಟ್ ನೀಡಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಹರತಾಳ್ ಹಾಲಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಿಕಾರಿಪುರದಲ್ಲಿ ಒಬ್ಬ ಹೆಣ್ಣುಬಾಕ ಇದ್ದಾನೆ. ಅವನ ಸಿಡಿ ಹಾಲಪ್ಪನ ಬಳಿ ಇರಬಹುದು. ಸಾಗರದಿಂದ ಟಿಕೆಟ್ ಕೈ ತಪ್ಪಿದರೆ ಸಿಡಿ ಬಿಡುಗಡೆಯಾಗಬಹುದೆಂಬ ಭೀತಿಯಿಂದ ಟಿಕೆಟ್ ನೀಡಲಾಗಿದೆ. ಸಾಗರದಲ್ಲಿ ಹೇಗೆ ಗೆಲ್ಲುತ್ತಾರೆ ನಾನು ನೋಡುತ್ತೇನೆ ಎಂದು ಸವಾಲು ಹಾಕಿದರು. ಈ ಹಿಂದೆ ಯಡಿಯೂರಪ್ಪನವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದಾಗ ಅವರ ಜೊತೆ ನಾನು ಹೋಗಲಿಲ್ಲ ಎಂಬ ಕಾರಣಕ್ಕೆ ಟಿಕೆಟ್ ಕೈ ತಪ್ಪಿರಬಹುದು. ಕೆಜೆಪಿಯಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ. ಮೂಲಕ ಕಾರ್ಯಕರ್ತರನ್ನು ಕಡೆಗಣಿಸಿ ತಾವು ಹೇಳಿದಂತವರಿಗೆ ಟಿಕೆಟ್ ಕೊಡಲಾಗಿದೆ. ಯಡಿಯೂರಪ್ಪನವರಿಗೆ ನಮ್ಮ ಶಾಪ ಖಂಡಿತ ತಟ್ಟೇ ತಟ್ಟುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಐಟಿ ದಾಳಿ ನಡೆಯಲಿ:
ಸಂಸದೆ ಶೋಭಾ ಕರಂದ್ಲಾಜೆ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರೆ ಕೋಟಿಗಟ್ಟಲೇ ಹಣ ಸಿಗುತ್ತದೆ. ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿರುವ ಅವರು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಐಟಿ ಅಧಿಕಾರಿಗಳು ಅಲ್ಲಿ ಇಲ್ಲಿ ದಾಳಿ ನಡೆಸುವ ಬದಲು ಶೋಭಾ ಮೇಲೆ ಏಕೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು. ಸಾಗರದಲ್ಲಿ ನಾನು ಗೆದ್ದರೆ ಅವರ ಮಕ್ಕಳ ರಾಜಕೀಯ ಭವಿಷ್ಯಕ್ಕೆ ಅಡ್ಡಿಯಾಗಬಹುದೆಂಬ ಕಾರಣದಿಂದ ಟಿಕೆಟ್ ತಪ್ಪಿರಬಹುದು. ನನ್ನ ಜೊತೆ ಕಾರ್ಯಕರ್ತರ ದಂಡೇ ಇರುವುದರಿಂದ ಇದಕ್ಕೆ ಬೆದರುವುದಿಲ್ಲ. ಬಲಾಬಲ ನಡೆದೆ ಬಿಡಲಿ ಎಂದು ಘೋಷಿಸಿದರು.

ಸಾಗರದಲ್ಲಿ ಹಾಲಪ್ಪನನ್ನು ಸೋಲಿಸಬೇಕೆಂಬುದು ನಮ್ಮ ಏಕೈಕ ಗುರಿ. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಕ್ಷೇತ್ರದ ಜನತೆ ಯಾರನ್ನು ಕೈ ಹಿಡಿಯುತ್ತಾರೆ ಎಂಬುದನ್ನು ಫಲಿತಾಂಶ ನಿರ್ಧರಿಸುತ್ತದೆ ಎಂದು ಹೇಳಿದರು. ಶಿಕಾರಿಪುರದಲ್ಲಿ ಯಡಿಯೂರಪ್ಪನವರ ವಿರುದ್ದ ಲಿಂಗಾಯಿತ ಅಭ್ಯರ್ಥಿಗಳನ್ನು ಹಾಕದೆ ಕಾಂಗ್ರೆಸ್ ನಾಮಕಾವಸ್ಥೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಅಲ್ಲಿ ಲಿಂಗಾಯಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಯಾರ ಹಣೆಬರಹ ಏನು ಎಂಬುದು ಗೊತ್ತಾಗುತ್ತದೆ ಎಂದು ಪರೋಕ್ಷವಾಗಿ ಬಿಎಸ್‍ವೈ ವಿರುದ್ದ ವಾಗ್ದಾಳಿ ನಡೆಸಿದರು.

Facebook Comments

Sri Raghav

Admin