ಮತಗಳ ಬೇಟೆಗಿಂತ ಹೆಚ್ಚಾಯ್ತು ಮಠಗಳ ಭೇಟಿ..!

ಈ ಸುದ್ದಿಯನ್ನು ಶೇರ್ ಮಾಡಿ

Amit

– ಕೆ.ಎಸ್.ಜನಾರ್ಧನ್

ಬೆಂಗಳೂರು, ಏ.19- ಈ ಬಾರಿ ಚುನಾವಣೆಯಲ್ಲಿ ಮತಗಳ ಬೇಟೆಗಿಂತ ಮಠಗಳ ಬೇಟೆಯೇ ಹೆಚ್ಚಾಗಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತಾಧೀಶರ ಮನೆಗಳಿಗೆ ತೆರಳಬೇಕಿತ್ತು. ಆದರೆ ಈ ಬಾರಿ ಹೆಚ್ಚಾಗಿ ಮಠಾಧೀಶರ ಬೇಟೆಗೆ ತೆರಳಿದ್ದು ವಿಶೇಷವಾಗಿತ್ತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನ ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರು ರಾಜ್ಯದ ವಿವಿಧ ಮಠ ಮಂದಿರಗಳಿಗೆ ಪೈಪೋಟಿಯಂತೆ ಭೇಟಿ ನೀಡಿದ್ದು, ಆಶೀರ್ವಾದ ಪಡೆದಿದ್ದು, ತೀವ್ರ ಕುತೂಹಲ ಮೂಡಿಸಿತ್ತು. ಪ್ರತಿ ಚುನಾವಣೆಯಲ್ಲೂ ಮಠ-ಮಂದಿರಗಳಿಗೆ ಭೇಟಿ ನೀಡುವುದು ಸಾಮಾನ್ಯ. ಆದರೆ ಈ ಬಾರಿ ಮಠ-ಮಂದಿರಗಳಿಗೆ ಭೇಟಿ ನೀಡುವುದು ಸ್ವಲ್ಪ ಹೆಚ್ಚಾಗಿಯೇ ಕಂಡು ಬಂತು.

ಚುನಾವಣೆ ಘೋಷಣೆಗೂ ಮುನ್ನ ಪೈಪೋಟಿಗೆ ಬಿದ್ದವರಂತೆ ರಾಜಕೀಯ ನಾಯಕರು ಮಠಗಳಿಗೆ ಹೋಗುವುದು, ಸ್ವಾಮೀಜಿಗಳ ಆಶೀರ್ವಾದ ಪಡೆಯುವುದು ಸಾಮಾನ್ಯವಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಉಡುಪಿ ಶ್ರೀಕೃಷ್ಣ ಮಠ, ತುಮಕೂರು ಸಿದ್ದಗಂಗಾ ಮಠ, ಮೈಸೂರಿನ ಸುತ್ತೂರು ಮಠ, ಕನಕಗುರು ಪೀಠ, ಆದಿಚುಂಚನಗಿರಿ ಪೀಠ ಸೇರಿದಂತೆ ಬಹುತೇಕ ಎಲ್ಲ ಸಮುದಾಯದ ಮಠಗಳಿಗೆ ತೆರಳಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಅದೇ ರೀತಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಶೃಂಗೇರಿ ಶ್ರೀ ಶಾರದಾಪೀಠ, ಮಂಗಳೂರಿನ ಯೋಗಿನಾರಾಯಣ ದೇವಾಲಯ, ಕನಕಗುರು ಪೀಠ, ತುಮಕೂರಿನ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ಉತ್ತರ ಕರ್ನಾಟಕದ ಹಲವು ಮಠಗಳು ಮಂದಿರಗಳು, ಮಸೀದಿಗಳು, ದೇವಾಲಯಗಳಿಗೂ ಕೂಡ ಭೇಟಿ ನೀಡಿದರು. ಶ್ರೀಗಳ ಆಶೀರ್ವಾದ ಪಡೆದರು. ವಿವಿಧ ಸಂವಾದಗಳಲ್ಲೂ ಭಾಗವಹಿಸಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ಮುಖಂಡರೂ ಸಹ ಮಠ ಮಂದಿರಗಳಿಗೆ ಭೇಟಿ ನೀಡಿ ವಿವಿಧ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದ್ದು, ವಿಶೇಷವಾಗಿತ್ತು.

ಚುನಾವಣೆ ಈ ಸಂದರ್ಭದಲ್ಲಿ ರಾಜಕಾರಣಿಗಳು ಮಠ, ಮಂದಿರಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುವುದು ಸಾಮಾನ್ಯ. ಆದರೆ ಈ ಬಾರಿ ಚುನಾವಣೆಯಲ್ಲಿ ಹಲವು ಮಠಾಧೀಶರು ಬಹಿರಂಗವಾಗಿಯೇ ಕೆಲವು ರಾಜಕಾರಣಿಗಳ ಬೆಂಬಲಕ್ಕಿಳಿದಿರುವುದು ವಿಶೇಷ. ಕೆಲವು ಮಠಾಧೀಶರು ಬಹಿರಂಗ ಸಭೆ ನಡೆಸಿ ಇಂತಹದ್ದೇ ಪಕ್ಷಕ್ಕೆ ಮತ ಚಲಾಯಿಸಬೇಕು, ಇಂತಹ ಪಕ್ಷಕ್ಕೆ ಮತ ಚಲಾಯಿಸಬಾರದು ಎಂದು ಹೇಳಿಕೆ ನೀಡುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ. ಮತ್ತೆ ಹಲವು ಮಠಾಧೀಶರು ಚುನಾವಣಾ ರಾಜಕೀಯದ ಬಗ್ಗೆ ಮುನ್ನೆಲೆಗೆ ಬರುತ್ತಿದ್ದಾರೆ. ಚುನಾವಣೆಗೆ ನಿಲ್ಲಲು ಮುಂದಾಗುತ್ತಿದ್ದಾರೆ. ವಿವಿಧ ಪಕ್ಷಗಳಿಂದ ಕಣಕ್ಕಿಳಿಯುವ ಬೇಡಿಕೆ ಸಲ್ಲಿಸಿದ್ದಾರೆ. ಪಕ್ಷ ಟಿಕೆಟ್ ನೀಡದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಮತಾಧೀಶರ ಬೇಟೆಗಿಂತ ಮಠಾಧೀಶರ ಭೇಟಿಯೇ ಹೆಚ್ಚು ರಂಗು ಪಡೆದುಕೊಳ್ಳುತ್ತಿದೆ.

Facebook Comments

Sri Raghav

Admin