ವರುಣಾದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ವಿಜೇಯೇಂದ್ರ..? ಹೊಸ ಅಭ್ಯರ್ಥಿ ಯಾರು..?

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-Varuna--01

ಮೈಸೂರು, ಏ.24-ಹಲವು ನಾಟಕೀಯ ಬೆಳವಣಿಗೆಗಳನ್ನು ಕಂಡ ಮೈಸೂರಿನ ವರುಣ ಕ್ಷೇತ್ರದಿಂದ ಕೊನೆಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಕಳೆದ ರಾತ್ರಿಯಿಂದ ಇಂದು ಬೆಳಗ್ಗೆವರೆಗೆ ಮೈಸೂರಿನ ಖಾಸಗಿ ಹೊಟೇಲ್‍ನಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ವರುಣದಿಂದ ವಿಜಯೇಂದ್ರನನ್ನು ಕಣಕ್ಕಿಳಿಸಬಾರದೆಂಬ ಹೈಕಮಾಂಡ್ ನಿರ್ಧಾರಕ್ಕೆ ಬಿ.ಎಸ್.ಯಡಿಯೂರಪ್ಪ ಒಲ್ಲದ ಮನಸ್ಸಿನಿಂದಲೇ ಸಮ್ಮತಿಸಿದರು.

ರಾಜ್ಯ ಉಸ್ತುವಾರಿ ಮುರಳೀಧರ್‍ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ, ಮಾಜಿ ಸಚಿವ ಎಸ್.ಎ.ರಾಮದಾಸ್, ಮೈಸೂರು, ಚಾಮರಾಜನಗರ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳು ಭಾಗವಹಿಸಿದ್ದರು. ಇಂದು ಬೆಳಗ್ಗೆ ತಮ್ಮನ್ನು ಭೇಟಿಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ವರುಣ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸುತ್ತಿಲ್ಲ. ಕೆಲವೇ ಗಂಟೆಗಳಲ್ಲಿ ಬೇರೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುವುದು ಎಂದರು.

ವರುಣದಿಂದ ಯಾರೇ ಸ್ಪರ್ಧಿಸಿದರೂ ಅವರ ಪರ ವಿಜಯೇಂದ್ರ ಅವರು ಇಲ್ಲೇ ಇದ್ದು ಪ್ರಚಾರ ಮಾಡಲಿದ್ದಾರೆ. ಚುನಾವಣೆ ಮುಗಿಯುವವರೆಗೂ ಮೈಸೂರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಜೊತೆಗೂಡಿ ವಿಜಯೇಂದ್ರ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.  ರಾಷ್ಟ್ರೀಯ ಮುಖಂಡರಾ ಪ್ರಕಾಶ್ ಜಾವ್ಡೇಕರ್ ಮಾತನಾಡಿ, ವಿಜಯೇಂದ್ರ ಅವರಿಗೆ ಕರ್ನಾಟಕ ಪ್ರಾಂತದ ರಾಷ್ಟ್ರೀಯ ಯುವ ಪ್ರಧಾನಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಅವರು ಈ ಕ್ಷೇತ್ರದಲ್ಲೇ ಇದ್ದು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಾರೆ ಎಂದರು.

ಇದೇ ವೇಳೆ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಮಾಡಿ ಇವರು ಹೇಳುವುದನ್ನು ಗಮನಿಸಿದರೆ ಬಿಎಸ್‍ವೈ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ಏನೇ ಆಗಲಿ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು. ಯಡಿಯೂರಪ್ಪ ಹಾಗೂ ನಾವು ಚರ್ಚಿಸಿಯೇ ಈ ತೀರ್ಮಾನ ಕೈಗೊಂಡಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಇಲ್ಲ ಎಂದು ಸ್ಪಷ್ಟಪಡಿಸಿ ಅಲ್ಲಿಂದ ತೆರಳಿದರು.

Facebook Comments

Sri Raghav

Admin