ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಶ್ರೀರಾಮುಲು ಚಾಲೆಂಜ್ ಸಾಧ್ಯತೆ..?

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-Ramulu

ಬೆಂಗಳೂರು,ಏ.21-ನಾಮಪತ್ರ ಸಲ್ಲಿಕೆಗೂ ಮುನ್ನವೇ ರಾಜ್ಯದ ಗಮನಸೆಳೆದಿರುವ ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರಕ್ಕೆ ಬಿಜೆಪಿಯಿಂದ ಕೊನೆ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದು ವೇಳೆ ಈ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿದ್ದೇಯಾದರೆ ಅವರ ವಿರುದ್ದ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ ಹಾಗೂ ಬಳ್ಳಾರಿ ಸಂಸದ ಶ್ರೀರಾಮುಲು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ.

ಚಾಮುಂಡೇಶ್ವರಿಯ ಜೊತೆಗೆ ಬಾದಾಮಿಯಿಂದ ಕಣಕ್ಕಿಳಿಯುತ್ತಿರುವ ಸಿಎಂ ಸಿದ್ದರಾಮಯ್ಯನವರಿಗೆ ಟಕ್ಕರ್ ನೀಡಲು ಶ್ರೀರಾಮುಲು ರೆಡಿಯಾಗಿದ್ದು ಬಾದಾಮಿಯಿಂದ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಲು ಸಜ್ಜಾಗಿದ್ದಾರೆ. ಬಾದಾಮಿಯಲ್ಲಿ ಹೆಚ್ಚು ಕುರುಬ ಮತಗಳಿದ್ದು ಅದರೊಟ್ಟಿಗೆ ಇಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಆ ಕಾರಣದಿಂದಾಗಿಯೇ ಕಾಂಗ್ರೆಸ್ ಸುಲಭವಾಗಿ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರದಿಂದ ಇವರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಪಕ್ಷದ ವರಿಷ್ಠರು ಬಯಸಿದರೆ ನಾನು ಬಾದಾಮಿ ಕ್ಷೇತ್ರದಿಂದಲೂ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ದ ಎಂದು ಶ್ರೀರಾಮುಲು ಈಗಾಗಲೇ ಘೋಷಿಸಿದ್ದಾರೆ.

ತಮ್ಮ ವಿರುದ್ಧ ವಿಧಾನಸಭೆಯಲ್ಲಿ ತೋಳು ತಟ್ಟಿ, ಬಳ್ಳಾರಿವರೆಗೂ ಕಾಲ್ನಡಿಗೆಯಲ್ಲಿ ಬಂದು ರೆಡ್ಡಿ ಸಾಮ್ರಾಜ್ಯವನ್ನು ನಿರ್ನಾಮ ಮಾಡಿ ತಮ್ಮ ಅಧಿಕಾರದಿಂದ ಇಲ್ಲಿಯವರೆವಿಗೂ ಬೀಗಿದ ಸಿದ್ದರಾಮಯ್ಯನವರಿಗೆ ನೇರವಾಗಿ ಟಕ್ಕರ್ ಕೊಡುವುದಕ್ಕೆ ಇದು ಸಕಾಲ ಎಂಬ ಕಾರಣಕ್ಕಾಗಿ ಬಿಜೆಪಿ ಹಾಗೂ ರೆಡ್ಡಿ ಸಹೋದರರು ಬಂದಿದ್ದಾರೆ. ಏಕೆಂದರೆ ಈ ಬಾರಿ ಚುನಾವಣೆಯಲ್ಲಿ ತಾವು ನೇರವಾಗಿ ಕಣಕ್ಕಿಳಿಯದಿದ್ದರೂ ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡುತ್ತಿರುವ ಗಾಲಿ ಜನಾರ್ದನರೆಡ್ಡಿ ಅವರು ತಮ್ಮ ಆಪ್ತ ಸ್ನೇಹಿತ ಶ್ರೀರಾಮುಲು ಅವರ ಮುಖೇನ ತಮ್ಮ ಜಿದ್ದನ್ನು ಸಾಧಿಸಲು ಈ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ.

ಏಕೆಂದರೆ ಸಿಎಂ ಚಾಮುಂಡೇಶ್ವರಿಯಿಂದ ಮಾತ್ರ ನಿಲ್ಲುವುದಾಗಿ ಹೇಳಿಕೊಂಡಿದ್ದ ಕಾರಣದಿಂದಾಗಿ ಶ್ರೀರಾಮುಲು ಅವರನ್ನು ಮೊಳಕಾಲ್ಮೂರಿನಿಂದ ನಿಲ್ಲಲು ಸೂಚನೆ ನೀಡಲಾಗಿತ್ತು. ಆದರೆ ಈಗ ಅವರು ಬಾದಾಮಿಯಿಂದಲೂ ನಿಲ್ಲುತ್ತಿರುವುದರಿಂದ ಅವರಿಗೆ ಸರಿಯಾದ ಪ್ರತಿ ಸ್ಪರ್ಧಿಯಾಗಿರುವುದೇ ಶ್ರೀರಾಮುಲು, ಹೈದರಾಬಾದ್ ಮತ್ತು ಉತ್ತರ ಕರ್ನಾಟಕದಲ್ಲಿ ತಮ್ಮದೇ ಪ್ರಭಾವ ಇಟ್ಟುಕೊಂಡಿದ್ದಾರೆ. ಇವರನ್ನು ಬಾದಾಮಿಯಿಂದ ಕಣಕ್ಕಿಳಿಸಿದರೆ ಸಿಎಂ ಸಿದ್ದರಾಮಯ್ಯನವರ ನಿದ್ದೆಗೆಡಿಸಬಹುದೆಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ಇನ್ನು ತಮ್ಮ ಪ್ರಭಾವವಿಲ್ಲದ, ಹೊಸ ಕ್ಷೇತ್ರವಾದ ಬಾದಾಮಿಗೆ ಸಿಎಂ ಬರುತ್ತಿರುವುದೇ ಅವರ ಸಮುದಾಯದ ಮತಗಳನ್ನು ನಂಬಿಕೊಂಡು ಮತ್ತು ಈ ಕ್ಷೇತ್ರದಲ್ಲಿ ಕಳೆದ 4 ಅವಧಿಯಲ್ಲಿ ಕಾಂಗ್ರೆಸ್ ಗೆದ್ದಿರುವ ಕಾರಣದಿಂದಾಗಿ. ಆದರೆ ಕ್ಷೇತ್ರ ಹೊಸದಾಗಿದ್ದರೂ ಗೆಲ್ಲುತ್ತೇನೆ ಎಂದುಕೊಂಡು ಸಿಎಂ ಅವರು ಹೋಗುತ್ತಿದ್ದರೆ ತಮ್ಮದೇ ಕಾರ್ಯತಂತ್ರ ಮೂಲಕ ಸಿದ್ದರಾಮಯ್ಯ ಅವರನ್ನು ಸೋಲಿಸವುದಕ್ಕಾಗಿ ರೆಡ್ಡಿ ಮತ್ತು ರಾಮುಲು ರಣತಂತ್ರ ಹೆಣೆದಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin