ಮದುವೆ ಊಟ ಸೇವಿಸಿ 250ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ತಿಪಟೂರು, ಏ.21- ಮದುವೆಯಲ್ಲಿ ಊಟ ಸೇವಿಸಿದ 24 ಗಂಟೆಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ತಾಲ್ಲೂಕಿನ ಬಜಗೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿದಂತಹ ಹಲವಾರು ಮಂದಿಗೆ ಊಟದಲ್ಲಿ ವ್ಯತ್ಯಾಸವಾದಂತಹ ಹಿನ್ನೆಲೆಯಲ್ಲಿ ತಡ ರಾತ್ರಿಯಿಂದ ವಾಂತಿ, ಬೇಧಿ, ಹೊಟ್ಟೆ ನೋವು, ಜ್ವರ, ಸುಸ್ತು ಸಂಭವಿಸಿದ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಜಗೂರು ಗ್ರಾಮದಲ್ಲಿ ಸ್ಥಳೀಯವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ 30ಕ್ಕೂ ಹೆಚ್ಚು ಸಿಬ್ಬಂದಿಗಳ ಕ್ಯಾಂಪ್ ಮಾಡಿಕೊಂಡು ಚಿಕಿತ್ಸೆ ನೀಡಿದರು. ಘಟನೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆಹಾರ ಮತ್ತು ಸ್ಥಳೀಯ ಪದಾರ್ಥಗಳನ್ನು ಪರೀಕ್ಷಿಸಲು ಕಳುಹಿಸಿ ಕೊಡಲಾಗಿದೆ. ಆಹಾರ ಅಥವಾ ನೀರಿನಿಂದಾಗಿ ಈ ರೀತಿಯ ತೊಂದರೆ ಕಾಣಿಸಿಕೊಂಡಿದ್ದು ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಸ್ವಸ್ಥಗೊಂಡವರೆಲ್ಲರೂ ಸುರಕ್ಷಿತವಾಗಿದ್ದು ಚಿಕಿತ್ಸೆಯ ನಂತರದಲ್ಲಿ ಗುಣಮುಖರಾಗುತ್ತಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದ್ದಾರೆ.