ಸ್ಪೆಷಲ್ ಟಿಟಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Siddaramaih--01

ಬೆಂಗಳೂರು, ಏ.22- ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನಿಂದಲೇ ಚುನಾವಣೆ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ವಿಶೇಷವಾಗಿ ನಿರ್ಮಿಸಲಾದ ಹವಾ ನಿಯಂತ್ರಿತ ಟೆಂಪೋ ಟ್ರಾವೆಲರ್‍ನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿದರು. ಈವರೆಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಟೆಂಪೋ ಟ್ರಾವೆಲರ್ ವಾಹನ ಹತ್ತಿದ್ದು, ತಮ್ಮೊಂದಿಗೆ ಸಚಿವರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಪ್ರಮುಖರನ್ನು ಮತ್ತು ಶಾಸಕರನ್ನು ಕರೆದೊಯ್ದಿದ್ದಾರೆ.

ಭೇಟಿಗೆ ಸಿಗದ ಅಂಬರೀಶ್:
ಕಾಂಗ್ರೆಸ್ ಬಿ ಫಾರಂನ್ನು ಮನೆ ಬಾಗಿಲಿಗೆ ತಲುಪಿಸಿದರೂ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಮುನಿಸಿಕೊಂಡಿರುವ ಅಂಬರೀಶ್ ಅವರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಿಸಿದರಾದರೂ ಅವರು ಕೈಗೆ ಸಿಗದೆ ಅಂಬರೀಶ್ ಮೈಸೂರಿನತ್ತ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಹೊರಟ ಸಿದ್ದರಾಮಯ್ಯ ಅವರು ಅಂಬರೀಶ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ವೇಳೆಗೆ ಅಂಬರೀಶ್ ಮನೆಯಲ್ಲಿಲ್ಲ ಎಂಬ ಸಂದೇಶ ಬಂದಿದ್ದರಿಂದ ಸಿದ್ದರಾಮಯ್ಯ ಟೆಂಪೋ ಟ್ರಾವೆಲರ್‍ನಲ್ಲಿ ಮೈಸೂರಿನತ್ತ ಪ್ರಯಾಣಿಸಿದರು.

ದಾರಿಯುದ್ದಕ್ಕೂ ಅಲ್ಲಲ್ಲಿ ಕಾರ್ಯಕರ್ತರೊಂದಿಗೆ ಸಿದ್ದರಾಮಯ್ಯ ಸಮಾಲೋಚನೆ ಮಾಡುತ್ತಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇಂದು ಮೊದಲು ಹೆಗ್ಗಡ ದೇವನಕೋಟೆಯಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ನಂತರ ಸ್ವಕ್ಷೇತ್ರ ಚಾಮುಂಡೇಶ್ವರಿಗೆ ಬಂದು ರೋಡ್‍ಶೋ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

Facebook Comments

Sri Raghav

Admin