ವಿಶ್ವದ ಮುಂದೆ ಭಾರತ ತಲೆತಗ್ಗಿಸುವಂತೆ ಮಾಡಿದ ರೇಪಿಸ್ಟ್ ಗಳು..!

ಈ ಸುದ್ದಿಯನ್ನು ಶೇರ್ ಮಾಡಿ

CHild-Rape--01

ಇತ್ತೀಚಿನ ದಿನಗಳಲ್ಲಿ ಪ್ರತಿ ನಿತ್ಯವೂ ಮಾಧ್ಯಮದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಸುದ್ದಿ ತೀರಾ ಸಾಮಾನ್ಯವಾಗಿದೆ. ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ, ರೇಪ್, ಸಾಮೂಹಿಕ ಅತ್ಯಾಚಾರ ಹಾಗೂ ಮಕ್ಕಳ ಮೇಲಿನ ದುರಾಚಾರ ಈಗ ವಿಕೃತ ಪಿಡುಗಾಗಿ ಪರಿಣಮಿಸಿದೆ. ಕರ್ನಾಟಕದಲ್ಲಂತೂ ರೇಪ್ ಎಂಬುದು ಅತ್ಯಂತ ಸಾಮಾನ್ಯ ಸಂಗತಿ ಎನ್ನುವಷ್ಟು ಪ್ರಕರಣಗಳು ವರದಿಯಾಗುತ್ತಲೇ ಇವೆ.  ದೇಶದಲ್ಲಿ ಇತ್ತೀಚೆಗೆ ಮಕ್ಕಳ ಮೇಲೆ ಅತ್ಯಾಚಾರ ಮತ್ತು ಕಗ್ಗೊಲೆಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಕತುವಾ, ಉನ್ನಾವೋ, ಸೂರತ್, ಲಕ್ನೋ, ಕಬೀರ್‍ಧಾಮ್, ಇಂದೋರ್‍ಗಳಲ್ಲಿ ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಭಾರತಕ್ಕೆ ಕಳಂಕ ತಟ್ಟಿದೆ. ದೇಶದ ವಿವಿಧ ಜಿಲ್ಲೆಗಳಲ್ಲಿ ಪದೇ ಪದೇ ವಿಕೃತ ಮತ್ತು ಹೀನಾಯ ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದು ದೇಶದ ಜನ ತಲೆ ತಗ್ಗಿಸುವಂತಾಗಿದೆ.

ಅತ್ಯಾಚಾರ ಎಂಬುದು ಮನುಷ್ಯನ ವಿಕೃತಿಯ ಪಿಡುಗಾಗಿರುವುದು ದುರಂತ. ಜಾತಿ, ಜನಾಂಗ, ವರ್ಗ, ಪ್ರದೇಶ, ವಯಸ್ಸು, ಸಂಬಂಧ ಎಲ್ಲ ಬಗೆಯ ವ್ಯಾಪ್ತಿಯನ್ನು ಮೀರಿ ಈ ರೀತಿಯ ಹೇಯಕೃತ್ಯ ನಡೆಯುತ್ತಿದೆ. ಶಾಲೆ, ಕಾಲೇಜು, ಯೂನಿವರ್ಸಿಟಿ ಕ್ಯಾಂಪಸ್, ಕಾರ್ಯಸ್ಥಳ, ಗದ್ದೆ, ಹೊಲ, ಬಯಲು, ಪಾಳು ಬಿದ್ದ ಕಟ್ಟಡ, ಮಿಲ್, ಕೈಗಾರಿಕಾ ಪ್ರದೇಶ, ರೈಲು ಬೋಗಿ, ಬಸ್, ಶೌಚಾಲಯ, ನಿರಾಶ್ರಿತರ ತಾಣ, ಕ್ಲಬ್, ಬಾರ್-ಹೀಗೆ ಎಲ್ಲೆಂದರಲ್ಲಿ ನಡೆಯುವ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಮನುಷ್ಯನಲ್ಲಿ ಅಂತರ್ಗತವಾಗಿರುವ ಮೃಗೀಯತನಕ್ಕೆ ಸಾಕ್ಷಿಯಂತಿದೆ.  ದೆಹಲಿಯಲ್ಲಿ ಬಸ್‍ನೊಳಗೆ ಯುವತಿ ಮೇಲೆ ನಡೆದ ಗ್ಯಾಂಗ್‍ರೇಪ್ ಮತ್ತು ಬರ್ಬರ ಕೊಲೆ ಪ್ರಕರಣವಂತೂ ಯಾರನ್ನೇ ಆಗಲಿ ಬೆಚ್ಚಿ ಬೀಳಿಸುವಂಥ ಅತಿ ಘೋರ ಘಟನೆ. ಮುಂಬೈನ ನಿರ್ಜನ ಶಕ್ತಿ ಮಿಲ್ಸ್ ಆವರಣದಲ್ಲಿ ಆಂಗ್ಲ ದಿನಪತ್ರಿಕೆಯ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಐವರಿಂದ ಸಾಮೂಹಿಕ ಅತ್ಯಾಚಾರ ಇನ್ನಷ್ಟು ಅತಂಕ ಸೃಷ್ಟಿಸಿತು.

