ಕಳಂಕಿತರೇ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಕಾಮಿಡಿಯಾಗಿದೆ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--CM-Mysuru-01
ಬೆಂಗಳೂರು,ಏ.21- ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಬಿ.ಎಸ್.ಯಡಿಯೂರಪ್ಪ ಕಳಂಕಿತರಾದರೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿಯಷ್ಟು ಭ್ರಷ್ಟರು ಇಡೀ ಜಗತ್ತಿನಲ್ಲೇ ಇಲ್ಲ. ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದರ ಬಗ್ಗೆ ನಾವು ಅವರಿಂದ ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.

ನಾವು ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಸರ್ಕಾರವನ್ನು ಟಾರ್ಗೆಟ್ ಮಾಡಿಕೊಂಡು ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆಂಬ ಕಾರಣಕ್ಕೆ ಇಂತಹ ಆರೋಪ ಮಾಡಲಾಗುತ್ತಿದೆ ಎಂದು ದೂರಿದರು. ಬಿ.ಎಸ್.ಯಡಿಯೂರಪ್ಪ ಆದಿಯಾಗಿ ಪ್ರಧಾನಿ ಮೋದಿ, ಅಮಿತ್ ಷಾ ಎಲ್ಲರೂ ಸುಳ್ಳನ್ನೇ ಹೇಳುತ್ತಿದ್ದಾರೆ. ನಾಲ್ಕೂವರೆ ವರ್ಷ ಆಡಳಿತ ನಡೆಸಿದರೂ ಕೂಡ ಕೇಂದ್ರ ಸರ್ಕಾರ ಯಾವುದೇ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. ಹಾಗಾಗಿ ಸಣ್ಣಪುಟ್ಟ ಕ್ಷುಲ್ಲಕ ವಿಷಯಗಳನ್ನೆ ದೊಡ್ಡದು ಮಾಡಿಕೊಂಡು ಜನರನ್ನು ನಂಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಜನರನ್ನು ಮೂರ್ಖರನ್ನಾಗಿ ಮಾಡುತ್ತೇವೆ ಎಂದುಕೊಂಡಿದ್ದರೆ, ಅದು ಅವರ ಮೂರ್ಖತನವಾಗುತ್ತದೆ. ಜನರಿಗೆ ಎಲ್ಲವೂ ಗೊತ್ತಿದೆ ಅವರ ಸಾಧನೆಗಳೇನು, ಕೆಲಸಗಳೇನು ಎಂದು ತಿಳಿದಿರುವ ಅವರು ಎಲ್ಲಾ ನಿರ್ಧರಿಸುತ್ತಾರೆ ಎಂದರು. ಬಿಜೆಪಿ ಗೆಲ್ಲಲ್ಲ. ಆದರೂ ಇಲ್ಲಸಲ್ಲದ ಆರೋಪಗಳಲ್ಲೇ ಕಾಲ ಕಳೆಯುತ್ತಿವೆ. ಎಂದ ಅವರು, ಜೆಡಿಎಸ್ ಕೆಲವು ಜಿಲ್ಲೆಗಳಲ್ಲಷ್ಟೇ ಇದೆ. ಅವರು ಅತಂತ್ರ ವಿಧಾನಸಭೆಗಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ ಅವರ ಆಸೆಯೂ ಈಡೇರುವುದಿಲ್ಲ. ಜನ ನಮ್ಮ ಸರ್ಕಾರದ ಕೆಲಸವನ್ನು ಮೆಚ್ಚಿದ್ದಾರೆ. ನಮ್ಮನ್ನು ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Facebook Comments

Sri Raghav

Admin