ಬ್ಯಾಂಕ್‍ಗಳಿಗೆ 2,654 ಕೋಟಿ ರೂ. ವಂಚನೆ, ಡಿಪಿಐಎಸ್ 1,122 ಕೋಟಿ ರೂ. ಆಸ್ತಿ ಜಪ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Fraud--012
ನವದೆಹಲಿ, ಏ.24-ವಿವಿಧ ಬ್ಯಾಂಕುಗಳಿಗೆ 2,654 ಕೋಟಿ ರೂ.ಗಳ ವಂಚನೆ ಪ್ರಕರಣದ ಸಂಬಂಧ ಗುಜರಾತ್‍ನ ವಡೋದರಾ ಮೂಲದ ಡೈಮಂಡ್ ಪವರ್ ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್(ಡಿಪಿಐಎಲ್) ಸಂಸ್ಥೆಗೆ ಸೇರಿದ 1,122 ಕೋಟಿ ರೂ.ಗಳ ಆಸ್ತಿಗಳನ್ನು ಜಫ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ. ಪವನ ವಿದ್ಯುತ್ ಗಿರಣಿಗಳು, ನಿರ್ಮಾಣ ಹಂತದಲ್ಲಿದ್ದ ಹೋಟೆಲ್ ಸೇರಿದಂತೆ ಕಂಪನಿಯ ಒಟ್ಟು 1,122 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಸಿಬಿಐ ಈಗಾಗಲೇ ಡಿಪಿಐಎಲ್ ಮತ್ತು ಅದರ ಪ್ರವರ್ತಕರ ವಿರುದ್ಧ ಎಫ್‍ಐಆರ್‍ಗಳನ್ನು ದಾಖಲಿಸಿಕೊಂಡು ಕಳೆದ ತಿಂಗಳು ಸಂಸ್ಥೆಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಹಣ ದುರ್ಬಳಕೆ ನಿಯಂತ್ರಣ ಕಾಯ್ಡೆ(ಪಿಎಂಎಲ್‍ಎ) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದೆ. ಡಿಪಿಐಎಲ್‍ನ ಸಹೋದರಿ ಸಂಸ್ಥೆಗಳಾದ ಡೈಮಂಡ್ ಪವರ್ ಟ್ರಾನ್ಸ್‍ಫರ್ಮರ್ ಲಿಮಿಟೆಡ್, ಡೈಮಂಡ್ ಪ್ರಾಜೆಕ್ಸ್ಟ್ ಲಿಮಿಟೆಡ್, ಮೇಫೇರ್ ಲೀಜರ್ಸ್ ಹಾಗೂ ನಾರ್ಥ್‍ವೇ ಸ್ಪೆಸಸ್-ಇವುಗಳ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ವಡೋದರಾದಲ್ಲಿನ ಕೈಗಾರಿಕಾ ಘಟಕ, ಯಂತ್ರೋಪಕರಣ, ಕಟ್ಟಡ, ಭುಜ್‍ನಲ್ಲಿ ಮೂವರು ಗಾಳಿ ವಿದ್ಯುತ್ ಗಿರಣಿಗಳು, ಭಟ್ನಾಗರ್(ಪ್ರವರ್ತಕರ) ಕುಟುಂಬದ ಭವ್ಯ ಬಂಗಲೆಗಳು/ಫ್ಲಾಟ್‍ಗಳು ಹಾಗೂ ಮಾರಾಟವಾಗದಿರುವ ಫ್ಲಾಟ್‍ಗಳು, ಅಪಾರ್ಟ್‍ಮೆಂಟ್‍ಗಳು, ನಿರ್ಮಾಣ ಹಂತದಲ್ಲಿರುವ ಹೋಟೆಲ್ ಮತ್ತು ಇತರ ದೊಡ್ಡ ನಿವೇಶನಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ. ಎಸ್.ಎನ್.ಭಟ್ನಾಗರ್ ಹಾಗೂ ಅವರ ಮಕ್ಕಳಾದ ಅಮಿತ್ ಭಟ್ನಾಗರ್ ಮತ್ತು ಸುಮಿತ್ ಭಟ್ನಾಗರ್ ಒಡೆತನದ ಸಂಸ್ಥೆಗಳು, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ ಸೇರಿದಂತೆ ವಿವಿಧ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ 2,654 ಕೋಟಿ ರೂ.ಗಳ ಸಾಲ ಎತ್ತುವಳಿ ಮಾಡಿ ಮರುಪಾವತಿದೇ ವಂಚಿಸಿದೆ.

Facebook Comments

Sri Raghav

Admin