ಉತ್ತರಪ್ರದೇಶದಲ್ಲಂತೂ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಮಾಮೂಲಿ ಸಂಗತಿ ಎನ್ನುವಷ್ಟು ಸಲೀಸಾಗಿರುವುದು ದುರಂತ ಇಂಥ ಅಮಾನುಷ ಕೃತ್ಯ ದಿನೇ ದಿನೇ ಹೆಚ್ಚುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ. ಅತ್ಯಾಚಾರಿಗಳಿಗೆ ಮಹಿಳೆಯ ವಯಸ್ಸು ಮುಖ್ಯವಲ್ಲ. ನವಜಾತ ಶಿಶುವಿನಿಂದ ಹಿಡಿದು ವೃದ್ದೆಯ ತನಕ ಯಾರಾದರೂ ಆದೀತು. ಇಂಥ ಕೃತ್ಯಗಳಲ್ಲಿ ತೊಡಗುತ್ತಿರುವವರಲ್ಲಿ ಹೆಚ್ಚಿನವರು ಹದಿ ಹರೆಯದವರು. 16 ವರ್ಷ ತುಂಬದವರೂ ರೇಪ್ ಮಾಡಿದ ಪ್ರಕರಣಗಳು, ಬಾಲಾಪರಾಧಿಗಳ ಕೃತ್ಯ ಘಟನೆಗಳು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಮಧ್ಯ ವಯಸ್ಕರು, 70 ವರ್ಷದ ಮುದುಕರೂ ಕೂಡ ಅತ್ಯಾಚಾರ ಕೃತ್ಯ ಎಸಗಿದ ನಿರ್ದಶನಗಳಿವೆ.

ಮನುಷ್ಯ ಪಶುವಿಗಿಂತ ಕಡೆಯಾಗಿದ್ದಾನೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳ ಮೇಲಷ್ಟೇ ಅಲ್ಲ ತಾವೇ ಹಡೆದ ಚಿಕ್ಕಮಕ್ಕಳ ಮೇಲೆ ಸುಶಿಕ್ಷಿತ ತಂದೆಯೇ ಅತ್ಯಾಚಾರ ಮಾಡುತ್ತಿರುವುದನ್ನು ಕೇಳಿದಾಗ ಇದಕ್ಕಿಂತ ಹೆಚ್ಚಿನ ನೈತಿಕ ಅಧ:ಪತನ ಇನ್ನಾವುದಾದರೂ ಇದೆಯೇ ಎನ್ನುವಂತಾಗಿದೆ.  ಮಹಿಳೆಯರ ಮೇಲೆ ನಡೆಯುವ ಲೈಂಗಿಕ, ದೈಹಿಕ ದಾಳಿ ಇದಾದರೂ ಮಾನಸಿಕವಾಗಿಯೂ ಅವರು ಸಂಪೂರ್ಣ ಕುಗ್ಗಿ ಹೋಗುವಂತೆ ಮಾಡುವ ಕಾಮುಕರು, ದುರುಳರಿಗೆ ಕಠಿಣ ಶಿಕ್ಷೆ ಆಗಲೇಬೇಕು. ರಾಜಧಾನಿ ದೆಹಲಿಯ ಬಸ್‍ನಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಮತ್ತು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಇಂಥ ಕಟ್ಟುನಿಟ್ಟಿನ ಕ್ರಮದ ಅನಿವಾರ್ಯತೆಯನ್ನು ತೋರಿಸಿದೆ.

