ಬೆಳ್ಳಂಬೆಳಗ್ಗೆ ಸಚಿವ ಹೆಚ್.ಸಿ ಮಹದೇವಪ್ಪಗೆ ಐಟಿ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

Mahadevappa--IT

ಮೈಸೂರು, ಏ.24- ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‍ಗೆ ಐಟಿ ಇಲಾಖೆ ಶಾಕ್ ನೀಡಿದೆ. ಬೆಳ್ಳಂಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ವಿಜಯನಗರ, ಟಿ.ನರಸೀಪುರ ಹಾಗೂ ಬೆಂಗಳೂರಿನ ನಿವಾಸಗಳ ಮೇಲೆ ಏಕಾಏಕಿ ದಾಳಿ ನಡೆದಿದೆ. ಬೆಳಗ್ಗೆ 6.30ರ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಮೈಸೂರಿ ವಿಜಯನಗರದಲ್ಲಿರುವ ಮನೆಗೆ ದಿಢೀರ್ ದಾಳಿ ನಡೆಸಿ ಆದಾಯ, ಆಸ್ತಿ-ಪಾಸ್ತಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಅದೇ ರೀತಿ ಬೆಂಗಳೂರು ಮತ್ತು ಟಿ.ನರಸೀಪುರದಲ್ಲಿರುವ ನಿವಾಸಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಐಟಿ ಅಧಿಕಾರಿಗಳು ರಾಜ್ಯದ ಹಲವಾರು ಮುಖಂಡರ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಶಾಸಕ ಆನೇಕಲ್ ಶಿವಣ್ಣ ಹಾಗೂ ಚಿಕ್ಕಮಗಳೂರಿನ ಕೆಲ ಕಾಂಗ್ರೆಸ್ ಮುಖಂಡರುಗಳ ಮನೆಗಳ ಮೇಲೆ ದಾಳಿ ನಡೆದಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಲಗೈ ಬಂಟ ಎಂದೇ ಗುರುತಿಕೊಂಡಿರುವ ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಮನೆಗಳ ಮೇಲೂ ಚುನಾವಣೆ ಸಂದರ್ಭದಲ್ಲೇ ಐಟಿ ದಾಳಿ ನಡೆದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಮುಖಂಡರುಗಳ ಮೇಲೆ ಐಟಿ ಇಲಾಖೆಯನ್ನು ಛೂಬಿಟ್ಟಿದೆ. ಈಗಾಗಲೇ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆದಿದೆ. ನಾನು ಸೇರಿದಂತೆ ಕೆಲ ಪ್ರಭಾವಿ ಮುಖಂಡರುಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕಲಾಗುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Facebook Comments

Sri Raghav

Admin