ಶಸ್ತ್ರಾಸ್ತ್ರ ಬಳಕೆ, ಕೊಲೆ, ಕೊಲೆ ಯತ್ನ, ದರೋಡೆಯಲ್ಲಿ ಭಾಗಿಯಾಗಿದ್ದ ರೌಡಿ ಗೂಂಡಾ ಕಾಯ್ದೆಯಡಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Rowdy--01

ಬೆಂಗಳೂರು, ಏ.25-ಅಕ್ರಮ ಶಸ್ತ್ರಾಸ್ತ್ರ ಬಳಕೆ, ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶ್ರೇಯಸ್ ಅಲಿಯಾಸ್ ಮಾಗಡಿ ಎಂಬಾತನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಗೂಂಡಾಕಾಯ್ದೆಯಡಿ ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯದ ಅಂದಾನಪ್ಪ ಬಡಾವಣೆಯ ನಿವಾಸಿಯಾದ ರೌಡಿ ಶ್ರೇಯಶ್ ವಿರುದ್ಧ ಬಸವೇಶ್ವರನಗರ, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಒಂಭತ್ತು ಪ್ರಕರಣಗಳು ದಾಖಲಾಗಿವೆ. ಈತ ಕೊಲೆ, ಕೊಲೆ ಯತ್ನ, ದರೋಡೆ, ಅಕ್ರಮ ಶಸ್ತ್ರಾಸ್ತ್ರ ಬಳಕೆ, ಹಲ್ಲೆ ಪ್ರಕರಣಗಳು ಮತ್ತು ಅಕ್ರಮ ಕೂಟ ಸೇರಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡುವಂತಹ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.

ಈತನು ಅಪರಾಧವೆಸಗುವ ಪ್ರವೃತ್ತಿಯುಳ್ಳವನಾಗಿದ್ದು, ಸಮಾಜ ವಿದ್ರೋಹಿ ಮತ್ತು ಸಾರ್ವಜನಿಕರ ಸುವ್ಯವಸ್ಥೆಗೆ ಭಂಗ ತರುವ ಚಟುವಟಿಕೆಗಳಿಂದ ತಡೆಗಟ್ಟಬೇಕಾದರೆ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧನದಲ್ಲಿಡಲು ಅಪರ ಪೊಲೀಸ್ ಆಯುಕ್ತ (ಪಶ್ಚಿಮವಲಯ) ಬಿ.ಕೆ.ಸಿಂಗ್ ಮಾರ್ಗದರ್ಶ್ನದಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಪರಮೇಶ್ವರಹೆಗ್ಡೆ ಮತ್ತು ಕಾಮಾಕ್ಷಿಪಾಳ್ಯ ಠಾಣೆ ಇನ್ಸ್‍ಪೆಕ್ಟರ್ ರವಿಕುಮಾರ್ ಅವರು ಈತನ ವಿರುದ್ಧ ವರದಿ ತಯಾರಿಸಿದ್ದರು.

ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡಲು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಕಾಮಾಕ್ಷಿಪಾಳ್ಯ ಪೊಲೀಸರು ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ. ಪಶ್ಚಿಮ ವಿಭಾಗದಲ್ಲಿ ಕಳೆದ 2 ವಾರಗಳಲ್ಲಿ ಇದು ಗೂಂಡಾಕಾಯ್ದೆ ಅಡಿ ರೌಡಿ ಶೀಟರ್ ಅನ್ನು ಬಂಧಿಸಲಾದ 4ನೆ ಪ್ರಕರಣವಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿಶೀಟರ್‍ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಇನ್ನೂ ಮುಂದೆಯೂ ಸಹ ಇದೇ ರೀತಿ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲಾಗುವುದೆಂದು ಸೂಚಿಸಿರುತ್ತಾರೆ.

Facebook Comments

Sri Raghav

Admin