ರೇಪ್‍ಗೆ ಕೊನೆ ಎಂದು ? : 
ಅತ್ಯಾಚಾರಕ್ಕೆ ಒಳಗಾಗಿ ನರಕ ಯಾತನೆ ಅನುಭವಿಸುವ ಹೆಣ್ಣು ಮಕ್ಕಳ ದೈಹಿಕ, ಮಾನಸಿಕ ಸ್ಥಿತಿ ತುಂಬಾ ಕೆಟ್ಟದಾಗಿರುತ್ತದೆ. ಆಕೆಯ ಶಿಕ್ಷಣ, ಉದ್ಯೋಗ, ಖಾಸಗಿ ವೈವಾಹಿಕ ಭವಿಷ್ಯ ಆತಂಕದಲ್ಲಿರುತ್ತದೆ. ಆಕೆಗೆ ಎಷ್ಟರ ಮಟ್ಟಿಗೆ ಮನೋ ವೈಜ್ಞಾನಿಕ ಸಲಹೆ, ಚಿಕಿತ್ಸೆ ಬೇಕಾಗುತ್ತದೆ ಎಂಬುದು ಆಪ್ತ ಸಮಾಲೋಚಕರು ನಿರ್ಧರಿಸಬೇಕು. ಇನ್ನು ಆಕೆಯ ಹೆತ್ತವರು ಅನುಭವಿಸುವ ಸಂಕಟ, ನೋವು ಮತ್ತು ಯಾತನೆ ಹೇಳತೀರದು.  ಜೊತೆಗೆ ತನ್ನದಲ್ಲದ ತಪ್ಪಿಗಾಗಿ ಆಕೆ ಸಮಾಜದಲ್ಲಿ ಅತ್ಯಾಚಾರಕ್ಕೆ ಒಳಗಾದವಳು ಎಂಬ ಹಣೆಪಟ್ಟಿ ಆಕೆಯ ಜೀವನದಲ್ಲಿ ಎಂದೂ ಅಳಿಸಲಾರದಂಥ ಕಪ್ಪು ಚುಕ್ಕೆಯಾಗುತ್ತದೆ. ಆಕೆ ಇದರಿಂದ ಎಷ್ಟು ಮಾನಸಿಕ ಹಿಂಸೆ ಅನುಭವಿಸುತ್ತಾಳೆ ಎಂಬುದು ಆ ನತದೃಷ್ಟೆಯರಿಗಷ್ಟೇ ಗೊತ್ತು.

ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ನಡೆದಿವೆ. ಅತ್ಯಾಚಾರ ಒಬ್ಬನಿಂದ ಆಗಲಿ ಅಥವಾ ಸಾಮೂಹಿಕವಾಗೇ ನಡೆದಿರಲಿ ಅದರಲ್ಲಿ ಪಾಲ್ಗೊಳ್ಳುವವರಲ್ಲಿ ಬಹುತೇಕರು ಸಾಮಾನ್ಯವಾಗಿ ಆ ಸಂತ್ರಸ್ತೆಗೆ ಪರಿಚಯದವರೇ ಆಗಿರುತ್ತಾರೆ. ಕೆಲವೊಮ್ಮೆ ಗುಂಪಿನ ಒಬ್ಬ ಹುಡುಗ ಅಥವಾ ಆ ಹುಡುಗಿ ಗೆಳತಿಯೇ ಇಂಥ ಹೀನ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಾರೆ. ತೀರಾ ಸಣ್ಣ ಕಾರಣಕ್ಕಾಗಿ ಹುಡುಗಿಯರ ಮೇಲೆ ಸೇಡು ತೀರಿಸಿಕೊಳ್ಳಲೂ ಅತ್ಯಾಚಾರ ನಡೆಯುವುದು ಇದೆ.

