ಟಿಕೆಟ್ ಗಾಗಿ ಅನಂತಕುಮಾರ್ ಹೆಗಡೆ ಪಟ್ಟು, ಬೆಂಬಲಿಗರೊಂದಿಗೆ ರಹಸ್ಯ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Anant--kumar-Hegde--01
ಬೆಂಗಳೂರು,ಏ.20-ಸಂಸದೆ ಶೋಭಾ ಕರಂದ್ಲಾಜೆಗೆ ಯಶವಂಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವುದಾದರೆ ತಮಗೂ ಕೂಡ ಟಿಕೆಟ್ ಕೊಡಬೇಕೆಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಪಟ್ಟು ಹಿಡಿದಿದ್ದಾರೆ. ಕಳೆದ ರಾತ್ರಿ ತಮ್ಮ ಬೆಂಬಲಿಗರೊಂದಿಗೆ ರಹಸ್ಯ ಸಭೆ ನಡೆಸಿರುವ ಅನಂತಕುಮಾರ್ ಹೆಗಡೆ ಉತ್ತರ ಕನ್ನಡ ಜಿಲ್ಲೆ ಕುಮುಟಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ.

ಹೆಗಡೆ ಅವರ ಈ ಬೇಡಿಕೆ ಪಕ್ಷದ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಈಗಾಗಲೇ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ,ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮತ್ತಿತರರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಹಾಲಿ ಸಂಸದರ ಪೈಕಿ ಯಡಿಯೂರಪ್ಪ ಮತ್ತು ಶ್ರೀ ರಾಮುಲು ಅವರನ್ನು ಹೊರತುಪಡಿಸಿದರೆ ಯಾರೊಬ್ಬರೂ ಕಣಕ್ಕಿಳಿಯಬಾರದೆಂದು ಹೈಕಮಾಂಡ್ ಸೂಚಿಸಿತ್ತು.

ಆದರೆ ಬೆಂಗಳೂರಿನ ಯಶವಂತಪುರದಿಂದ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಕೊಪ್ಪಳದಿಂದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ನೀಡುವುದಾದರೆ ನನಗೂ ಕೂಡ ಟಿಕೆಟ್ ಕೊಡಲೆಬೇಕೆಂದು ಹೆಗಡೆ ಬಿಗಿಪಟ್ಟು ಹಿಡಿದಿದ್ದಾರೆ. ಇಂದು ಬಿಡುಗಡೆಯಾಗಲಿರುವ ಮೂರನೇ ಪಟ್ಟಿಯಲ್ಲಿ ಯಾರ್ಯಾರಿಗೆ ಟಿಕೆಟ್‍ಸಿಗಲಿದೆ ಎಂಬುದನ್ನು ಕುತೂಹಲಕ್ಕೆ ಎಡೆಮಾಡಿದೆ. ಯಾವುದೇ ಕ್ಷಣದಲ್ಲಿ ಮೂರನೇ ಪಟ್ಟಿ ಪ್ರಕಟವಾಗುವ ಸಂಭವವಿದ್ದು,ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸೇರಿದಂತೆ ಅನೇಕರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

ಬಿಜೆಪಿ ಸಂಭವನೀಯ ಮೂರನೆ ಪಟ್ಟಿ
ಕೂಡ್ಲಿಗಿ-ಎನ್.ವೈ.ಗೋಪಾಲಕೃಷ್ಣ, ಗಾಂಧಿನಗರ-ಸಪ್ತಗಿರಿ ಗೌಡ, ಮಧುಗಿರಿ- ಸುರಕ್ಷಾ ಮಂಜುನಾಥ್ (ಹುಲಿನಾಯ್ಕರ್‍ಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿದ್ದರೂ ಅವರು ಕಣಕ್ಕಿಳಿಯಲು ಹಿಂದೇಟು ಹಾಕಿದ್ದಾರೆ), ಸರ್ವಜ್ಞನಗರ- ಎಂ.ಎನ್.ರೆಡ್ಡಿ , ಗೌರಿಬಿದನೂರು- ಜೈಪಾಲ್‍ರೆಡ್ಡಿ , ನೆಲಮಂಗಲ-ನಾಗರಾಜು, ಯಶವಂತಪುರ- ಶೋಭಾ ಕರಂದ್ಲಾಜೆ, ಚಾಮರಾಜಪೇಟೆ- ಲಹರಿ ವೇಲು, ವರುಣಾ- ಬಿ.ವೈ.ವಿಜಯೇಂದ್ರ , ಅರಸೀಕೆರೆ- ಮರಿಸ್ವಾಮಿ, ವಿರಾಜಪೇಟೆ- ಕೆ.ಜಿ.ಬೋಪಯ್ಯ, ಕುಣಿಗಲ್- ಕೃಷ್ಣಕುಮಾರ್, ಹರಿಹರ-ಬಿ.ಪಿ.ಹರೀಶ್, ಉಡುಪಿ-ರಘುಪತಿ ಭಟ್, ಕೃಷ್ಣರಾಜ- ರಾಮದಾಸ್, ಚಾಮರಾಜ-ನಾಗೇಂದ್ರ, ಮಂಡ್ಯ- ಚಂದಗಾಲ್ ಶಿವಣ್ಣ, ಶ್ರೀರಂಗಪಟ್ಟಣ- ನಂಜುಂಡೇಗೌಡ, ಬಿಟಿಎಂ ಲೇ ಔಟ್- ಪ್ರಸಾದ್ ರೆಡ್ಡಿ , ಹಾವೇರಿ- ನೆಹರು ಓಲೇಕಾರ್, ಬಾದಾಮಿ – ವಿಜಯ ಸಂಕೇಶ್ವರ್, ರಾಣಿ ಬೆನ್ನೂರು- ಪಕ್ಷ ಸೇರ್ಪಡೆಯಾದರೆ ಆರ್.ಶಂಕರ್‍ಗೆ, ಕೆ.ಆರ್.ನಗರ-ಹೊಸಳ್ಳಿ ವೆಂಕಟೇಶ್- ಶ್ವೇತಾ ಗೋಪಾಲ್-ಮಿರ್ಲೆ ಶ್ರೀನಿವಾಸ್, ಬೇಲೂರು- ಪ್ರಕಾಶ್ ಅಥವಾ ರೇಣುಕುಮಾರ್, ಚಾಮುಂಡೇಶ್ವರಿ-ಹೇಮಂತ್‍ಕುಮಾರ್ ಅಥವಾ ಹಾರ್ನಹಳ್ಳಿ ಪುಟ್ಟಸ್ವಾಮಿ, ಪಾವಗಡ- ಬಲರಾಮ್.

Facebook Comments

Sri Raghav

Admin