ಬಿಜೆಪಿಯಿಂದ ಬೆದರಿಕೆ ಹಿನ್ನೆಲೆಯಲ್ಲಿ ಬಾಡಿಗಾರ್ಡ್‍ಗಳನ್ನಿಟ್ಟುಕೊಂಡಿದ್ದೇನೆ : ಪ್ರಕಾಶ್ ರೈ

ಈ ಸುದ್ದಿಯನ್ನು ಶೇರ್ ಮಾಡಿ

Prakash-Rai-Raj

ಮೈಸೂರು, ಏ.21- ಬಿಜೆಪಿಯಿಂದ ನನಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ನನ್ನ ರಕ್ಷಣೆಗಾಗಿ ಬಾಡಿಗಾರ್ಡ್‍ಗಳನ್ನು ಇಟ್ಟುಕೊಂಡಿರುವುದಾಗಿ ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದ ದೇಶಕ್ಕೆ ದೊಡ್ಡ ರೋಗ. ಕೋಮುವಾದಿ ಶಕ್ತಿಗಳಿಂದ ಸಮಾಜಕ್ಕೆ ಹೆಚ್ಚು ತೊಂದರೆ ಇದೆ ಎಂದು ತಿಳಿಸಿದರು. ಕರ್ನಾಟಕದಲ್ಲಿನ ಕೋಮುವಾದಿ ರಾಜಕಾರಣಿಗಳು ಬೇಡ ಎಂದು ಹೇಳಿದ ಅವರು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಇನ್ನೂ ಬದಲಾಗಿಲ್ಲವಲ್ರೀ ಎಂದರು.

ಮೊನ್ನೆ ಅಪಘಾತವಾದ ಕೂಡಲೇ ಹೆಗಡೆ ಟ್ವಿಟ್ ಮಾಡಿ ನನ್ನ ಕೊಲೆಗೆ ಯತ್ನ ಎಂದು ತಿಳಿಸಿದ್ದರು. ಮರು ದಿನ ಪತ್ರಿಕಾಗೋಷ್ಠಿ ಕರೆದು ಈ ವಿಷಯ ತಿಳಿಸಲು ಮುಂದಾಗಿದ್ದರು. ಆದರೆ ಅಪಘಾತಕ್ಕೆ ಕಾರಣವಾದ ವ್ಯಕ್ತಿ ಬಿಜೆಪಿ ಕಾರ್ಯಕರ್ತ ಎಂಬುದು ತಿಳಿದ ಕೂಡಲೇ ಪತ್ರಿಕಾಗೋಷ್ಠಿಯನ್ನೇ ರದ್ದು ಮಾಡಿದರು ಎಂದು ಟೀಕಿಸಿದರು. ನಾನು ಪತ್ರಕರ್ತರನ್ನು ನಂಬುತ್ತೇನೆ. ನಾನು ಕಲಾವಿದ, ಕಲಾವಿದರು ಹಾಗೂ ಪತ್ರಕರ್ತರು ಸೇರಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಹುದು. ಈ ಮೂಲಕ ಭ್ರಷ್ಟ ರಾಜಕಾರಣಿಗಳನ್ನು ದೂರ ಮಾಡಬಹುದು. ಈ ಹಿನ್ನೆಲೆಯಲ್ಲಿ ನಾವು ಜಸ್ಟ್ ಆಸ್ಕಿಂಗ್ ಎಂಬ ಆಂದೋಲನ ಪ್ರಾರಂಭಿಸಿದ್ದೇವೆ. ಇದರಲ್ಲಿ ರಾಜ್ಯಾದ್ಯಂತ ಪ್ರಾಧ್ಯಾಪಕರು, ಉದ್ಯಮಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಸದಸ್ಯರಾಗಿದ್ದಾರೆ ಎಂದು ಹೇಳಿದರು. ಈ ಆಂದೋಲನದ ಮೂಲಕ ಪ್ರತಿಯೊಬ್ಬ ಜನರೂ ಪ್ರಶ್ನೆ ಮಾಡುವ ಜಾಗೃತಿ ಮೂಡಿಸುತ್ತೇವೆ ಎಂದು ತಿಳಿಸಿದರು.

ನಾನೊಬ್ಬ ಈಗ ಪ್ರಶ್ನೆ ಮಾಡುತ್ತಿದ್ದೇನೆ. ನನಗೆ ಕೋಮುವಾದದ ಪಟ್ಟಿ ಕಟ್ಟಿ ಪಾಕಿಸ್ತಾನಕ್ಕೆ ಹೋಗು ಎಂದು ಹೇಳುತ್ತಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕಾವೇರಿ ವಿಷಯ ಕುರಿತು ಮಾತನಾಡಿದ ಪ್ರಕಾಶ್ ರೈ ಕಾವೇರಿ ಒಡಲು ಬರಿದಾಗುತ್ತಿದೆ. ಇದಕ್ಕೇನು ಕಾರಣ ಎಂಬ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಒಂದೆಡೆ ಮರಳು ದಂಧೆ, ಇನ್ನೊಂದೆಡೆ ಹಲವು ಕೈಗಾರಿಕೆಗಳು ತಲೆ ಎತ್ತಿರುವುದು ಮತ್ತು ವಾಹನಗಳನ್ನು ತೊಳೆಯಲು ಕಾವೇರಿ ನೀರು ಬಳಸಲಾಗುತ್ತಿದೆ. ಇದರಿಂದಾಗಿ ನೀರಿಲ್ಲದಂತಾಗುತ್ತಿದೆ. ಇಂತಹ ಸಮಸ್ಯೆಗೆ ಮೊದಲು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮುದ್ರಕ್ಕೆ ಕಾವೇರಿ ಹರಿದು ವೇಸ್ಟ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಸರಿಯಲ್ಲ. ಇದು ಪ್ರಕೃತಿ ನಿಯಮ. ಅದನ್ಯಾಕೆ ಪ್ರಕೃತಿಯ ಸ್ವಾಭಾವಿಕ ಪ್ರಕ್ರಿಯೆ ಎಂದು ಯಾಕೆ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದರು. ಇದೇ ವೇಳೆ ರಜನೀಕಾಂತ್ ಮತ್ತು ಕಮಲಾಹಾಸನ್ ಕಾವೇರಿ ಕುರಿತು ವಿವಾದದ ಹೇಳಿಕೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ನೋ ಕಾಮೆಂಟ್ ಎಂದಷ್ಟೇ ಪ್ರಕಾಶ್ ರೈ ತಿಳಿಸಿದರು.

Facebook Comments

Sri Raghav

Admin