ಇಂಥ ಸ್ಥಿತಿಗೆ ಕಾರಣ ಏನು, ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದು ಈಗ ಸಮಾಜದ ಮುಂದೆ ಸವಾಲಾಗಿ ನಿಂತಿದೆ. ಪಾಶ್ಚಾತ್ಯ ಸಂಸ್ಕøತಿಯ ಪ್ರಭಾವ, ವೇಷ ಭೂಷಣ, ಆಹಾರ ಪದ್ಧತಿ, ಸಿನಿಮಾ ಮತ್ತು ಟಿವಿ ಸಂಸ್ಕøತಿ, ಬಿಂದಾಸ್ ಜೀವನ ಶೈಲಿ ಎಲ್ಲವೂ ಇಂಥ ಕೃತ್ಯಕ್ಕೆ ಕೊಡುಗೆ ನೀಡುತ್ತವೆ. ವಿಶ್ವದಾದ್ಯಂತ ಅತ್ಯಾಚಾರದ ಪಿಡುಗು ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ.  ಅತ್ಯಾಚಾರಿಗಳ ವಿರುದ್ದ ಕಠಿಣ ಕಾನೂನು ಕ್ರಮಗಳನ್ನು ಜರುಗಿಸದೇ ಇರುವುದು ರೇಪಿಸ್ಟ್‍ಗಳು ಸ್ವೇಚ್ಚೆಯಿಂದ ವರ್ತಿಸಲು ಮುಖ್ಯ ಕಾರಣ ಎನ್ನಬಹುದು. ಆದ್ದರಿಂದ ಇದನ್ನು ಅಪಮಾನ ಎಂದು ಭಾವಿಸದೇ ದೂರು ನೀಡಬೇಕು. ನಿಜಕ್ಕೂ ಅಪಮಾನಕಾರಿ ಕೃತ್ಯ ಎಸಗಿದ್ದು ಆ ಅತ್ಯಾಚಾರಿ. ಹೀಗಾಗಿ ಆ ಮೂಲಕವಾದರೂ ರೇಪಿಸ್ಟ್‍ನನ್ನು ಸಾರ್ವಜನಿಕವಾಗಿ ಅಪಮಾನ ಮಾಡಬೇಕು.

ಅತ್ಯಾಚಾರವನ್ನು ಹೇಗೆ ತಡೆಗಟ್ಟಬೇಕು, ಅತ್ಯಾಚಾರಿಗಳಿಗೆ ಎಂಥ ಶಿಕ್ಷೆ ನೀಡಬೇಕು ಎಂಬುದು ಸಮಾಜಕ್ಕೆ, ಕಾನೂನಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ, ಅಂತರ್ಜಾಲದ ಮೇಲೊಮ್ಮೆ ಕಣ್ಣಾಡಿಸಿ ನೋಡಿದರೆ, ಜನ ಹೇಗೆ ರೊಚ್ಚಿಗೆದ್ದಿದ್ದಾರೆ ಎಂಬುದು ತಿಳಿಯುತ್ತದೆ. ಗಲ್ಲು ಶಿಕ್ಷೆ ತೀರಾ ಸರಳ. ಆದ್ದರಿಂದ ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಅತ್ಯಂತ ಕಠಿಣ ಶಿಕ್ಷೆ ಸೂಕ್ತ ಎಂದು ಬಹುತೇಕ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸಾಧಾರಣವಾಗಿ ಇಂಥ ಕೃತ್ಯ ನಡೆದಾಗ ಸಮಾಜ ರೊಚ್ಚಿಗೇಳುತ್ತದೆ. ಕ್ರಮೇಣ ತಣ್ಣಗಾಗುತ್ತದೆ. ವಿಚಾರಣೆ ತಡವಾಗುತ್ತದೆ. ಇದರಿಂದಾಗಿ ಶಿಕ್ಷೆ ಅಪರಾಧಿಗಳ ಬಳಿ ಸುಳಿಯುವುದಿಲ್ಲ.
ಮುಂದೆ ಅತ್ಯಾಚಾರಿಗಳು ರಾಜಾರೋಷದಿಂದ ಓಡಾಡಿಕೊಂಡು ಇರುತ್ತಾರೆ. ಇಂಥ ಅತ್ಯಾಚಾರ ಪ್ರಕರಣಗಳು ಸಂತ್ರಸ್ತರ ಕುಟುಂಬಗಳಿಗೆ ಮಾತ್ರ ಕಪ್ಪು ಚುಕ್ಕೆ ಅಲ್ಲ. ಅದು ಈಗ ವಿಶ್ವದ ಕಣ್ಣಿನಲ್ಲಿ ಇಡೀ ಭಾರತ ದೇಶಕ್ಕೆ ದೊಡ್ಡ ಕಪ್ಪು ಚುಕ್ಕೆ. ಅತ್ಯಾಚಾರಿಗೆ ಏನು ಶಿಕ್ಷೆ ನೀಡಬೇಕು ಎಂದು ಚರ್ಚಿಸುವುದಕ್ಕಿಂತ ಅದಕ್ಕೆ ಆಸ್ಪದವೇ ನೀಡದಂತೆ ಅತ್ಯಾಚಾರ ನಡೆಯುವುದನ್ನು ತಡೆಗಟ್ಟುವುದೇ ಸೂಕ್ತ ಪರಿಹಾರ.

Facebook Comments

Sri Raghav

Admin