ಕುರುಕ್ಷೇತ್ರವಾದ ಕ್ಷೇತ್ರಗಳು : ಕುಣಿಗಲ್ ಮತ್ತು ಸೊರಬದಲ್ಲಿ ಸಹೋದರರ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Kunigala-Brothers

ಬೆಂಗಳೂರು, ಏ.21-ಚುನಾವಣೆ ಎಂದರೇ ಹಾಗೆ. ಇಲ್ಲಿ ರಕ್ತಸಂಬಂಧಕ್ಕೆ ಬೆಲೆಯೇ ಇಲ್ಲ. ಅಪ್ಪ-ಮಗ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಮಾವ-ಅಳಿಯ ಯಾರೇ ಇರಲಿ ಎಲ್ಲವೂ ನಗಣ್ಯ. ಒಂದು ಸಲ ಅಖಾಡಕ್ಕಿಳಿದರೆ ಮುಗಿಯಿತು. ಎದುರಾಳಿಗಳು ಯಾರೇ ಇರಲಿ ಗೆಲ್ಲಲು ಏನು ಬೇಕೋ ಎಲ್ಲ ತಂತ್ರಗಳನ್ನು ರೂಪಿಸುತ್ತಾರೆ. ಈ ಹಿಂದೆ ನಡೆದಿರುವ ಅನೇಕ ಉಪಚುನಾವಣೆಗಳಲ್ಲಿ ಹೀಗೆ ಒಂದೇ ಕುಟುಂಬದವರು ಪರಸ್ಪರ ಸ್ಪರ್ಧಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು.

ಪ್ರಸ್ತುತ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನಸೆಳೆದಿರುವ ಕ್ಷೇತ್ರಗಳೆಂದರೆ ತುಮಕೂರು ಜಿಲ್ಲೆಯ ಕುಣಿಗಲ್ ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರಗಳು. ಈ ಎರಡೂ ಕ್ಷೇತ್ರಗಳಲ್ಲಿ ಅಣ್ಣ-ತಮ್ಮಂದಿರೇ ಸ್ಪರ್ಧಿಸುವ ಮೂಲಕ ಚುನಾವಣಾ ಕಾವು ರಂಗೇರುವಂತೆ ಮಾಡಿದ್ದಾರೆ. ಸಹೋದರರ ಸವಾಲಿನಿಂದಾಗಿ ಕುಣಿಗಲ್ ಮತ್ತು ಸೊರಬ ಕ್ಷೇತ್ರಗಳು ಎಲ್ಲರ ಗಮನವನ್ನು ತನ್ನತ್ತ ಕೇಂದ್ರೀಕರಿಸಿದೆ.

ಸೊರಬ:
ಶಿವಮೊಗ್ಗ ಜಿಲ್ಲೆ ಸೊರಬ ಕ್ಷೇತ್ರದಿಂದ ಈ ಬಾರಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಪುತ್ರರಾದ ಕುಮಾರ್‍ಬಂಗಾರಪ್ಪ(ಬಿಜೆಪಿ) ಹಾಗೂ ಮಧುಬಂಗಾರಪ್ಪ(ಜೆಡಿಎಸ್) ಸ್ಪರ್ಧಿಸಿದ್ದಾರೆ. ಈ ಹಿಂದೆಯೂ ಸೊರಬದಲ್ಲಿ ಪರಸ್ಪರ ಅಣ್ಣತಮ್ಮಂದಿರೇ ಮುಖಾಮುಖಿಯಾಗಿದ್ದರು. 2004ರಲ್ಲಿ ಕುಮಾರ ಬಂಗಾರಪ್ಪ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದರೆ, ಮಧು ಬಂಗಾರಪ್ಪ ಬಿಜೆಪಿಯಿಂದ ಸ್ಪರ್ಧಿಸಿದ್ದರು. 2008ರಲ್ಲಿ ಪುನಃ ಅಣ್ಣ-ತಮ್ಮ ಅಖಾಡಕ್ಕಿಳಿದಿದ್ದರು. ಮಧುಬಂಗಾರಪ್ಪ ಸಮಾಜವಾದಿ ಪಕ್ಷದಿಂದ , ಕುಮಾರ್‍ಬಂಗಾರಪ್ಪ ಕಾಂಗ್ರೆಸ್‍ನಿಂದ ಅದೃಷ್ಟ ಪರೀಕ್ಷಿಸಿದ್ದರು. ಆದರೆ ವಿಜಯ ಮಾಲೆ ಮಾತ್ರ ಬಿಜೆಪಿ ಅಭ್ಯರ್ಥಿಯಾಗಿದ್ದ ಹರತಾಳ್ ಹಾಲಪ್ಪಗೆ ಒಲಿದಿತ್ತು.

2013ರಲ್ಲೂ ಮೂರನೇ ಬಾರಿಗೆ ಮಧು ಮತ್ತು ಕುಮಾರ್‍ಬಂಗಾರಪ್ಪ ಮುಖಾಮುಖಿಯಾದರು. ಬಂಗಾರಪ್ಪನವರ ಸಾವಿನ ಅನುಕಂಪ, ಕುಟುಂಬದಲ್ಲಿ ಮೂಡಿದ್ದ ವೈಷಮ್ಯ ಮಧುಬಂಗಾರಪ್ಪನಿಗೆ ಗೆಲುವು ತಂದುಕೊಟ್ಟಿತ್ತು. ಇದೀಗ ನಾಲ್ಕನೇ ಬಾರಿಗೆ ಮತ್ತೆ ಅಣ್ಣತಮ್ಮಂದಿರೇ ತೊಡೆ ತಟ್ಟಿದ್ದಾರೆ. ಆದರೆ ಈವರೆಗೂ ಕಾಂಗ್ರೆಸ್‍ನಲ್ಲಿದ್ದ ಕುಮಾರ್ ಬಂಗಾರಪ್ಪ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಜೆಡಿಎಸ್ ಹುರಿಯಾಳಾಗಿ ಹಾಲಿ ಶಾಸಕ ಮಧುಬಂಗಾರಪ್ಪ ಎರಡನೇ ಬಾರಿಗೆ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ವಿಜಯಲಕ್ಷ್ಮಿ ಯಾರ ಕೊರಳಿಗೆ ಎಂಬುದು ಮೇ 15ರವರೆಗೆ ಕಾಯಬೇಕು.

ಕುಣಿಗಲ್:
ತುಮಕೂರು ಜಿಲ್ಲೆಯಲ್ಲಿದ್ದರೂ ಬಹುತೇಕ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಕುಣಿಗಲ್ ಕೂಡ ಸಹೋದರರ ಸವಾಲಿನಿಂದ ಮತ್ತೊಮ್ಮೆ ರಣಾಂಗಣ ಸಿದ್ದವಾಗಿದೆ.  ಕಳೆದ ಎರಡು ಚುನಾವಣೆಗಳಲ್ಲಿ ಅಣ್ಣ-ತಮ್ಮಂದಿರೇ ಸ್ಪರ್ಧಿಸುವ ಮೂಲಕ ಚುನಾವಣೆಯಲ್ಲಿ ರಕ್ತಸಂಬಂಧಕ್ಕೆ ಬೆಲೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದರು. ಈಗ ಪುನಃ ಕುಣಿಗಲ್ ಅಣ್ಣ-ತಮ್ಮಂದಿರ ಸ್ಫರ್ಧೆಯಿಂದ ಹೈವೋಲ್ಟೇಜ್ ಕ್ಷೇತ್ರ ಎನಿಸಿದೆ.   ಜೆಡಿಎಸ್‍ನಿಂದ ಹಾಲಿ ಶಾಸಕ ನಾಗರಾಜಯ್ಯ ಸ್ಪರ್ಧಿಸಿದರೆ ಬಿಜೆಪಿಯಿಂದ ಕೃಷ್ಣಕುಮಾರ್ 3ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಕ್ಷೇತ್ರದಿಂದ ಅಣ್ಣತಂದಿರ ಸ್ಫರ್ಧೆ ಮಾಡುತ್ತಿರುವುದು ಹೊಸತೇನಲ್ಲ.

ಕಳೆದ 2008ರ ವಿಧಾನಸಭೆ ಚುನಾವಣೆಯಿಂದಲೂ ಹೀಗೆ ಅಣ್ಣ-ತಮ್ಮಂದಿರೇ ಬದ್ದ ಜಗ್ಗಜಟ್ಟಿಗಳಂತೆ ತೊಡೆ ತಟ್ಟಿದ್ದಾರೆ. 2008ರ ಚುನಾವಣೆಯಲ್ಲಿ ಜೆಡಿಎಸ್‍ನಿಂದ ನಾಗರಾಜಯ್ಯ ಸ್ಪರ್ಧಿಸಿದ್ದರು. ಇದೇ ಪಕ್ಷದಿಂದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಕೃಷ್ಣಕುಮಾರ್ ಟಿಕೆಟ್ ಸಿಗದಿದ್ದರಿಂದ ಬಿಜೆಪಿಗೆ ಸೇರ್ಪಡೆಯಾಗಿ ಸ್ಪರ್ಧಿಸಿದ್ದರು. ಅಣ್ಣತಮ್ಮಂದಿರ ಒಡಕಿನ ಲಾಭ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಮಸ್ವಾಮಿ ಗೌಡಗೆ ವರವಾಗಿ ಪರಿಣಮಿಸಿತ್ತು.  2013ರಲ್ಲೂ ಪುನಃ ಕೃಷ್ಣಕುಮಾರ್ ಬಿಜೆಪಿಯಿಂದ, ನಾಗರಾಜಯ್ಯ ಜೆಡಿಎಸ್‍ನಿಂದ ಅಖಾಡಕ್ಕಿಳಿದರು. ಆದರೆ ಅದೃಷ್ಟ ಮಾತ್ರ ತೆನೆ ಹೊತ್ತ ಮಹಿಳೆಯ ಕೈ ಹಿಡಿಯಿತು. ಇದೀಗ ಮತ್ತೆ ಮೂರನೇ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕೃಷ್ಣಕುಮಾರ್ ಸ್ಪರ್ಧಿಸಿದ್ದರೆ ಯಥಾಪ್ರಕಾರ ಅವರ ಎದುರಾಳಿ ಸಹೋದರ, ಹಾಲಿ ಶಾಸಕ ನಾಗರಾಜಯ್ಯ. ಅಣ್ಣ-ತಮ್ಮಂದಿರ ಸ್ಫರ್ಧೆಯಲ್ಲಿ ಗೆಲುವು ಯಾರಿಗೆಂಬುದು ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿದೆ.

Facebook Comments

Sri Raghav

Admin